ಮುಂಬೈನಲ್ಲಿ ಪ್ರೊ ಕಬಡ್ಡಿ ಲೀಗ್‌ನ 12ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. 500 ಕ್ಕೂ ಹೆಚ್ಚು ಆಟಗಾರರು ಭಾಗವಹಿಸಲಿದ್ದು, 'ಎ' ವಿಭಾಗದ ಆಟಗಾರರಿಗೆ ₹30 ಲಕ್ಷ ಮೂಲಬೆಲೆ ನಿಗದಿಪಡಿಸಲಾಗಿದೆ.
ಮುಂಬೈ: 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆ ಶನಿವಾರ ಹಾಗೂ ಭಾನುವಾರ ಮುಂಬೈನಲ್ಲಿ ನಡೆಯಲಿದೆ. ದೇಶ-ವಿದೇಶದ 500 ಕ್ಕೂ ಹೆಚ್ಚು ಕಬಡ್ಡಿ ಪಟುಗಳು ಹರಾಜಿನಲ್ಲಿ ಭಾಗಿಯಾಗಲಿದ್ದು, ಬಂಪರ್ ಮೊತ್ತದ ನಿರೀಕ್ಷೆಯಲ್ಲಿದ್ದಾರೆ. ಇದರಲ್ಲಿ ಗರಿಷ್ಠ 217 ಆಟಗಾರರು ಹರಾಜಾಗಲಿದ್ದಾರೆ.
ಪವನ್ ಶೆರಾವತ್, ಪ್ರದೀಪ್ ನರ್ವಾಲ್, ಅರ್ಜುನ್ ದೇಶ್ವಾಲ್, ಆಶು ಮಲಿಕ್, ಇರಾನ್ ನ ಫಜಲ್ ಅಟ್ರಾಚಲಿ, ಮೊಹಮ್ಮದ್‌ರೆಜಾ ಶಾದ್ದೂ ಸೇರಿ ಪ್ರಮುಖರು ದೊಡ್ಡ ಮೊತ್ತಕ್ಕೆ ಬಿಕರಿಯಾಗುವ ವಿಶ್ವಾಸದಲ್ಲಿದ್ದಾರೆ. ಹರಾಜಿನಲ್ಲಿ 12 ತಂಡಗಳು ಪಾಲ್ಗೊಳ್ಳಲಿವೆ. ಕಳೆದ ಬಾರಿ ತಂಡದಲ್ಲಿದ್ದ ಕೆಲ ಆಟಗಾರರನ್ನು ಈಗಾಗಲೇ ಫ್ರಾಂಚೈಸಿಗಳು ತಮ್ಮಲ್ಲೇ ಉಳಿಸಿಕೊಂಡಿದ್ದು, ಉಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಬೇಕಿದೆ. ತಂಡಗಳು ಕನಿಷ್ಠ 18, ಗರಿಷ್ಠ 25 ಆಟಗಾರರನ್ನು ಖರೀದಿಸಬಹುದು.
'ಎ' ವಿಭಾಗದ ಆಟಗಾರರು ಮೂಲಬೆಲೆ 30 ಲಕ್ಷ ರುಪಾಯಿ ಹೊಂದಿದ್ದು, ಬಿ ವಿಭಾಗ 20 ಲಕ್ಷ, ಸಿ ವಿಭಾಗ 13 ಲಕ್ಷ, ಡಿ ವಿಭಾಗ 9 ಲಕ್ಷ ಮೂಲಬೆಲೆ ಪಡೆಯಲಿದ್ದಾರೆ.
ಬುಲ್ಸ್ ಬಳಿ 54.1 ಕೋಟಿ!: ಸದ್ಯ ಬೆಂಗಳೂರು ಬುಲ್ಸ್‌ನಲ್ಲಿ 9 ಆಟಗಾರರಿದ್ದಾರೆ. ಉಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲಿದ್ದು, ಅದಕ್ಕಾಗಿ ಗರಿಷ್ಠ 4.1 ಕೋಟಿ ಬಳಸಬಹುದಾಗಿದೆ. ಡೆಲ್ಲಿ ಬಳಿ ಗರಿಷ್ಠ ಅಂದರೆ 24.5 ಕೋಟಿ ಇದೆ.
