Pro Kabaddi League : ಪಟನಾ ಪೈರೇಟ್ಸ್ ವಿರುದ್ಧ ಸೋಲು ಕಂಡ ಬೆಂಗಳೂರು ಬುಲ್ಸ್!
ಪಿಕೆಎಲ್ ನಲ್ಲಿ ಮೂರನೇ ಸೋಲು ಕಂಡ ಬೆಂಗಳೂರು ಬುಲ್ಸ್
ಪಟನಾ ಪೈರೇಟ್ಸ್ ಅಬ್ಬರದ ಆಟಕ್ಕೆ ಶರಣಾದ ಬುಲ್ಸ್
ತಮಿಳ್ ತಲೈವಾಸ್-ಜೈಪುರ ಪಿಂಕ್ ಪ್ಯಾಂಥರ್ಸ್ ನಡುವಿನ ಪಂದ್ಯ ಟೈ
ಬೆಂಗಳೂರು (ಜ. 16): ಸತತ ಎರಡು ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವುಗಳ ಮೂಲಕ ಭರ್ಜರಿ ಫಾರ್ಮ್ ನಲ್ಲಿ ಬೆಂಗಳೂರು ಬುಲ್ಸ್ (Bengaluru Bulls)ತಂಡ ಪ್ರೊ ಕಬಡ್ಡಿ ಲೀಗ್ ನ 8ನೇ ಸೀಸನ್ ನಲ್ಲಿ ತನ್ನ 3ನೇ ಸೋಲು ಎದುರಿಸಿದೆ. ಭಾನುವಾರ ಮೂರು ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ ವಿರುದ್ಧ ನೀರಸವಾಗಿ ಆಟವಾಡಿದ ಬೆಂಗಳೂರು ಬುಲ್ಸ್ ತಂಡ 7 ಅಂಕಗಳ ಅಂತರದ ಸೋಲು ಕಂಡಿತು. ಸೋಲಿನ ನಡುವೆಯೂ ಪ್ರೊ ಕಬಡ್ಡಿ ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಲು ಬೆಂಗಳೂರು ಬುಲ್ಸ್ ಯಶಸ್ವಿಯಾಗಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಟೂರ್ನಿಯ 26ನೇ ದಿನದ ಪಂದ್ಯದಲ್ಲಿ ಪಟನಾ ಪೈರೇಟ್ಸ್ ತಂಡ 38-31 ಅಂಕಗಳಿಂದ ಬೆಂಗಳೂರು ಬುಲ್ಸ್ ತಂಡವನ್ನು ಮಣಿಸಿದರೆ, ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಮೊದಲ ಆವೃತ್ತಿಯ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers ) ಹಾಗೂ ತಮಿಳ್ ತಲೈವಾಸ್ (Tamil Thalaivas ) ತಂಡಗಳು 31-31 ಅಂಕಗಳ ಟೈ ಸಾಧಿಸಿದವು. ಬೆಂಗಳೂರು ತಂಡವನ್ನು ಮಣಿಸಲು ಯಶಸ್ವಿಯಾದ ಪಟನಾ ಪೈರೇಟ್ಸ್ ತಂಡ ಕೂಡ 39 ಅಂಕ ಗಳಿಸಿದ್ದರೂ, ಸ್ಕೋರ್ ವ್ಯತ್ಯಾಸದ ಆಧಾರದಲ್ಲಿ 2ನೇ ಸ್ಥಾನದಲ್ಲಿದೆ. ಇನ್ನು ಟೈ ಫಲಿತಾಂಶ ಕಂಡ ತಂಡಗಳ ಪೈಕಿ ಜೈಪುರ ಪಿಂಕ್ ಪ್ಯಾಂಥರ್ಸ್ 4ನೇ ಸ್ಥಾನದಲ್ಲಿದ್ದರೆ, ತಮಿಳ್ ತಲೈವಾಸ್ ತಂಡ 5ನೇ ಸ್ಥಾನದಲ್ಲಿ ಮುಂದುವರಿದಿದೆ.
ಪೈರೇಟ್ಸ್‌ನ ಡಿಫೆಂಡರ್‌ಗಳಾದ ಸುನಿಲ್ (Sunil ) ಮತ್ತು ಮೊಹಮ್ಮದ್ರೇಜಾ ಶಾದ್ಲೌಯಿ (Mohammadreza Shadloui) ಅವರು ಬೆಂಗಳೂರು ತಂಡದ ಅಗ್ರ ರೈಡರ್ ಪವನ್ ಕುಮಾರ್ ಶೇರಾವತ್ (Pawan Sehrawat) ಕೂಡ ಮುರಿಯಲು ಸಾಧ್ಯವಾಗದೇ ಇರುವಂಥ ಬಲಿಷ್ಠ ರಕ್ಷಣಾ ಕೋಟೆಯನ್ನು ಕಟ್ಟಿದ್ದರಿಂದ ಪಟನಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಾಲಿ ಆವೃತ್ತಿಯಲ್ಲಿ ಗರಿಷ್ಠ ರೈಡಿಂಗ್ ಅಂಕ ಸಂಪಾದಿಸಿರುವ ಕಾರಣಕ್ಕೆ ಗ್ರೀನ್ ಸ್ಲೀವ್ ಹೊಂದಿರುವ ಪವನ್ ಕುಮಾರ್, ಮೊದಲ ಅವಧಿಯ ಆಟದಲ್ಲಿಯೇ ಸೂಪರ್ 10 ಸಾಹಸ ಮಾಡಿದ್ದರು.
