ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಈಗಾಗಲೇ ಅಧಿಕೃತ ಚಾಲನೆ ಸಿಕ್ಕಿದ್ದು, ಭಾರತ ಮೊದಲ ದಿನವೇ ಪದಕದ ಖಾತೆ ತೆರೆಯುವ ವಿಶ್ವಾಸದಲ್ಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್‌: ಸಾರ್ವಕಾಲಿಕ ಶ್ರೇಷ್ಠ ಪದಕ ಗಳಿಕೆಯ ನಿರೀಕ್ಷೆಯೊಂದಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಪ್ಯಾರಿಸ್‌ಗೆ ತೆರಳಿರುವ ಭಾರತ ಕ್ರೀಡಾಕೂಟದ ಸ್ಪರ್ಧೆಯ ಮೊದಲ ದಿನವೇ ಪದಕ ಬೇಟೆಯಾಡುವ ಕಾತರದಲ್ಲಿದೆ. ಬುಧವಾರ 17ನೇ ಆವೃತ್ತಿ ಪ್ಯಾರಾಲಿಂಪಿಕ್ಸ್‌ಗೆ ಪ್ಯಾರಿಸ್‌ನಲ್ಲಿ ಅದ್ಧೂರಿ ಚಾಲನೆ ಲಭಿಸಿದ್ದು, ಗುರುವಾರ ಸ್ಪರ್ಧೆಗಳು ಶುರುವಾಗಲಿವೆ.

ಮೊದಲ ದಿನ ಭಾರತಕ್ಕೆ 2 ವಿಭಾಗಗಳಲ್ಲಿ ಪದಕ ಗೆಲ್ಲುವ ಅವಕಾಶವಿದೆ. ಟೆಕ್ವಾಂಡೊ ಸ್ಪರ್ಧೆಯಲ್ಲಿ ಭಾರತ ಕಣಕ್ಕಿಳಿಯಲಿದ್ದು, ಇದರ ಪದಕ ಪಂದ್ಯ ಗುರುವಾರವೇ ನಡೆಯಲಿದೆ. ಮಹಿಳೆಯರ ಕೆ44-47 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಅರುಣಾ ಕಣಕ್ಕಿಳಿಯಲಿದ್ದಾರೆ. ಈ ವಿಭಾಗದ ಸೆಮಿಫೈನಲ್‌, ಫೈನಲ್‌ ಕೂಡಾ ಗುರುವಾರವೇ ನಿಗದಿಯಾಗಿದೆ.

ಇನ್ನು, ಸೈಕ್ಲಿಂಗ್‌ನಲ್ಲಿ ಮಹಿಳೆಯರ ಸಿ1-3 3000 ಮೀ. ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಜ್ಯೋತಿ ಗಡೇರಿಯಾ ಕಣದಲ್ಲಿದ್ದಾರೆ. ಈ ವಿಭಾಗದಲ್ಲೂ ಗುರುವಾರ ಪದಕ ಪಂದ್ಯ ನಡೆಯಲಿದೆ.

ಯಾರ ಜೊತೆಗೆ ಒಂದು ದಿನ ಕಳೆಯೋಕೆ ಇಷ್ಟಪಡ್ತೀರಾ ಎಂದು ಕೇಳಿದ್ದಕ್ಕೆ ಮನು ಭಾಕರ್ ನಾಚಿಕೆಯಿಂದ ಹೇಳಿದ ಹೆಸರು...

ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲೇ ಭಾರತ ಈ ವರೆಗೂ ಟೆಕ್ವಾಂಡೋ ಹಾಗೂ ಸೈಕ್ಲಿಂಗ್‌ ಸ್ಪರ್ಧೆಗಳಲ್ಲಿ ಪದಕ ಗೆದ್ದಿಲ್ಲ. ಈ 2 ವಿಭಾಗಗಳಲ್ಲಿ ಪದಕ ಗೆಲ್ಲುವ ಮೂಲಕ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಹೊತ ಇತಿಹಾಸ ಬರೆಯುವ ಕಾತರದಲ್ಲಿದೆ. ಉಳಿದಂತೆ ಬ್ಯಾಡ್ಮಿಂಟನ್‌, ಆರ್ಚರಿ, ಟೇಬಲ್‌ ಟೆನಿಸ್‌ ಸ್ಪರ್ಧೆಗಳು ಕೂಡಾ ಗುರುವಾರವೇ ಆರಂಭಗೊಂಡರೂ, ಯಾವುದೇ ವಿಭಾಗದಲ್ಲಿ ಪದಕ ಪಂದ್ಯವಿಲ್ಲ.

