PKL ಪುಣೇರಿ ಮಣಿಸಿದ ಜೈಪುರ ತಂಡಕ್ಕೆ ಪ್ರೋ ಕಬಡ್ಡಿ ಲೀಗ್ ಚಾಂಪಿಯನ್ ಕಿರೀಟ!
ಪ್ರೋ ಕಬಡ್ಡಿ ಲೀಗ್ ಟೂರ್ನಿ ಮತ್ತೆ ಪಿಂಕ್ ಬಣ್ಣವಾಗಿದೆ. ಚೊಚ್ಚಲ ಆವೃತ್ತಿ ಗೆದ್ದು ಸಂಭ್ರಮಿಸಿದ್ದ ಜೈಪುರ್ ಪಿಂಕ್ ಪ್ಯಾಂಥರ್ಸ್ ಇದೀಗ 2ನೇ ಬಾರಿಗೆ ಟ್ರೋಫಿ ಗೆದ್ದುಕೊಂಡಿದೆ. ಪುಣೇರಿ ತಂಡ ಮಣಿಸಿದ ಜೈಪುರ್ 9ನೇ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ
ಮುಂಬೈ(ಡಿ.17): ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಭರ್ಜರಿ ಗೆಲುವಿನ ಮೂಲಕ 9ನೇ ಆವೃತ್ತಿ ಟ್ರೋಫಿ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ಹೋರಾಟ ನಡೆಸಿದ ಜೈಪುರ್ ಪಿಂಕ್ ಪ್ಯಾಂಥರ್ಸ್ 33-29 ಅಂಕಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು. ಈ ಮೂಲಕ ಜೈಪುರ ಪಿಂಕ್ ಪ್ಯಾಂಥರ್ಸ್ 2ನೇ ಪ್ರೋ ಕಬಡ್ಡಿಲೀಗ್ ಟ್ರೋಫಿ ವಶಪಡಿಸಿಕೊಂಡಿದೆ. ಇತ್ತ ಚೊಚ್ಚಲ ಟ್ರೋಫಿ ಗೆಲ್ಲುವ ಪುಣೇರಿ ಪಲ್ಟಾನ್ ಕನಸು ಛಿದ್ರಗೊಂಡಿದೆ. ಆದರೆ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಹೋರಾಟ ನೀಡಿದ ಪುಣೇರಿ ತಂಡಕ್ಕೆ ಮೆಚ್ಚುಗೆ ಸುರಿಮಳೆ ವ್ಯಕ್ತವಾಗುತ್ತಿದೆ.
ಫಸ್ಟ್ ಹಾಫ್‌ನಲ್ಲಿ ಜೈಪುರ ಹಾಗೂ ಪುಣೇರಿ ಸಮಬಲದ ಹೋರಾಟ ನೀಡುತ್ತಲೇ ಸಾಗಿತು. ರೈಡ್ಸ್ ಪಾಯಿಂಟ್ಸ್‌ನಲ್ಲಿ ಜೈಪುರ ಮುನ್ನಡೆ ಸಾಧಿಸಿದರೆ, ಟ್ಯಾಕಲ್‌ನಲ್ಲಿ ಪುಣೇರಿ ಬಿಗಿ ಹಿಡಿತ ಸಾಧಿಸಿತ್ತು. ಆದರೆ ಮೊದಲಾರ್ಧದ ಅಂತಿಮ ಹಂತದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 14-12 ಅಂಕಗಳ ಮುನ್ನಡೆ ಕಾಯ್ದುಕೊಂಡಿತು. ಈ ಮೂಲಕ 2 ಅಂಕಗಳ ಮುನ್ನಡೆಯೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.
ದ್ವಿತಿಯಾರ್ಧದಲ್ಲಿ ಪುಣೇರಿ ತಿರುಗೇಟು ನೀಡಲ ಹಲವು ಪ್ರಯತ್ನಗಳನ್ನು ನಡೆಸಿತ್ತು. ಈ ವೇಳೆ ಹೆಚ್ಚು ಅಂಕಗಳನ್ನು ಗಳಿಸಿದರೂ ಜೈಪುರ ಹಿಂದಿಕ್ಕಲು ಸಾಧ್ಯವಾಗಲಿಲ್ಲ. ದ್ವಿತಿಯಾರ್ಧದಲ್ಲಿ ಜೈಪುರ 19 ಅಂಕ ಗಳಿಸಿದರೆ, ಪುಣೇರ್ 11 ಅಂಕಗಳಿಸಿತು. ಕೊನೆಯ ಹಂತದಲ್ಲಿ ಪುಣೇರಿ ಆಕ್ರಮಣ ಆಟದ ಮೂಲಕ ಹೆಚ್ಚು ಅಂಕಗಳಿಸುವ ಪ್ರಯತ್ನ ಮಾಡಿತು. ಆದರೆ ಸಮಯದ ಅಭಾವವೂ ಕಾಡಿತು. ಅಂತಿಮವಾಗಿ ಪುಣೇರಿ ಪಲ್ಟಾಣ್ ಶರಣಾಯಿತು.
ಟೂರ್ನಿಯುದ್ದಕ್ಕೂ ಅಭೂತಪೂರ್ವ ಪ್ರದರ್ಶನ ತೋರಿದ್ದ ಜೈಪುರ ಹಾಗೂ ಪುಣೆ ಗುಂಪು ಹಂತದಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದು ನೇರವಾಗಿ ಸೆಮಿಫೈನಲ್ ಪ್ರವೇಶಿಸಿದ್ದವು.
ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಪುಣೇರಿ
ತಮಿಳ್ ತಲೈವಾಸ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಅದ್ಬುತ ಪ್ರದರ್ಶನ ನೀಡಿದ್ದ ಪುಣೇರಿ ಪಲ್ಟಾನ್ 39-37 ಅಂಕಗಳ ರೋಚಕ ಗೆಲುವು ಸಾಧಿಸಿತು. 13ನೇ ನಿಮಿಷದಲ್ಲಿ ಪುಣೆಯನ್ನು ಆಲೌಟ್ ಮಾಡಿದ ತಲೈವಾಸ್ 15-9ರ ಮುನ್ನಡೆ ಪಡೆಯಿತು. ಮೊದಲಾರ್ಧದ ಮುಕ್ತಾಯಕ್ಕೆ 15-21ರ ಮುನ್ನಡೆ ಕಾಯ್ದುಕೊಂಡ ತಲೈವಾಸ್, ದ್ವಿತೀಯಾರ್ಧದ ಆರಂಭದಲ್ಲಿ ಉತ್ತಮ ಆಟವಾಡಿತು. ಆದರೆ 27ನೇ ನಿಮಿಷದಲ್ಲಿ ತಲೈವಾಸ್ ಅನ್ನು ಆಲೌಟ್ ಮಾಡಿದ ಪುಣೆ ಅಂತರವನ್ನು 23-24ಕ್ಕೆ ಇಳಿಸಿತು. 24ನೇ ನಿಮಿಷದಲ್ಲಿ ಮೊದಲ ಬಾರಿಗೆ ಮುನ್ನಡೆ ಪಡೆದ ಪುಣೆ, 37ನೇ ನಿಮಿಷದಲ್ಲಿ ಮತ್ತೊಮ್ಮೆ ಎದುರಾಳಿಯನ್ನು ಆಲೌಟ್ ಮಾಡಿ 5 ಅಂಕ ಮುನ್ನಡೆ ಗಳಿಸಿತು. ಕೊನೆ ಎರಡು ನಿಮಿಷಗಳಲ್ಲಿ ಪುಣೆ ತಲೈವಾಸ್ ತಿರುಗಿಬೀಳದಂತೆ ಎಚ್ಚರ ವಹಿಸಿತು. ಪಂಕಜ್ ಮೋಹಿತೆ 14 ರೈಡ್ ಅಂಕ ಗಳಿಸಿ ಪುಣೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಬುಲ್ಸ್ ಮಣಿಸಿ ಫೈನಲ್‌ಗೇರಿದ್ದ ಜೈಪುರ
ಬೆಂಗಳೂರು ಬುಲ್ಸ್ ತಂಡವನ್ನು49-29 ಅಂಕಗಳ ಅಂತರದಲ್ಲಿ ಮಣಿಸಿದ ಜೈಪುರ ಪಿಂಕ್ಪ್ಯಾಂಥರ್ಸ್ ಫೈನಲ್ ಪ್ರವೇಶಿಸಿತ್ತು. ಇದರೊಂದಿಗೆ 3ನೇ ಬಾರಿ ಫೈನಲ್ ಪ್ರವೇಶಿಸುವ ಬುಲ್ಸ್ ಕನಸು ಭಗ್ನಗೊಂಡರೆ, ಚೊಚ್ಚಲ ಆವೃತ್ತಿ ಚಾಂಪಿಯನ್ ಜೈಪುರ 3ನೇ ಫೈನಲ್‌ಗೆ ಲಗ್ಗೆ ಇಟ್ಟಿತು. 14ನೇ ನಿಮಿಷದಲ್ಲಿ ಬುಲ್ಸ್ ಮೊದಲ ಬಾರಿಗೆ ಆಲೌಟ್ ಆಗಿ 10-18ರ ಹಿನ್ನಡೆ ಅನುಭವಿಸಿತು. 24-15ರ ಮುನ್ನಡೆಯೊಂದಿಗೆ ಮೊದಲಾರ್ಧ ಮುಕ್ತಾಯಗೊಳಿಸಿದ ಪ್ಯಾಂಥರ್ಸ್, ದ್ವಿತೀಯಾರ್ಧದಲ್ಲಿ 5 ನಿಮಿಷದಲ್ಲಿ ಬೆಂಗಳೂರನ್ನು 2 ಬಾರಿ ಆಲೌಟ್ ಮಾಡಿತು. 28ನೇ ನಿಮಿಷದಲ್ಲಿ 19-39ರ ಹಿನ್ನಡೆಗೆ ಒಳಗಾದ ಬುಲ್ಸ್ ಮತ್ತೆ ಮೇಲೇಳಲು ಆಗಲಿಲ್ಲ. ಪಂದ್ಯದಲ್ಲಿ ಬುಲ್ಸ್‌ನ ಒಟ್ಟು 17 ಟ್ಯಾಕಲ್ ಯತ್ನಗಳು ವಿಫಲವಾದವು. ಜೈಪುರದ ಅಜಿತ್ 13 ರೈಡ್ ಅಂಕ ಗಳಿಸಿದರೆ, ಸಾಹುಲ್ ಕುಮಾರ್ 10 ಟ್ಯಾಕಲ್ ಅಂಕ ಸಂಪಾದಿಸಿ ತಂಡಕ್ಕೆ ದೊಡ್ಡ ಗೆಲುವು ತಂದುಕೊಟ್ಟಿದ್ದರು.