ಆದರೆ, 2ನೇ ಅವಧಿಯ ಆಟದಲ್ಲಿ ಪಟನಾ ಡಿಫೆಂಡರ್ ಗಳು ಪವನ್ ಗೆ ಕನಿಷ್ಠ 1 ಅಂಕ ಕೂಡ ನೀಡಲಿಲ್ಲ. ಪಂದ್ಯದ ಕೊನೇ ನಿಮಿಷಗಳಲ್ಲಿ ಕೆಲವು ಆಕರ್ಷಕ ಸೂಪರ್ ಟ್ಯಾಕಲ್ ಗಳು ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಸೋಲು ಕಾಣಲು ಕಾರಣವಾಯಿತು. ಪವನ್ ಕುಮಾರ್ ಅವರ ಅದ್ಭುತ ರೈಡಿಂಗ್ ಮೂಲಕ ಪಂದ್ಯ ಆರಂಭಿಸಿದ್ದ ಬೆಂಗಳೂರು ಬುಲ್ಸ್ ತಂಡಕ್ಕೆ ಪಟನಾ ಪೈರೇಟ್ಸ್ 2ನೇ ಅವಧಿಯ ಆಟದಲ್ಲಿ ಬೇರೆಯದೇ ಯೋಜನೆ ರೂಪಿಸುವ ಮೂಲಕ ಕಟ್ಟಿಹಾಕಿತು.
Pro Kabaddi League: ಸಂಕ್ರಾತಿಗೆ ಬುಲ್ಸ್ ಭರ್ಜರಿ ಕಿಚ್ಚು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬೆಂಗಳೂರು!
ಟೈ ಪಂದ್ಯದಲ್ಲಿ ಕಾದಾಡಿದ ಜೈಪುರ-ತಮಿಳು: ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ತಮಿಳ್ ತಲೈವಾಸ್ ತಂಡದ ಡಿಫೆಂಡರ್ ಗಳು ಭರ್ಜರಿ ಆಟವಾಡಿದ್ದರಿಂದ ಉಭಯ ತಂಡಗಳ ನಡುವಿನ ಪಂದ್ಯ ಟೈ ಫಲಿತಾಂಶ ಕಂಡಿತು. ತಲೈವಾಸ್ ತಂಡದ ನಾಯಕ ಸುರ್ಜೀತ್ ಸಿಂಗ್ (Surjeet Singh) ಹಾಗೂ ಜೈಪುರದ ಸಂದೀಪ್ ಧುಲ್ (Sandeep Dhull)ಪಂದ್ಯದಲ್ಲಿ ಹೈ ಫೈವ್ ಸಾಧನೆ ಮಾಡಿದರು. ಪಂದ್ಯದ ಅಂತಿಮ ರೈಡ್ ಗೆ ತೆರಳುವಾಗ ತಮಿಳ್ ತಲೈವಾಸ್ ತಂಡ ಎರಡು ಅಂಕಗಳ ಮುನ್ನಡೆಯಲ್ಲಿತ್ತು. ಆದರೆ, ಕೊನೆಯ ರೈಡ್ ನಲ್ಲಿ ಆದ ತಪ್ಪಿನಿಂದಾಗಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು. ಕೊನೆಯ ರೈಡ್ ಗೆ ತೆರಳಿದ್ದ ರೈಡರ್ ಮಂಜೀತ್ (Manjeet), ಟಚ್ ಪಾಯಿಂಟ್ ಮಾಡುವ ಯತ್ನದಲ್ಲಿ ಲಾಬಿಗೆ ಕಾಲಿಟ್ಟಿದ್ದರಿಂದ, ಸೂಪರ್ ಟ್ಯಾಕಲ್ ಸಾಹಸವಾಗಿ ಜೈಪುರ ತಂಡ 2 ಅಂಕ ಪಡೆದುಕೊಂಡು ಸಮಬಲ ಸಾಧಿಸಿತು.
ತಮಿಳ್ ತಲೈವಾಸ್ ತಂಡದ ಡಿಫೆಂಡಿಂಗ್ ಜೋಡಿ ಸುರ್ಜೀತ್ ಸಿಂಗ್ ಹಾಗೂ ಸಾಗರ್ ಬಲಾಢ್ಯವಾಗಿ ಕಂಡಿದ್ದರಿಂದ ಜೈಪುರದ ರೈಡರ್ ಅರ್ಜುನ್ ದೇಶ್ವಾಲ್ (Arjun Deshwal), ಅಂಕ ಸಂಪಾದನೆ ಮಾಡುವ ಅವಕಾಶವನ್ನೇ ಪಡೆದಿರಲಿಲ್ಲ. ಇನ್ನೊಂದೆಡೆ ಜೈಪುರ ಪಿಂಕ್ ಪ್ಯಾಂಥರ್ಸ್ ಕೂಡ ಸಂದೀಪ್ ಧುಲ್ ಹಾಗೂ ಸಾಹುಲ್ ಕುಮಾರ್ ಸಾರಥ್ಯದಲ್ಲಿ ಅದ್ಭುತ ರಕ್ಷಣಾ ಕೋಟೆಯನ್ನು ರಚಿಸಿತ್ತು. ಆದರೆ, 7ನೇ ನಿಮಿಷದಲ್ಲಿ ಅನುಭವಿ ರೈಡರ್ ಕೆ. ಪ್ರಪಂಜನ್ ಭುಜದ ಗಾಯಕ್ಕೆ ತುತ್ತಾದ ಬಳಿಕ ಪಂದ್ಯದ ವೇಗದಲ್ಲಿ ಬದಲಾವಣೆಯಾಯಿತು.