12ನೇ ಆವೃತ್ತಿ ಪ್ರೊ ಕಬಡ್ಡಿಲಿ ಆಟಗಾರರ ಹರಾಜು ಪೂರ್ಣಗೊಂಡಿದ್ದು, 200ಕ್ಕೂ ಹೆಚ್ಚು ಆಟಗಾರರು ವಿವಿಧ ತಂಡಗಳಿಗೆ ಸೇರ್ಪಡೆಯಾಗಿದ್ದಾರೆ. 10 ಆಟಗಾರರು 1 ಕೋಟಿಗೂ ಹೆಚ್ಚು ಮೊತ್ತ ಪಡೆದಿದ್ದು, ಒಟ್ಟು 537.90 ಕೋಟಿ ವ್ಯಯವಾಗಿದೆ. ಬೆಂಗಳೂರು ಬುಲ್ಸ್ ತಂಡದಲ್ಲಿ ಈ ಬಾರಿ 3 ಕನ್ನಡಿಗರು ಸ್ಥಾನ ಪಡೆದಿದ್ದಾರೆ.

ಮುಂಬೈ:12ನೇ ಆವೃತ್ತಿ ಪ್ರೊ ಕಬಡ್ಡಿಲಿ ಆಟಗಾರರ ಹರಾಜು ಕೊನೆಗೊಂಡಿದ್ದು, 200ಕ್ಕೂ ಹೆಚ್ಚು ಆಟಗಾರರು ವಿವಿಧ ತಂಡಗಳಿಗೆ ಬಿಕರಿಯಾಗಿದ್ದಾರೆ.ಈ ಪೈಕಿ10 ಆಟಗಾರರಿಗೆ ತಲಾ 1 ಕೋಟಿಗೂ ಹೆಚ್ಚು ಮೊತ್ತ ಪಡೆದಿದ್ದಾರೆ. ಹರಾಜಿನಲ್ಲಿ ಒಟ್ಟು 537.90 ಕೋಟಿ ವ್ಯಯವಾಗಿದೆ.

ಮೊದಲ ದಿನ ಮೊಹಮದ್‌ ರೆಜಾ ಶಾದ್ಲೂ ಹಾಗೂ ದೇವಾಂಕ್ ದಲಾಲ್ 2 ಕೋಟಿ ಕ್ಲಬ್ ಗೆ ಸೇರ್ಪಡೆಗೊಂಡಿದ್ದರು. ಮೊದಲ ದಿನ ಹರಾಜಾಗದೆ ಉಳಿದಿದ್ದ ಲೀಗ್‌ನ ಅತ್ಯಂತ ಯಶಸ್ವಿ ಆಟಗಾರ ಪ್ರದೀಪ್‌ನರ್ವಾಲ್‌ರನ್ನು 2ನೇ ದಿನವೂ ಯಾವುದೇ ಫ್ರಾಂಚೈಸಿ ಖರೀದಿಸಲು ಮನಸ್ಸು ಮಾಡಲಿಲ್ಲ. 'ಡಿ' ವಿಭಾಗದಲ್ಲಿದ್ದ ಅನಿಲ್‌ ಮೋಹನ್ 78 ಲಕ್ಷಕ್ಕೆ ಮುಂಬಾ ತಂಡಕ್ಕೆ ಹರಾಜಾಗಿದ್ದು, 2ನೇ ದಿನದ ಅತಿ ದುಬಾರಿ ಆಟಗಾರ ಎನಿಸಿಕೊಂಡರು. ಈಗಾಗಲೇ ತಂಡಕ್ಕೆ ರಿಟೈನ್ ಆಗಿದ್ದ ಆಟಗಾರರನ್ನು ಹೊರತುಪಡಿಸಿ ಇತರ ಆಟಗಾರರನ್ನು ಹರಾಜಿನಲ್ಲಿ ತಂಡಕ್ಕೆ ಸೇರಿಸಿಕೊಳ್ಳಲಾಯಿತು.

