ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಪದಕ ಗೆಲ್ಲುವುದರ ಹಿಂದೆ ಕೋಚ್ ಪಾತ್ರವಿದೆ. ಆದರೆ ಮನು ಭಾಕರ್ ಕೋಚ್ ಜತೆ ಎರಡು ವರ್ಷಗಳ ಕಾಲ ಮಾತು ಬಿಟ್ಟಿದ್ದರ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದ ಎರಡನೇ ದಿನವೇ ಭಾರತ ಪದಕದ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಒಂದು ಹಂತದಲ್ಲಿ ಶೂಟಿಂಗ್‌ಗೆ ಗುಡ್‌ ಬೈ ಹೇಳಲು ಮುಂದಾಗಿದ್ದ ಮನು ಭಾಕರ್ ಅವರ ಪದಕ ಜರ್ನಿಯ ಕಥೆಯೇ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಒಂದು ಹಂತದಲ್ಲಿ ಕೋಚ್ ಜತೆ ಕಿತ್ತಾಡಿಕೊಂಡಿದ್ದ ಇದೇ ಮನು, ಕೊನೆಗೆ ನೆರವು ಯಾಚಿಸಿದ್ದು ಅದೇ ಕೋಚ್ ಬಳಿ ಎನ್ನುವ ಇಂಟ್ರೆಸ್ಟಿಂಗ್ ವಿಚಾರ ಬಯಲಾಗಿದೆ. ಇದು ಯಶಸ್ವಿ ಕೋಚ್ ಹಾಗೂ ಖ್ಯಾತ ಅಥ್ಲೀಟ್ ನಡುವಿನ ಜುಗಲ್ಬಂದಿಯ ಕಥೆ.

ಮನು ಭಾಕರ್ ಭಾನುವಾರ ಮಹಿಳೆಯರ ವಿಭಾಗದ 10 ಮೀಟರ್ ಏರ್‌ ಪಿಸ್ತೂಲ್ ಫೈನಲ್‌ ಸ್ಪರ್ಧೆಗಿಳಿದಾಗ ಎಲ್ಲರ ಕಣ್ಣು ಅವರ ಕೋಚ್ ಜಸ್‌ಪಾಲ್‌ ರಾಣಾ ಅವರ ಮೇಲಿತ್ತು. ಜಸ್‌ಪಾಲ್‌ ರಾಣಾ ಸ್ವತಃ ಮಾಜಿ ವಿಶ್ವ ಚಾಂಪಿಯನ್ ಹಾಗೂ ಏಷ್ಯನ್ ಗೇಮ್ಸ್ ಚಾಂಪಿಯನ್ ಎನ್ನುವುದು ನಿಮಗೆ ತಿಳಿದಿರಲಿ. ಮನು ಭಾಕರ್ ಫೈನಲ್ ಸುತ್ತಿನಲ್ಲಿ ಶೂಟ್‌ ಮಾಡಿದಾಗಲೂ ಪ್ರತಿ ಬಾರಿ ಕೋಚ್ ಕಡೆ ನೋಡುತ್ತಿದ್ದರು. 

ಕಳೆದ ವರ್ಷ ಶೂಟಿಂಗ್‌ನಿಂದ ದೂರವಾಗಲು ನಿರ್ಧರಿಸಿದ್ದ ಮನು ಭಾಕರ್‌ಗೆ ಈಗ ಒಲಿಂಪಿಕ್ಸ್‌ ಪದಕ! ಇಂಟ್ರೆಸ್ಟಿಂಗ್ ಡೀಟೈಲ್ಸ್

