Breaking: 11ನೇ ವಯಸ್ಸಿನಲ್ಲೇ ಅಪ್ಪ-ಅಮ್ಮನನ್ನು ಕಳೆದುಕೊಂಡು ಅನಾಥವಾದ ಹುಡುಗ ಅಮನ್ ದೇಶಕ್ಕಾಗಿ ಕಂಚು ಗೆದ್ದ!
11ನೇ ವಯಸ್ಸಿನಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥವಾಗಿ ಬೆಳೆದಿದ್ದ ರೆಸ್ಲರ್ ಅಮನ್ ಸೆಹ್ರಾವತ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಇದು ಒಲಿಂಪಿಕ್ಸ್‌ನಲ್ಲಿ ಭಾರತದ ಐದನೇ ಕಂಚಿನ ಪದಕವಾಗಿದೆ
ಪ್ಯಾರಿಸ್ (ಆ.9): ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಕಂಚಿನ ಪದಕ ಜಯಿಸಿದೆ ಪುರುಷರ 57 ಕೆಜಿ ರೆಸ್ಲಿಂಗ್ ವಿಭಾಗದಲ್ಲಿ ಭಾರತದ ಅಮನ್ ಸೆಹ್ರಾವತ್ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ. ಶುಕ್ರವಾರ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅಮನ್ ಸೆಹ್ರಾವತ್ ಪೆರುಗ್ವೆಯ ಡರಿಯನ್ ಟೊಯ್ ಕ್ರೂಜ್‌ರನ್ನು ಸೋಲಿಸಿ ಪದಕ ಜಯಿಸಿದರು. ತಮ್ಮ ಚೊಚ್ಚಲ ಒಲಿಂಪಿಕ್ಸ್‌ನಲ್ಲಿಯೇ ಅವರ ಪದಕ ಸಾಧನೆ ಮಾಡಿದ್ದಾರೆ. ಅದಲ್ಲದೆ, ಪ್ಯಾರಿಸ್ ಒಲಿಂಪಿಕ್ಸ್‌ನ ಕುಸ್ತಿಯಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅಮನ್ ಸೆಹ್ರಾವತ್ 13-5 ಅಂಕಗಳಿಮದ ಎದುರಾಳಿಯನ್ನು ಸೋಲಿಸಿದರು. ಆ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಸಾಧನೆ ಮಾಡಿದ ಭಾರತ 7ನೇ ಕುಸ್ತಿಪಟು ಎನ್ನುವ ಶ್ರೇಯಕ್ಕೂ ಅವರು ಪಾತ್ರರಾಗಿದ್ದಾರೆ. ಅದಲ್ಲದೆ, ಭಾರತ ಸತತ ಐದನೇ ಒಲಿಂಪಿಕ್ಸ್‌ನಲ್ಲಿ ಕುಸ್ತಿ ಕ್ರೀಡೆಯಿಂದ ಒಲಿಂಪಿಕ್ಸ್ ಪದಕ ಗೆಲ್ಲಲು ಯಶಸ್ವಿಯಾಗಿದೆ. ಪದಕ ಗೆದ್ದ ಬೆನ್ನಲ್ಲಿಯೇ ಅಮನ್ ಸೆಹ್ರಾವತ್ ತಮ್ಮ ಒಲಿಂಪಿಕ್ಸ್ ಪದಕವನ್ನು ತಂದೆ ತಾಯಿಗೆ ಅರ್ಪಣೆ ಮಾಡಿದ್ದಾರೆ.