ಬ್ಯಾಡ್ಮಿಂಟನ್‌: ಸುಹಾಸ್‌ ಯತಿರಾಜ್‌ ಮೇಲೆ ಕಣ್ಣು

ಭಾರತಕ್ಕೆ ಈ ಬಾರಿ ಪದಕ ಭರವಸೆ ಮೂಡಿಸಿರುವ ಪ್ರಮುಖ ಅಥ್ಲೀಟ್‌ಗಳು ಗುರುವಾರ ಸ್ಪರ್ಧಾ ಕಣಕ್ಕಿಳಿಯಲಿದ್ದಾರೆ. ಕರ್ನಾಟಕ ಮೂಲದ ಸುಹಾಸ್‌ ಯತಿರಾಜ್‌ ಪುರುಷರ ಸಿಂಗಲ್ಸ್‌ ಎಸ್‌ಎಲ್‌4 ಗುಂಪು ವಿಭಾಗದ ಮೊದಲ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ. ಎಸ್‌ಎಲ್‌3-ಎಸ್‌ಯು5 ಮಿಶ್ರ ತಂಡ ವಿಭಾಗದಲ್ಲಿ ಸುಹಾಸ್‌-ಪಾಲಕ್‌ ಕೊಹ್ಲಿ ಸ್ಪರ್ಧೆ ಆರಂಭಿಸಲಿದ್ದಾರೆ. ಮಂದೀಪ್‌ ಕೌರ್‌, ಮಾನಸಿ ಜೋಶಿ, ಸುಕಾಂತ್‌ ಕದಂ, ತರುಣ್‌ ಥಿಲ್ಲೋನ್‌ ಕೂಡಾ ಮೊದಲ ಸುತ್ತಿನ ಪಂದ್ಯಗಳಲ್ಲಿ ಆಡಲಿದ್ದಾರೆ.

ಕೆ ಎಲ್ ರಾಹುಲ್‌ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಹತ್ವದ ಅಪ್‌ಡೇಟ್ ಕೊಟ್ಟ ಲಖನೌ ಮಾಲೀಕ ಗೋಯೆಂಕಾ..!

ಶೀತಲ್‌ ದೇವಿ ಕಣಕ್ಕೆ

ಗುರುವಾರ ಆರ್ಚರಿಯಲ್ಲೂ ಭಾರತದ ಕ್ರೀಡಾಪಟುಗಳು ಅಭಿಯಾನ ಆರಂಭಿಸಲಿದ್ದಾರೆ. ಎರಡೂ ಕೈಗಳಿಲ್ಲದಿದ್ದರೂ ಸ್ಪರ್ಧಿಸುತ್ತಿರುವ ಶೀತಲ್‌ ದೇವಿ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ. ಶೀತಲ್‌ ಹಾಗೂ ಸರಿತಾ ಮಹಿಳೆಯರ ವೈಯಕ್ತಿಕ ಕಾಂಪೌಂಡ್‌ ರ್‍ಯಾಂಕಿಂಗ್‌ ಸುತ್ತಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಬಾರಿ ಭಾರತದ ಪದಕ ಭರವಸೆಯಾಗಿರುವ ಹರ್ವಿಂದರ್‌ ಸಿಂಗ್‌ ಪುರುಷರ ವೈಯಕ್ತಿಕ ರೀಕರ್ವ್‌ ರ್‍ಯಾಂಕಿಂಗ್‌ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ. ರಾಕೇಶ್‌ ಕುಮಾರ್‌-ಶ್ಯಾಮ್‌ ಸುಂದರ್‌, ಪೂಜಾ ಕೂಡಾ ಸ್ಪರ್ಧೆ ಆರಂಭಿಸಲಿದ್ದಾರೆ.