ಪಂದ್ಯ ಮುಗಿದ ಬಳಿಕ ಮಾತನಾಡಿದ ಮನು ಭಾಕರ್, "ನಾನು ನಮ್ಮ ಕೋಚ್ ಬಿಟ್ಟು ಬೇರೆ ಯಾರನ್ನೂ ನೋಡುತ್ತಿರಲಿಲ್ಲ. ಅವರನ್ನು ನೋಡಿದಾಗಲೆಲ್ಲಾ ನನಗೆ ಒಂದು ರೀತಿ ದೈರ್ಯ ಬರುತ್ತಿತ್ತು" ಎಂದು ಹೇಳಿದರು. ಇನ್ನು ಮನು ಮಾತಿಗೆ ಧ್ವನಿಗೂಡಿಸಿದ ಕೋಚ್ ಜಸ್‌ಪಾಲ್‌ ರಾಣಾ, "ನಾವು ಕಣ್ಣುಗಳ ಮೂಲಕವೇ ಸಂಭಾಷಣೆ ನಡೆಸುತ್ತಿದ್ದೆವು, ಹಾಗಾಗಿ ಮಾತನಾಡುವ ಅಗತ್ಯವೇ ಬರಲಿಲ್ಲ" ಎಂದು ಹೇಳಿದ್ದಾರೆ. 

ಟೋಕಿಯೋ ಗೇಮ್ಸ್‌ನಲ್ಲಿ ಎದುರಾಗಿತ್ತು ಸಂಕಷ್ಟ!

2021ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮನು 3 ವಿಭಾಗಗಳಲ್ಲಿ ಸ್ಪರ್ಧಿಸಿದರೂ, ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. 10 ಮೀ. ಏರ್‌ ಪಿಸ್ತೂಲ್‌ ವಿಭಾಗದ ಅರ್ಹತಾ ಸುತ್ತಿನ ವೇಳೆ ಪಿಸ್ತೂಲ್‌ನಲ್ಲಿ ತಾಂತ್ರಿಕ ದೋಷದಿಂದ 6 ನಿಮಿಷ ಸಮಯ ವ್ಯರ್ಥವಾಗಿ ಮನು 12ನೇ ಸ್ಥಾನಕ್ಕೆ ತೃಪ್ತಿಪಟ್ಟು ಫೈನಲ್‌ಗೇರಲು ವಿಫಲರಾಗಿದ್ದರು. ಈ ಘಟನೆ ಇನ್ನುಳಿದ 2 ವಿಭಾಗಗಳಲ್ಲಿ ಸ್ಪರ್ಧಿಸುವಾಗಲೂ ಮನುರನ್ನು ಮಾನಸಿಕವಾಗಿ ಕಾಡಿತ್ತು. 25 ಮೀ. ಪಿಸ್ತೂಲ್‌ ವಿಭಾಗದಲ್ಲಿ 25ನೇ, 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ 7ನೇ ಸ್ಥಾನಕ್ಕೆ ಕುಸಿದಿದ್ದರು.

ಇದರ ಬೆನ್ನಲ್ಲೇ ಮನು ಭಾಕರ್,ಕೋಚ್ ಜಸ್‌ಪಾಲ್‌ ರಾಣಾ ಮೇಲೆ ಆರೋಪ ಮಾಡಿದ್ದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಎರಡು ವರ್ಷಗಳ ಕಾಲ ಒಬ್ಬರಿಗೊಬ್ಬರು ಮಾತೇ ಆಡಿರಲಿಲ್ಲ. ಇನ್ನು ಇದೆಲ್ಲದರ ನಡುವೆ ಮನು ಭಾಕರ್ ಅವರ ತಾಯಿ, ಮೊಬೈಲ್‌ನಲ್ಲಿ ಕೋಚ್‌ ಮೇಲೆ ಅಸಮಾಧಾನ ಹೊರಹಾಕಿ ಮೆಸೇಜ್ ಕಳಿಸಿದ್ದರು. ಇದನ್ನು ಜಸ್‌ಪಾಲ್ ರಾಣಾ, ತಮ್ಮ ಟೀ ಶರ್ಟ್ ಮೇಲೆ ಪ್ರಿಂಟ್ ಹಾಕಿಸಿಕೊಂಡು ನ್ಯಾಷನಲ್ ಶೂಟಿಂಗ್ ಫೆಡರೇಷನ್‌ ಶೂಟಿಂಗ್ ರೇಂಜ್‌ನಲ್ಲಿ ಸುತ್ತಾಡಿದ್ದರು. ಈ ಘಟನೆಯ ಕುರಿತಾಗಿ ಮಧ್ಯ ಪ್ರವೇಶ ಮಾಡಿದ ಮಾಜಿ ಶೂಟಿಂಗ್ ಫೆಡರೇಷನ್ ಅಧ್ಯಕ್ಷ ರಣ್‌ದೀಪ್ ಸಿಂಗ್, ಈ ಎಲ್ಲಾ ವಿವಾದಕ್ಕೆ ಜಸ್‌ಪಾಲ್ ರಾಣಾ ಅವರೇ ಕಾರಣ ಎಂದು ಷರಾ ಬರೆದುಬಿಟ್ಟರು.

ಪ್ಯಾರಿಸ್ ಒಲಿಂಪಿಕ್ಸ್ ಪದಕ ಬೇಟೆಯಾಡಿದ ಮನು ಭಾಕರ್ ಬಗ್ಗೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್ ಸಂಗತಿಗಳಿವು!

ಇದಾದ ನಂತರ ಜಸ್‌ಪಾಲ್ ರಾಣಾ ತೆರೆ ಮರೆಗೆ ಸರಿದರು. ಇದರ ಬೆನ್ನಲ್ಲೇ ಮನು ಭಾಕರ್ ಪದಕ ಬೇಟೆಯಾಡಲು ಪರದಾಡ ತೊಡಗಿದರು. "2021ರಲ್ಲಿ ನಾನು ಪಾಲ್ಗೊಂಡ ಎಲ್ಲಾ ಸ್ಪರ್ಧೆಯಲ್ಲೂ ಸೋತೆ. ಇನ್ನು 2022ರಲ್ಲೂ ಪದಕ ಗೆಲ್ಲಲು ಪರದಾಡಿದೆ. ಇನ್ನು 2023ರ ಮೊದಲಾರ್ಧದಲ್ಲೂ ಇದೇ ಪರಿಸ್ಥಿತಿ ಮುಂದುವರೆಯಿತು" ಎಂದು ಮನು ಭಾಕರ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

ಈ ಅವಧಿಯಲ್ಲಿ ಮನು ಭಾಕರ್, ಹಲವು ಕೋಚ್‌ಗಳನ್ನು ಬದಲಿಸಿದರೂ ಯಶಸ್ಸು ಕಾಣಲಿಲ್ಲ. ಕೊನೆಗೆ ತನ್ನ ಅಹಂಕಾರವನ್ನು ಬದಿಗಿಟ್ಟು, ಕಳೆದ ವರ್ಷ ಜೂನ್‌ನಲ್ಲಿ ರಾಣಾಗೆ ಕರೆ ಮಾಡಿ, ಮತ್ತೆ ನೀವೇ ನನಗೆ ಕೋಚ್‌ ಆಗಬೇಕು ಎಂದು ಮನು ಕೇಳಿಕೊಂಡಿದ್ದರು. ಮನು ಮನವಿಗೆ ಸ್ಪಂದಿಸಿದ ರಾಣಾ, ಅತ್ಯುತ್ತಮ ತರಬೇತಿ ನೀಡಿ ಒಲಿಂಪಿಕ್ಸ್‌ಗೆ ಸಿದ್ಧಗೊಳಿಸಿದರು. ಭಾನುವಾರ ಮನು ಐತಿಹಾಸಿಕ ಪದಕ ಗೆಲ್ಲುವುದನ್ನು ರಾಣಾ, ಸ್ಟ್ಯಾಂಡ್ಸ್‌ನಲ್ಲಿ ಕೂತು ವೀಕ್ಷಿಸಿ ಭಾವುಕರಾದರು.