ಡಬಲ್ಸ್‌ನಲ್ಲಿ ಸಾತ್ವಿಕ್ -ಚಿರಾಗ್ ಶೆಟ್ಟಿ ಸೆಮಿಫೈನಲ್‌ಗೆ ಪ್ರವೇಶ
ಸಿಂಗಾಪುರ: ಪುರುಷರ ಡಬಲ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಭಾರತದ ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿ ಇಲ್ಲಿ ನಡೆಯುತ್ತಿರುವ ಸಿಂಗಾಪುರ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ಮಾಜಿ ನಂ.1 ಪುರುಷ ಡಬಲ್ಸ್ ಜೋಡಿ ಸಾತ್ವಿಕ್ -ಚಿರಾಗ್, ಹಾಲಿ ವಿಶ್ವ ನಂ.1 ಜೋಡಿಯಾಗಿರುವ ಮಲೇಷ್ಯಾದ ಗೊಹ್ ಸೆಫೀ-ನೂರ್ ಇಜ್ಜುದ್ದೀನ್ ವಿರುದ್ಧ 21-17, 21-15 ಅಂಕಗಳ ಅಂತರದಲ್ಲಿಗೆಲುವು ಸಾಧಿಸಿತು. ಈ ಋತುವಿನಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವತವಕದಲ್ಲಿರುವ ಈ ಜೋಡಿ ಸೆಮಿಫೈನಲ್‌ನಲ್ಲಿ 2 ಬಾರಿಯ ಒಲಿಂಪಿಯನ್, ಮಲೇಷ್ಯಾದ ಅರನ್ ಚಿಯಾ ಮತ್ತು ಸೋಹ್ ವೊಯಿರನ್ನು ಎದುರಿಸಲಿದ್ದಾರೆ.
ನಾರ್ವೆ ಚೆಸ್: ಗುಕೇಶ್‌ಗೆ ಸತತ ಎರಡನೇ ಗೆಲುವು
ಸ್ಟಾವಂಜರ್ (ನಾರ್ವೆ): ಇಲ್ಲಿ ನಡೆಯುತ್ತಿರುವ ನಾರ್ವೆ ಚೆಸ್ ಟೂರ್ನಿಯಲ್ಲಿ ಹಾಲಿ ವಿಶ್ವಚಾಂಪಿಯನ್ ಡಿ. ಗುಕೇಶ್, ಅಮೆರಿಕದ ಗ್ರಾಂಡ್ ಮಾಸ್ಟರ್ ಫ್ಯಾಬಿಯಾನೊ ಕರುನಾ ವಿರುದ್ಧ 4ನೇ ಸುತ್ತಿನ ಟೈ ಬ್ರೇಕರ್‌ನಲ್ಲಿ ರೋಚಕ ಜಯ ಗಳಿಸಿದರು. ವಿಶ್ವದ ನಂ.3 ಆಟಗಾರ ಕರುನಾ ಆರಂಭದಲ್ಲಿ ಮೇಲುಗೈ ಸಾಧಿಸಿದರು. ಆದರೆ ಗುಕೇಶ್ ಚಾಣಾಕ್ಷತೆಯಿಂದ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ಆ ಬಳಿಕ ನಡೆದ ಟೈಬ್ರೇಕರ್‌ನಲ್ಲಿ ಗುಕೇಶ್ ಗೆಲುವು ಸಾಧಿಸಿ ದರು. ಆದರೆ ಅರ್ಜುನ್ ಎರಿಗೈಸಿ ಸತತ 2ನೇ ಸೋಲು ಕಂಡಿದ್ದು, ನಾರ್ವೆಯ ಕಾರ್ಲ್‌ನ್‌ಗೆ ಶರಣಾದರು.