ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಮತ್ತೆರಡು ಪದಕ ಖಚಿತವಾಗಿದೆ. ಕನ್ನಡಿಗ ಐಎಎಸ್‌ ಅಧಿಕಾರಿ ಸುಹಾಸ್ ಫೈನಲ್ ಪ್ರವೇಶಿಸಿದ್ದು, ಟೋಕಿಯೋ ಪ್ಯಾರಾಲಿಂಪಿಕ್ಸ್‌ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾರೆ.

ಪ್ಯಾರಿಸ್‌: ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೆರಡು ಪದಕಗಳು ಖಚಿತವಾಗಿದೆ. ಭಾನುವಾರ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಕ್ರೀಡಾಪಟುಗಳು ಪ್ರಾಬಲ್ಯ ಸಾಧಿಸಿದ್ದು, ಒಟ್ಟು 3 ಪದಕಗಳನ್ನು ಖಚಿತಪಡಿಸಿಕೊಂಡಿದ್ದಾರೆ. ಸೋಮವಾರ ಈ ವಿಭಾಗಗಳ ಸ್ಪರ್ಧೆಗಳು ನಡೆಯಲಿದ್ದು, ಶಟ್ಲರ್‌ಗಳು ದೇಶದ ಪದಕ ಖಾತೆಗೆ ಚಿನ್ನದ ಗರಿ ತೊಡಿಸುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಶೂಟಿಂಗ್‌ ಹಾಗೂ ಅಥ್ಲೆಟಿಕ್ಸ್‌ನಲ್ಲಿ ಭಾನುವಾರ ಭಾರತ ನಿರಾಸೆ ಅನುಭವಿಸಿದೆ.

ಟೋಕಿಯೋದಲ್ಲಿ ಬೆಳ್ಳಿ ಗೆದ್ದಿದ್ದ ಐಎಎಸ್‌ ಅಧಿಕಾರಿ ಸುಹಾಸ್‌

2007ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಸುಹಾಸ್‌ ಸದ್ಯ ಉತ್ತರ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕಳೆದ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಎಸ್‌ಎಲ್‌4 ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಸತತ 2 ಪ್ಯಾರಾ ಗೇಮ್ಸ್‌ಗಳಲ್ಲಿ ಪದಕ ಗೆದ್ದ ಸಾಧನೆ ಮಾಡಲಿದ್ದಾರೆ. ಈ ಬಾರಿ ಅವರು ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದು, ಫ್ರಾನ್ಸ್‌ನ ಲುಕಾಸ್‌ ಮಾಜುರ್‌ ವಿರುದ್ಧ ಸೆಣಸಾಡಲಿದ್ದಾರೆ. ಕಳೆದ ಬಾರಿ ಫೈನಲ್‌ನಲ್ಲೂ ಸುಹಾಸ್‌ಗೆ ಲುಕಾಸ್‌ ಸವಾಲು ಎದುರಾಗಿತ್ತು. ಲುಕಾಸ್‌ ಚಾಂಪಿಯನ್‌ ಆಗಿದ್ದರು. ಈಗ ಲುಕಾಸ್ ಎದುರು ಸೇಡು ತೀರಿಸಿಕೊಳ್ಳಲು ಸುಹಾಸ್‌ಗೆ ಮತ್ತೊಂದು ಅವಕಾಶ ಬಂದೊದಗಿದೆ.

ಭಾರತಕ್ಕೆ ಮತ್ತೆ 1 ಬೆಳ್ಳಿ, 1 ಕಂಚಿನ ಪದಕ! ಇತಿಹಾಸ ಬರೆದ ನಿಶಾದ್ ಕುಮಾರ್, ಪ್ರೀತಿ ಪಾಲ್

ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್‌ ಎಸ್‌ಎಲ್‌3 ವಿಭಾಗದಲ್ಲಿ ನಿತೇಶ್‌ ಕುಮಾರ್‌ ಫೈನಲ್‌ ಪ್ರವೇಶಿಸಿದರು. ವಿಶ್ವ ಚಾಂಪಿಯನ್‌ಶಿಪ್‌ ಹಾಗೂ ಪ್ಯಾರಾ ಏಷ್ಯನ್‌ ಗೇಮ್ಸ್‌ ಪದಕ ವಿಜೇತ 29 ವರ್ಷದ ನಿತೇಶ್‌ ಭಾನುವಾರ ನಡೆದ ಸೆಮಿಫೈನಲ್‌ನಲ್ಲಿ ಜಪಾನ್‌ನ ಡಯ್‌ಸುಕೆ ಫುಜಿಹಾರ ವಿರುದ್ಧ 21-16, 21-12 ಗೇಮ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಇದರೊಂದಿಗೆ ಫೈನಲ್‌ಗೇರಿರುವ ಅವರ ಕನಿಷ್ಠ ಬೆಳ್ಳಿ ಪದಕ ಖಚಿತಪಡಿಸಿಕೊಂಡಿದ್ದಾರೆ.

ಐಐಟಿ ಪದವೀಧರರಾಗಿರುವ ನಿತೇಶ್‌ ಸೋಮವಾರ ಮಧ್ಯಾಹ್ನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಗ್ರೇಟ್‌ ಬ್ರಿಟನ್‌ನ ಡೇನಿಲ್‌ ಬೆಥೆಲ್ ವಿರುದ್ಧ ಸೆಣಸಾಡಲಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ಭಾರತದ ಪ್ರಮೋದ್‌ ಭಗತ್‌ ವಿರುದ್ಧ ಸೋತು ಬೆಳ್ಳಿ ಪದಕ ಪಡೆದಿದ್ದ ಬೆಥೆಲ್‌, ಈ ಬಾರಿ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ ಬುನ್‌ಸುನ್‌ ಮೊಂಗ್‌ಖೊನ್‌ ವಿರುದ್ಧ 21-7, 21-9ರಲ್ಲಿ ಜಯಗಳಿಸಿದರು.

ಮೈಸೂರಿನ ಮಡಿಲಿಗೆ ಮಹಾರಾಜ ಟ್ರೋಫಿ ಕಿರೀಟ; ಬೆಂಗಳೂರು ಬ್ಲಾಸ್ಟರ್ಸ್‌ಗೆ ಮತ್ತೊಮ್ಮೆ ನಿರಾಸೆ

ಇಂದು ಕಂಚಿನ ಪದಕಕ್ಕಾಗಿ ಶಿವರಾಜನ್‌-ನಿತ್ಯಾ ಸೆಣಸು

ಬ್ಯಾಡ್ಮಿಂಟನ್‌ನ ಮಿಶ್ರ ಡಬಲ್ಸ್‌ ಎಸ್‌ಎಚ್‌6 ವಿಭಾಗದಲ್ಲಿ ಸೋಮವಾರ ಶಿವರಾಜನ್‌ ಹಾಗೂ ನಿತ್ಯಾ ಜೋಡಿ ಕಂಚಿನ ಪದಕದ ಪಂದ್ಯದಲ್ಲಿ ಸೆಣಸಾಡಲಿದೆ. ಭಾನುವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತೀಯ ಜೋಡಿಗೆ ಅಮೆರಿಕ ತಂಡದ ವಿರುದ್ಧ 21-17, 14-21, 13-21 ಗೇಮ್‌ಗಳಲ್ಲಿ ಸೋಲು ಎದುರಾಯಿತು. ಕಂಚಿನ ಪದಕ ಪಂದ್ಯದಲ್ಲಿ ಇಂಡೋನೇಷ್ಯಾದ ಸುಭಾನ್‌-ರಿನಾ ಜೋಡಿ ಸವಾಲು ಎದುರಾಗಲಿದೆ.