ಶನಿವಾರ ಅರ್ಹತಾ ಸುತ್ತಿನಲ್ಲಿ 7ನೇ ಸ್ಥಾನಿಯಾಗಿದ್ದ 25 ವರ್ಷದ ರುಬಿನಾ, ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್: 17ನೇ ಆವೃತ್ತಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯರ ಪದಕ ಬೇಟೆ ಮುಂದುವರಿದಿದೆ. ಅದರಲ್ಲೂ ದೇಶದ ಶೂಟರ್‌ಗಳು ಕ್ರೀಡಾಕೂಟದಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಿದ್ದು, ಮತ್ತೊಂದು ಪದಕ ಕೊರಳಿಗೇರಿಸಿಕೊಂಡಿದ್ದಾರೆ. ಶುಕ್ರವಾರ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಎಸ್‌ಎಚ್1 ವಿಭಾಗದಲ್ಲಿ ರುಬಿನಾ ಫ್ರಾನ್ಸಿನ್‌ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಇದು ಕ್ರೀಡಾಕೂಟದಲ್ಲಿ ಭಾರತಕ್ಕೆ ಸಿಕ್ಕ ಒಟ್ಟಾರೆ 5, ಶೂಟಿಂಗ್‌ನಲ್ಲಿ 4ನೇ ಪದಕ.

ಶನಿವಾರ ಅರ್ಹತಾ ಸುತ್ತಿನಲ್ಲಿ 7ನೇ ಸ್ಥಾನಿಯಾಗಿದ್ದ 25 ವರ್ಷದ ರುಬಿನಾ, ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರು. 8 ಶೂಟರ್‌ಗಳಿದ್ದ ಫೈನಲ್‌ನಲ್ಲಿ ರುಬಿನಾ 211.1 ಅಂಕಗಳೊಂದಿಗೆ 3ನೇ ಸ್ಥಾನ ಗಿಟ್ಟಿಸಿಕೊಂಡರು. ಆರಂಭದಿಂದಲೂ 3ನೇ ಸ್ಥಾನ ಕಾಯ್ದುಕೊಂಡಿದ್ದ ರುಬಿನಾ ಕೊನೆಯಲ್ಲೂ ಯಾವುದೇ ಒತ್ತಡಕ್ಕೆ ಒಳಗಾಗದೆ ಪದಕ ಗೆದ್ದರು. ಇರಾನ್‌ನ ಜವನ್‌ ಮಾರ್ಡಿ ಸರೇಹ್ 236.8 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರೆ, ಟರ್ಕಿಯ ಅಯ್ಯನ್ 231.1 ಅಂಕ ಪಡೆದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ಪಿಸ್ತೂಲ್ ವಿಭಾಗದಲ್ಲಿ ಪದಕ ಗೆದ್ದ ದೇಶದ ಮೊದಲ ಮಹಿಳೆ

ಇದಕ್ಕೂ ಮುನ್ನ ಶುಕ್ರವಾರ ಮಹಿಳೆಯರ 10 ಮೀ. ಏರ್ ರೈಫಲ್ (ಎಸ್‌ಎಚ್ 1)ನಲ್ಲಿ ಅವನಿ ಲೇಖರಾ ಚಿನ್ನ, ಮೋನಾ ಅಗರ್‌ವಾಲ್ ಕಂಚು, ಪುರುಷರ 10 ಮೀ. ಏರ್ ಪಿಸ್ತೂಲ್ (ಎಸ್‌ಎಚ್1) ವಿಭಾಗದಲ್ಲಿ ಮನೀಶ್ ನರ್ವಾಲ್ ಬೆಳ್ಳಿ ಪದಕ ಗೆದ್ದಿದ್ದರು. ರುಬಿನಾ ಪ್ಯಾರಾಲಿಂಪಿಕ್ಸ್‌ ಶೂಟಿಂಗ್‌ನ ಪಿಸ್ತೂಲ್ ವಿಭಾಗದಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎನಿಸಿಕೊಂಡರು. ಅವನಿ ಲೇಖರಾ, ಮೋನಾ ಅಗರ್‌ವಾಲ್ ರೈಫಲ್ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ಪದಕ ಗೆದ್ದಿದ್ದಾರೆ.

ಇಂಪ್ಯಾಕ್ಟ್ ಪ್ಲೇಯರ್ ಮುಂದುವರೆಸಲು ಬಿಸಿಸಿಐ ಚಿಂತನೆ; ರೋಹಿತ್, ಕೊಹ್ಲಿ ಮಾತಿಗೆ ಬೆಲೆನೇ ಇಲ್ವಾ?

