PKL 2021: ಹೊಸ ಚಾಲೆಂಜ್‌ಗೆ ಬೆಂಗಳೂರು ಬುಲ್ಸ್ ರೆಡಿ
* ಬೆಂಗಳೂರು ಬುಲ್ಸ್ ತಂಡಕ್ಕೆ ಪವನ್ ಕುಮಾರ್ ಶೆರಾವತ್ ನಾಯಕ
* ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಟ್ರೋಫಿ ಮೇಲೆ ಕಣ್ಣಿಟ್ಟ ಬುಲ್ಸ್
* ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ತಂಡಕ್ಕೆ ಯು ಮುಂಬಾ ಸವಾಲು
ಬೆಂಗಳೂರು(ಡಿ.21): 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (Pro Kabaddi League) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls) ಮತ್ತೊಮ್ಮೆ ಪ್ರಶಸ್ತಿ ಗೆಲ್ಲಲು ಸಕಲ ತಯಾರಿ ನಡೆಸಿದೆ. ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಯು ಮುಂಬಾ (U Mumba) ವಿರುದ್ಧ ಬೆಂಗಳೂರು ಬುಲ್ಸ್ ಸೆಣಸಲಿದೆ. ಆಟಗಾರರು ಒಂದು ತಿಂಗಳಿಗೂ ಹೆಚ್ಚು ಕಾಲ ಪುಣೆಯಲ್ಲಿ ನಡೆದಿದ್ದ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದರು. ರೈಡ್ ಮಷಿನ್ ಎಂದೇ ಕರೆಸಿಕೊಳ್ಳುವ ತಾರಾ ರೈಡರ್ ಪವನ್ ಶೆರಾವತ್ (Pawan Sehrawat) ಈ ಬಾರಿ ತಂಡವನ್ನು ಮುನ್ನಡೆಸಲಿದ್ದು, ಡಿಫೆಂಡರ್ ಮಹೇಂದರ್ ಸಿಂಗ್ ಉಪನಾಯಕನಾಗಿ ಕಾರ‍್ಯನಿರ್ವಹಿಸಲಿದ್ದಾರೆ. ರಣಧೀರ್ ಸಿಂಗ್ ತಂಡದ ಕೋಚ್ ಆಗಿ ಮುಂದುವರಿಯಲಿದ್ದಾರೆ.
2018ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ರೋಹಿತ್ ಕುಮಾರ್ (Rohit Kumar) ನೇತೃತ್ವದ ಬೆಂಗಳೂರು ಬುಲ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಬಾರಿ ರೋಹಿತ್ ಕುಮಾರ್ ಇಲ್ಲದೇ ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್‌ನಲ್ಲಿ ಅಬ್ಬರಿಸಲು ರೆಡಿಯಾಗಿದೆ. ಕಳೆದ ಬಾರಿಗಿಂತ ಈ ಬಾರಿ ಬೆಂಗಳೂರು ಬುಲ್ಸ್ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಬುಲ್ಸ್ ಅನುಭವಿ ಆಟಗಾರರನ್ನು ಉಳಿಸಿಕೊಳ್ಳುವುದರೊಂದಿಗೆ ವಿದೇಶಿ ಆಟಗಾರರ ಸೇರ್ಪಡೆ ಮಾಡಿಕೊಂಡಿದೆ. ಅಬೋಲ್ಫಾಜ್ಲ್ ಮಗ್ಸೋಡ್ಲೌ ಮಹಾಲಿ (ಇರಾನ್), ಡಾಂಗ್ ಜಿಯೋನ್ ಲೀ (ದಕ್ಷಿಣ ಕೊರಿಯಾ), ಜಿಯಾವುರ್ ರೆಹಮಾನ್ (ಬಾಂಗ್ಲಾದೇಶ) ಆಟಗಾರರು ಬೆಂಗಳೂರು ಬುಲ್ಸ್ ತಂಡ ಸೇರಿಕೊಂಡಿದ್ದಾರೆ. ರೆಕಾರ್ಡ್ ಬ್ರೇಕಿಂಗ್ ರೈಡರ್ ಪವನ್ ಕುಮಾರ್ ಶೆರಾವತ್ ನಾಯಕನಾಗಿ ಬುಲ್ಸ್ ತಂಡಕ್ಕೆ ಮತ್ತೊಂದು ಟ್ರೋಫಿ ತಂದುಕೊಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
PKL 2021: ಕಬಡ್ಡಿ ಹಬ್ಬ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭ
ಮೂರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಿಂದಲೂ ಪವನ್ ಶೆರಾವರ್ ಬೆಂಗಳೂರು ಬುಲ್ಸ್ ತಂಡದ ಪರವಾಗಿ ಆಡುತ್ತ ಬಂದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿಯೂ ಪವನ್ ಹೆಸರು ಮಾಡಿದ್ದಾರೆ. ದಕ್ಷಿಣ ಏಷ್ಯಾದ ಕ್ರೀಡಾಕೂಟದಲ್ಲಿ ಭಾರತೀಯ ತಂಡದ ಭಾಗವಾಗಿ ಚಿನ್ನಕ್ಕೆ ಕೊರಳು ಒಡ್ಡಿದ್ದರು. ಪ್ರೊ ಕಬಡ್ಡಿ ಸೀಸನ್ 6 ಮತ್ತು 7 ರಲ್ಲಿ ಕ್ರಮವಾಗಿ "ಅತ್ಯಂತ ಮೌಲ್ಯಯುತ ಆಟಗಾರ" ಮತ್ತು "ಅತ್ಯುತ್ತಮ ರೈಡರ್" ಪುರಸ್ಕಾರಕ್ಕೆ ಪಾತ್ರವಾಗಿದ್ದರು.
ಬೆಂಗಳೂರು ಬುಲ್ಸ್ ವೇಳಾಪಟ್ಟಿ
ದಿನಾಂಕ - ವಿರುದ್ಧ - ಸಮಯ
ಡಿ.22 ಯು ಮುಂಬಾ ಸಂಜೆ 7.30ಕ್ಕೆ
ಡಿ.24 ತಮಿಳ್ ತಲೈವಾಸ್ ರಾತ್ರಿ 8.30ಕ್ಕೆ
ಡಿ.26 ಬೆಂಗಾಲ್ ವಾರಿಯರ್ಸ್ ರಾತ್ರಿ 8.30ಕ್ಕೆ
ಡಿ.30 ಹರಾರಯಣ ಸ್ಟೀಲರ್ಸ್ ರಾತ್ರಿ 8.30ಕ್ಕೆ
ಜ.1 ತೆಲುಗು ಟೈಟಾನ್ಸ್ ರಾತ್ರಿ 8.30ಕ್ಕೆ
ಜ.2 ಪುಣೇರಿ ಪಲ್ಟನ್ ರಾತ್ರಿ 8.30ಕ್ಕೆ
ಜ.6 ಜೈಪುರ ರಾತ್ರಿ 8.30ಕ್ಕೆ
ಜ.9 ಯು.ಪಿ.ಯೋಧಾ ರಾತ್ರಿ 8.30ಕ್ಕೆ
ಜ.12 ದಬಾಂಗ್ ಡೆಲ್ಲಿ ರಾತ್ರಿ 8.30ಕ್ಕೆ
ಜ.14 ಗುಜರಾತ್ ರಾತ್ರಿ 8.30ಕ್ಕೆ
ಜ.16 ಪಾಟ್ನಾ ಪೈರೇಟ್ಸ್ ರಾತ್ರಿ 8.30ಕ್ಕೆ
ಪ್ರೊ ಕಬಡ್ಡಿ ಚಾಂಪಿಯನ್ನರ ಪಟ್ಟಿ
ವರ್ಷ - ಚಾಂಪಿಯನ್ - ರನ್ನರ್-ಅಪ್
2014 ಜೈಪುರ ಪಿಂಕ್ಪ್ಯಾಂಥರ್ಸ್ - ಯು ಮುಂಬಾ
2015 ಯು ಮುಂಬಾ - ಬೆಂಗಳೂರು ಬುಲ್ಸ್
2016 ಪಾಟ್ನಾ ಪೈರೇಟ್ಸ್ - ಯು ಮುಂಬಾ
2016 ಪಾಟ್ನಾ ಪೈರೇಟ್ಸ್ - ಜೈಪುರ ಪಿಂಕ್ ಪ್ಯಾಂಥರ್ಸ್
2017 ಪಾಟ್ನಾ ಪೈರೇಟ್ಸ್ - ಗುಜರಾತ್ ಫಾರ್ಚೂನ್‌ಜೈಂಟ್ಸ್
2018 ಬೆಂಗಳೂರು ಬುಲ್ಸ್ - ಗುಜರಾತ್ ಫಾರ್ಚೂನ್‌ಜೈಂಟ್ಸ್
2019 ಬೆಂಗಾಲ್ ವಾರಿಯರ್ಸ್ - ದಬಾಂಗ್ ಡೆಲ್ಲಿ