ಇನ್ನು ಅಮನ್ ಸೆಹ್ರಾವತ್ ಅವರ ಜೀವನ ಬೇರೆಲ್ಲ ಕುಸ್ತಿಪಟುಗಳ ರೀತಿಯಲ್ಲಿ ಇದ್ದಿರಲಿಲ್ಲ. 21 ವರ್ಷ ವಯಸ್ಸಿನ ಅಮನ್ ಸೆಹ್ರಾವತ್ ತಮ್ಮ 11ನೇ ವರ್ಷದಲ್ಲಿಯೇ ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡಿದ್ದರು. ಮೊದಲಿಗೆ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿದ್ದ ಅಮನ್ ಸೆಹ್ರಾವತ್‌ರನ್ನು ಈ ನೋವಿನಿಂದ ಹೊರಬರುವ ಸಲುವಾಗಿ ಅವರ ತಂದೆ ಕುಸ್ತಿ ಅಭ್ಯಾಸ ಮಾಡಲು ಕಳಿಸುತ್ತಿದ್ದರು. ಆದರೆ, ತಾಯಿ ತೀರಿ ಹೋದ 6 ತಿಂಗಳಿಗೆ ತಂದೆಯನ್ನೂ ಅಮನ್ ಕಳೆದುಕೊಂಡಿದ್ದರು.
ಹರ್ಯಾಣದ ಜಜ್ಜರ್ ಮೂಲದವರಾದ ಅಮನ್ ಸೆಹ್ರಾವತ್ ಅಲ್ಲಿಗೆ ಅಕ್ಷರಶಃ ಅನಾಥರಾಗಿದ್ದರು. ಬದುಕಿನ ಹಾದಿ ಸಾಗಿಸೋಕೆ ಅವರ ಬಳಿ ಇದ್ದಿದ್ದು, ಕುಸ್ತಿ ಮಾತ್ರ. ಕುಸ್ತಿಯಲ್ಲೇ ಬದುಕು ಕಟ್ಟಿಕೊಳ್ಳಬೇಕು ಎಂದು ಅವರು ನಿರ್ಧಾರ ಮಾಡಿದ್ದರು. ಪ್ರತಿಭಾವಂತನಾಗಿದ್ದ ಅಮನ್ 18ನೇ ವರ್ಕ್ಕೆ ಬರುವ ವೇಳೆಗಾಗಲೇ 23 ವಯೋಮಿತಿ ಕುಸ್ತಿ ಚಾಂಪಿಯನ್ ಆಗಿದ್ದರು. ಈ ಹಂತದಲ್ಲಿ ಈತನಿಗೆ ಬೆಂಬಲವಾಗಿ ನಿಂತಿದ್ದ ಅವರ ತಂಗಿ. ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ತರಬೇತುದಾರ ಪ್ರವೀಣ್ ದಹಿಯಾ ಅವರ ಅಡಿಯಲ್ಲಿ ಪಟ್ಟುಬಿಡದೆ ತರಬೇತಿ ಪಡೆದರು. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪದಕ ಗೆಲ್ಲಲು ಆರಂಭವಾಗುತ್ತಿದ್ದಂತೆ ನೆರವೂ ಕೂಡ ಬರಲಾರಂಭಿಸಿತು.
ಸೆಮೀಸ್‌ನಲ್ಲಿ ಸೋತ ಕುಸ್ತಿಪಟು ಅಮನ್: ಇಂದು ಕಂಚಿನ ಪದಕಕ್ಕೆ ಫೈಟ್
ಮೇ 2024 ರಲ್ಲಿ, ಅಮನ್ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಮತ್ತು ಏಕೈಕ ಭಾರತೀಯ ಪುರುಷ ಕುಸ್ತಿಪಟು ಎನಿಸಿಕೊಂಡಿದ್ದರು. ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ವೇಳೆಯಲ್ಲಿಯೇ ನಾನು ವಿಶ್ವದ ಮೂರು ಟಾಪ್ ರೆಸ್ಲರ್‌ಗಳಲ್ಲಿ ಒಬ್ಬ ಎಂದು ಹೇಳಿದ್ದರು. ಈಗ ಅದರಂತೆ, ಒಲಿಂಪಿಕ್ಸ್‌ನಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಜಯಿಸಿದ್ದಾರೆ.