ಅವನಿ, ಸುಹಾಸ್, ರಕಿತಾ ಸೇರಿ ಹಲವರಿಗೆ ಇಂದು ಪದಕ ನಿರೀಕ್ಷೆ

ಭಾರತ ಭಾನುವಾರ ಹಲವು ಪದಕಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಈಗಾಗಲೇ ವೈಯಕ್ತಿಕ ವಿಭಾಗದ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಅವನಿ ಲೇಖರಾ ಅವರು ಭಾನುವಾರ ಮಿಶ್ರ 10 ಮೀ. ಏರ್ ರೈಫಲ್ ಪ್ರೋನ್ ಎಸ್‌ಎಚ್ ವಿಭಾಗದಲ್ಲಿ ಸಿದ್ದಾರ್ಥ್ ಬಾಬು ಜೊತೆ ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಕರ್ನಾಟಕದ ಸುಹಾಸ್ ಯತಿರಾಜ್ ಕೂಡಾ ಸೆಮಿಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಅವರು ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ. ಸುಕಾಂತ್ ಕದಂ ಕೂಡಾ ಕಣಕ್ಕಿಳಿಯಲಿದ್ದಾರೆ. ಮಹಿಳೆಯರ ಅಥ್ಲೆಟಿಕ್ಸ್‌ನ 1500 ಮೀ. ಓಟದ ಸ್ಪರ್ಧೆಯಲ್ಲಿ ಕರ್ನಾಟಕದ ರಕ್ಷಿತಾ ರಾಜು ಸ್ಪರ್ಧಿಸಲಿದ್ದಾರೆ.

ಮೆಕ್ಯಾನಿಕ್ ಮಗಳು ರುಬಿನಾ ಫ್ರಾನ್ಸಿಸ್ ಈಗ ಪ್ಯಾರಾಲಿಂಪಿಕ್ ಸಾಧಕಿ

ಮಧ್ಯ ಪ್ರದೇಶದ ಜಬಲ್‌ಪುರ್‌ನಲ್ಲಿ ಮಧ್ಯಮ ವರ್ಗದಲ್ಲಿ ಜನಿಸಿದ ರುಬಿನಾರ ಕಾಲಿನಲ್ಲಿ ಬಾಲ್ಯದಲ್ಲೇ ಸರಿಯಾದ ಚಲನೆಗಳಿರಲಿಲ್ಲ. ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಕುಟುಂಬದಲ್ಲಿ ಬೆಳೆದಿದ್ದ ರುಬಿನಾ 2015ರಲ್ಲಿ ಒಲಿಂಪಿಕ್ ಪದಕ ವಿಜೇತ ಶೂಟರ್ ಗಗನ್ ನಾರಂಗ್ ಅವರ ಸಾಧನೆಯಿಂದ ಸ್ಫೂರ್ತಿ ಪಡೆದು ಶೂಟಿಂಗ್ ಕಲಿಯಲು ಆರಂಭಿಸಿದರು. ಹಣಕಾಸಿನ ಅಡೆತಡೆಗಳ ಹೊರತಾಗಿಯೂ, ರುಬಿನಾರನ್ನು ಅವರ ತಂದೆ 2017ರಲ್ಲಿ ಪುಣೆಯ ಪುಣೆಯ ಗನ್ ಫಾರ್‌ಸ್ಟೋರಿ ಶೂಟಿಂಗ್ ಅಕಾಡೆಮಿಗೆ ಸೇರಿಸಿದರು. ಜಯ್ ಪ್ರಕಾಶಾ ನಾಟಿಯಾಲ್‌ ಕೋಚಿಂಗ್, ಖ್ಯಾತ ಕೋಚ್ ಜಸ್‌ಪಾಲ್ ರಾಣಾರ ಮಾರ್ಗದರ್ಶನದಲ್ಲಿ ಬೆಳೆದ ರುಬಿನಾ ಈ ವರೆಗೂ ಹಲವು ಜಾಗತಿಕ ಕ್ರೀಡಾಕೂಟಗಳಲ್ಲಿ ಪದಕ ಗೆದ್ದಿದ್ದಾರೆ. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 7ನೇ ಸ್ಥಾನ ಪಡೆದಿದ್ದ ರುಬಿನಾ, 2022ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಕಂಚು ಜಯಿಸಿದ್ದಾರೆ. ಶೂಟಿಂಗ್ ವಿಶ್ವಕಪ್‌ನಲ್ಲಿ ಒಟ್ಟು 6 ಪದಕಗಳನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ಒಂದೇ ದಿನ ಭಾರತಕ್ಕೆ 4 ಪದಕ! ಕಾಲಿನ ಸ್ವಾಧೀನ ಕಳೆದುಕೊಂಡ್ರೂ ಕುಗ್ಗದ ಅವನಿ

