ಭಾರತ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್ ಮೂಲಕ ಪದಕದ ಖಾತೆ ತೆರೆದಿದೆ. ಮನು ಭಾಕರ್ ಕಂಚಿನ ಪದಕ ಜಯಿಸಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅನುಭವಿಸಿದ್ದ ನಿರಾಸೆ ಮರೆಯುವಲ್ಲಿ ಯಶಸ್ವಿಯಾಗಿದ್ದಾರೆ
ಪ್ಯಾರಿಸ್: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಖಾತೆ ತೆರೆದಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ 22 ವರ್ಷದ ಮನು ಭಾಕರ್ ಕಂಚಿನ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಲಿಂಪಿಕ್ಸ್ ಇತಿಹಾಸದಲ್ಲೇ ಪದಕ ಜಯಿಸಿದ ಮೊದಲ ಮಹಿಳಾ ಶೂಟರ್ ಎನ್ನುವ ಹಿರಿಮೆಗೆ ಮನು ಭಾಕರ್ ಪಾತ್ರರಾಗಿದ್ದಾರೆ.
ಹದಿಹರೆಯದ ವಯಸ್ಸಿನಲ್ಲೇ ಶೂಟಿಂಗ್‌ನಲ್ಲಿ ಪದಕಗಳ ಬೇಟೆಯಾಡಿದ್ದ ಮನು ಭಾಕರ್ ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಿಸ್ತೂಲ್ ಕೈಕೊಟ್ಟಿದ್ದರಿಂದ ಫೈನಲ್‌ಗೇರಲು ವಿಫಲವಾಗಿದ್ದರು. ಆದರೆ ಇದೀಗ ಆ ಎಲ್ಲಾ ಕಹಿ ಘಟನೆಗಳ ನೆನಪನ್ನು ಮರೆತು ಪ್ಯಾರಿಸ್ ಕೂಟದಲ್ಲಿ ಪಾಲ್ಗೊಂಡಿರುವ ಮನು ಭಾಕರ್, ದೇಶಕ್ಕೆ ಚೊಚ್ಚಲ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
10 ಮೀಟರ್ ಏರ್ ರೈಫಲ್: ಫೈನಲ್‌ಗೆ ಲಗ್ಗೆಯಿಟ್ಟ ರಮಿತಾ ಜಿಂದಾಲ್, ಪದಕಕ್ಕೆ ಇನ್ನೊಂದು ಹೆಜ್ಜೆ
ಶನಿವಾರ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಹರ್ಯಾಣದ ಝಜ್ಜರ್ ಜಿಲ್ಲೆಯ ಯುವ ಶೂಟರ್ 580 ಅಂಕಗಳನ್ನು ಗಳಿಸುವ ಮೂಲಕ ಮೂರನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿದ್ದರು. ಈ ಮೂಲಕ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಶೂಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ಈ ಮೊದಲು 2004ರ ಅಥೆನ್ಸ್ ಒಲಿಂಪಿಕ್ಸ್‌ನ ಮಹಿಳೆಯರ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಸುಮಾ ಶಿರೂರ್ ಫೈನಲ್‌ಗೇರಿದ್ದರು. ಆದರೆ 8ನೇ ಸ್ಥಾನ ಪಡೆದು ಪದಕ ತಪ್ಪಿಸಿಕೊಂಡಿದ್ದರು.