ಅಶು ಮಲಿಕ್‌ (ದಬಾಂಗ್‌ ಡೆಲ್ಲಿ), ದೀಪಕ್‌ ಸಿಂಗ್‌ (ಪಾಟ್ನಾ ಪೈರೇಟ್ಸ್‌), ಮೊಹಮ್ಮದ್‌ ಅಮನ್‌ (ಪುಣೇರಿ ಪಲ್ಟನ್‌), ಹರ್ದೀಪ್‌ ಮತ್ತು ಘನಶ್ಯಾಮ್‌ ರೋಕಾ ಮರ್ಗ (ಹರಿಯಾಣ ಸ್ಟೀಲರ್ಸ್‌) ಅವರನ್ನು ಎರಡು ಋುತುಗಳಿಗೆ ಉಳಿಸಿಕೊಳ್ಳಲಾಗಿದೆ. ಅಶು ಮಲಿಕ್, ಅರ್ಜುನ್‌ ದೇಶ್ವಾಲ್‌ ಮತ್ತು ನವೀನ್‌ ಕುಮಾರ್‌ ಕ್ರಮವಾಗಿ 1.90 ಕೋಟಿ, 1.405 ಕೋಟಿ ಮತ್ತು 1.20 ಕೋಟಿ ರೂ.ಗೆ ಖರೀದಿಸಲಾಯಿತು.

ಬೆಂಗಳೂರು ಬುಲ್ಸ್‌ನಲ್ಲಿ ಈ ಬಾರಿ ಮೂವರು ಕನ್ನಡಿಗರು

ಹರಾಜಿನಲ್ಲಿ ಬುಲ್ಸ್ ತಂಡ ಸತ್ಯಪ್ಪ ಮಟ್ಟಿ ಅವರನ್ನು 13 ಲಕ್ಷ ನೀಡಿ ಖರೀದಿಸಿತು. ಹೀಗಾಗಿ ತಂಡದಲ್ಲಿ ಕನ್ನಡಿಗ ಆಟಗಾರರ ಸಂಖ್ಯೆ ಮೂರಕ್ಕೆ ಏರಿತು. ಹರಾಜಿಗೂ ಮುನ್ನವೇ ಗಣೇಶ್ ಹನಮಂತ ಗೋಲ್‌ರನ್ನು ನ್ಯೂ ಯಂಗ್ ಪ್ಲೇಯರ್ ಆಯ್ಕೆ ಮೂಲಕ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಅಲ್ಲದೆ, ಚಂದ್ರ ನಾಯ್ಕರನ್ನೂ ಹರಾಜಿಗೂ ಮುನ್ನವೇ ಸತ್ಯಪ್ಪ ಮಟ್ಟಿ ಖರೀದಿ ಮಾಡಿತ್ತು. ಒಟ್ಟಾರೆ ಹರಾಜಿನಲ್ಲಿ ಬುಲ್ಸ್‌ ತಂಡ 15 ಮಂದಿಯನ್ನು ಖರೀದಿಸಿತು. ಡಿಫೆಂಡರ್ ಯೋಗೇಶ್ ದಹಿಯಾ 1.125 ಕೋಟಿಗೆ ಹರಾಜಾಗಿ, ಭಾರತದ ದುಬಾರಿ ಡಿಫೆಂಡರ್ ಎನಿಸಿಕೊಂಡರು.

ಇಗಾ ಕಾರ್ಟರ್‌ಗೆ, ಜೋಕೋ 4ನೇ ಸುತ್ತಿಗೆ ಲಗ್ಗೆ

ಪ್ಯಾರಿಸ್: ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯ ಇತಿಹಾಸದಲ್ಲಿ 99ನೇ ಗೆಲುವು ದಾಖಲಿಸಿರುವ 3 ಬಾರಿ ಚಾಂಪಿಯನ್ ನೋವಾಕ್ ಜೋಕೋವಿಚ್, ಪ್ರಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಮತ್ತೊಂದೆಡೆ 5ನೇ ಬಾರಿ ಟ್ರೋಫಿ ಗೆಲ್ಲುವ ಗುರಿ ಇಟ್ಟುಕೊಂಡಿರುವ ಇಗಾ ಸ್ವಿಯಾಟೆಕ್ ಕ್ವಾರ್ಟರ್ ಫೈನಲ್‌ಗೇರಿದ್ದಾರೆ.

ಶನಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ 3ನೇ ಸುತ್ತಿನ ಪಂದ್ಯದಲ್ಲಿ 24 ಗ್ರಾನ್‌ಸ್ಲಾಂಗಳ ಒಡೆಯ, ಸರ್ಬಿಯಾದ ಜೋಕೋ ಅವರು ಆಸ್ಟ್ರಿಯಾದ ಫಿಲಿಪ್ ಮಿಸೋಲಿಕ್ ವಿರುದ್ಧ 6-3, 6-4, 6-2ರಲ್ಲಿ ಜಯಗಳಿಸಿದರು. ಈ ಮೂಲಕ ಸತತ 16ನೇ ವರ್ಷ ಟೂರ್ನಿಯಲ್ಲಿ 4ನೇ ಸುತ್ತು ಪ್ರವೇಶಿಸಿದ ಸಾಧನೆ ಮಾಡಿದರು.3ನೇ ಶ್ರೇಯಾಂಕಿತ, ಜರ್ಮನಿಯ ಅಲೆಕ್ಸಾಂಡರ್ ಜೆರೆವ್, ರಷ್ಯಾದ 17ನೇ ಶ್ರೇಯಾಂಕಿತ ಆ್ಯಂಡ್ರೆ ರುಬ್ಲೆವ್ ಕೂಡಾ 4ನೇ ಸುತ್ತು ತಲುಪಿದರು.

ಇಗಾ ಮುನ್ನಡೆ: ಮಹಿಳಾ ಸಿಂಗಲ್ಸ್ ಪ್ರೀ ಕ್ವಾರ್ಟರ್‌ನಲ್ಲಿ ಪೋಲೆಂಡ್‌ನ ಸ್ವಿಯಾಟೆಕ್, 2022ರ ವಿಂಬಲ್ಡನ್‌ ಚಾಂಪಿಯಲ್ ಎಲೆನಾ ರಬೈಕೆನಾರನ್ನು 1-6, 6-3, 7-5 ಸೆಟ್‌ಗಳಲ್ಲಿ ಸೋಲಿಸಿದರು. ಅವರಿಗೆ ಕ್ವಾರ್ಟರ್‌ನಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಸವಾಲು ಎದುರಾಗಲಿದೆ. ಸ್ವಿಟೋಲಿನಾ 4ನೇ ಸುತ್ತಿನಲ್ಲಿ4ನೇ ಶ್ರೇಯಾಂಕಿಯ, ಇಟಲಿಯಜ್ಯಾಸ್ಟೀನ್‌ ಪೌಲಿನಿ ವಿರುದ್ಧ ಗೆದ್ದರು.

ಬೋಪಣ್ಣ ಜೋಡಿ ಸವಾಲು ಅಂತ್ಯ! ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದ ಕರ್ನಾಟಕದ ರೋಹನ್ ಬೋಪಣ್ಣ, ಈ ಬಾರಿ ಫ್ರೆಂಚ್ ಓಪನ್‌ನ 3ನೇ ಸುತ್ತಿನಲ್ಲೇ ಸೋತು ಹೊರಬಿದ್ದರು. ಚೆಕ್‌ ಗಣರಾಜ್ಯದ ಆ್ಯಡಂ ಪಾವಸೆಕ್ ಜೊತೆಗೂಡಿ ಕಣಕ್ಕಿಳಿದಿದ್ದ ಬೋಪಣ್ಣ ಅವರು, ಬ್ರಿಟನ್‌ನ ಹೆನ್ರಿ ಪ್ಯಾಟನ್ -ಫಿನ್ಲೆಂಡ್‌ನ ಹ್ಯಾರಿ ಹೆಲಿಯೊವಾರಾ ಜೋಡಿ ವಿರುದ್ಧ 2-6, 6-7 (5-7) ಸೆಟ್‌ಗಳಲ್ಲಿ ಪರಾಭವಗೊಂಡರು.