ಶೂಟಿಂಗ್: ಅರ್ಹತಾ ಸುತ್ತಲ್ಲಿ ಸ್ವರೂಪ್ ಔಟ್

ಪುರುಷರ 10 ಮೀ. ಏರ್‌ರೈಫಲ್‌ ಸ್ಟಾಂಡಿಂಗ್ ಎಸ್‌ಎಚ್ ವಿಭಾಗದಲ್ಲಿ ಸ್ವರೂಪ್ ಉನ್‌ಹಾಲ್ಕ‌ ಫೈನಲ್ ಪ್ರವೇಶಿಸಲು ವಿಫಲರಾದರು. ಶನಿವಾರ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 38 ವರ್ಷದ ಸ್ವರೂಪ್ 613.4 ಅಂಕಗಳೊಂದಿಗೆ 14ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಸ್ವರೂಪ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಲ್ಪದರಲ್ಲೇ ಕಂಚಿನ ಪದಕ ತಪ್ಪಿಸಿಕೊಂಡಿದ್ದರು.

ಪದಕ ಭರವಸೆಯಾಗಿದ್ದ ಶೀತಲ್‌ಗೆ ಶಾಕ್! ಕೈತಪ್ಪಿದ ಜಾವೆಲಿನ್ ಮೆಡಲ್:

ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದ ಭಾರತದ ಆರ್ಚರಿ ಪಟು ಶೀತಲ್ ದೇವಿ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಆಘಾತಕಾರಿ ಸೋಲನುಭವಿಸಿದ್ದಾರೆ. ಗುರುವಾರ 17 ವರ್ಷದ ಶೀತಲ್ ಅರ್ಹತಾ ಸುತ್ತಿನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದರು. ಶನಿವಾರ ಪ್ರಿ ಕ್ವಾರ್ಟ‌್ರನಲ್ಲಿ ಅವರು ಟೋಕಿಯೋ ಪ್ಯಾರಾಲಿಂಪಿಕ್ಸ್ ಬೆಳ್ಳಿ ವಿಜೇತ, ಚಿಲಿ ದೇಶದ ಜ್ಯುನಿಗಾ ಮರಿಯಾನ ವಿರುದ್ಧ ಕೇವಲ ಅಂಕ (137-138 ಅಂಕ)ದಅಂತರದಲ್ಲಿ ಪರಾಭವಗೊಂಡರು. ಇದೇ ಸ್ಪರ್ಧೆಯಲ್ಲಿ ಸರಿತಾ ಕುಮಾರಿ ಕ್ವಾರ್ಟರ್ ಫೈನಲ್‌ನಲ್ಲಿ ಸೋಲನುಭವಿಸಿ, ಗೇಮ್ಸ್‌ನಲ್ಲಿ ಪದಕ ವಂಚಿತರಾದರು.

ಶನಿವಾರ ಪುರುಷರ ಜಾವೆಲಿನ್ ಎಫ್7 ವಿಭಾಗದಲ್ಲಿ ಪ್ರವೀಣ್ ಕುಮಾರ್ 8ನೇ ಸ್ಥಾನಿಯಾಗಿ ಪದಕ ತಪ್ಪಿಸಿಕೊಂಡರು. ಅವರು 4ನೇ ಪ್ರಯತ್ನದಲ್ಲಿ 42.12 ಮೀ. ದೂರ ದಾಖಲಿಸಿದರು. 

ಇಬ್ಬರು ಶಟ್ಲರ್‌ಗಳು ಸೆಮೀಸ್‌ಗೆ

ಇದೇ ವೇಳೆ ಬ್ಯಾಡ್ಮಿಂಟನ್‌ನಲ್ಲಿ ಭಾರತದ ನಿತೇಶ್ ಕುಮಾರ್ ಹಾಗೂ ಸುಕಾಂತ್ ಕದಂ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಏಷ್ಯನ್ ಪ್ಯಾರಾ ಗೇಮ್ಸ್ ಬೆಳ್ಳಿ ವಿಜೇತ ನಿತೇಶ್ ಪುರುಷರ ಸಿಂಗಲ್ಸ್‌ ಎಸ್‌ಎಲ್ ವಿಭಾಗದಲ್ಲಿ ಸತತ 3ನೇ ಗೆಲುವು ದಾಖಲಿಸಿ 'ಎ' ಗುಂಪಿನಲ್ಲಿ ಅಗ್ರಸ್ಥಾನ ಪಡೆದರು. ಪುರುಷರ ಸಿಂಗಲ್ಸ್‌ ಎಸ್ಎಲ್4 ವಿಭಾಗದಲ್ಲಿ ಸುಕಾಂತ್, 'ಬಿ' ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿದರು.