ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಪದಕದ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದ್ದು, ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಸ್ಪರ್ಧೆಯಲ್ಲಿ ಭಾರತ ಎರಡು ಪದಕ ಜಯಿಸಿದೆ

ಪ್ಯಾರಿಸ್: ಭಾರತದ ಭರವಸೆಯ ಪ್ಯಾರಾ ಶೂಟರ್ ಅವನಿ ಲೇಖರಾ ಮತ್ತೊಮ್ಮೆ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಬೇಟೆಯಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಸ್ಪರ್ಧೆಯ ಫೈನಲ್‌ನಲ್ಲಿ 249.7 ಅಂಕಗಳನ್ನು ಕಲೆಹಾಕುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು, ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದ ಎರಡನೇ ದಿನವೇ ಒಂದೇ ಸ್ಪರ್ಧೆಯಲ್ಲಿ ಭಾರತದ ಎರಡು ಪ್ಯಾರಾ ಶೂಟರ್‌ಗಳು ಪದಕದ ಬೇಟೆಯಾಡುವಲ್ಲಿ ಸಫಲರಾಗಿದ್ದಾರೆ. ಜೈಫುರ ಮೂಲದ ಅವನಿ ಲೇಖರಾ ಚಿನ್ನದ ಪದಕಕ್ಕೆ ಮುತ್ತಿಕ್ಕಿದರೆ, ಇದೇ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತದ ಮತ್ತೋರ್ವ ಪ್ಯಾರಾ ಶೂಟರ್ ಮೋನಾ ಅಗರ್‌ವಾಲ್‌ 228.7 ಅಂಕಗಳನ್ನು ಕಲೆಹಾಕುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡುವಲ್ಲಿ ಸಫಲವಾದರು. ಇನ್ನು ದಕ್ಷಿಣ ಕೊರಿಯಾದ ಯಿ. ಲೀ 246.8 ಅಂಕಗಳನ್ನು ಕಲೆಹಾಕಿ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

Scroll to load tweet…

ಇದಕ್ಕೂ ಮೊದಲು ಇಂದೇ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಅವನಿ ಲೇಖರಾ 625.8 ಅಂಕಗಳೊಂದಿಗೆ ಎರಡನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿದ್ದರು. ಇನ್ನು ಭಾರತದ ಮತ್ತೋರ್ವ ಪ್ಯಾರಾ ಶೂಟರ್ ಮೋನು ಅಗರ್‌ವಾಲ್‌ 653.1 ಅಂಕಗಳೊಂದಿಗೆ 4ನೇ ಸ್ಥಾನಿಯಾಗಿ ಪದಕ ಸುತ್ತಿಗೆ ಲಗ್ಗೆಯಿಟ್ಟಿದ್ದರು.

ಈ ಮೊದಲು ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲೂ ಅವನಿ ಲೇಖರಾ ವಿಶ್ವದಾಖಲೆಯೊಂದಿಗೆ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದರು.ಇದರೊಂದಿಗೆ ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಪ್ಯಾರಾ ಅಥ್ಲೀಟ್ ಎನಿಸಿಕೊಂಡಿದ್ದರು. ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಜೈಪುರ ಮೂಲದ ಅವನಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.