ಸೆಲ್ಯೂಟ್ ನಾದಾ..! ಪ್ಯಾರಿಸ್ ಒಲಿಂಪಿಕ್ಸ್ ಫೆನ್ಸಿಂಗ್‌ನಲ್ಲಿ 7 ತಿಂಗಳ ಗರ್ಭಿಣಿ ಸ್ಪರ್ಧೆ!
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 7 ತಿಂಗಳ ಗರ್ಭಿಣಿ ಫೆನ್ಸರ್ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಪ್ಯಾರಿಸ್: ಈಜಿಪ್ಟ್ ಫೆನ್ಸಿಂಗ್ ಪಟು, 7 ತಿಂಗಳ ಗರ್ಭಿಣಿ ನಾದಾ ಹಫೀಜ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. 26 ವರ್ಷ ನಾದಾ, ವಿಶ್ವ ನಂ.10ನೇ ಶ್ರೇಯಾಂಕಿತ ಯುಎಸ್‌ಎಯ ಎಲಿಜಬೆತ್ ಟಾರ್ಟಕೋವ್ಕ್ಸಿ ವಿರುದ್ಧ 15-13 ಅಂಕಗಳ ಅಂತರದ ಭರ್ಜರಿ ಗೆಲುವು ಸಾಧಿಸಿ ಮಿಂಚಿದ್ದಾರೆ. ಆದರೆ ಇದಾದ ಬಳಿಕ 16ರ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಜಿಯೋನ್ ಹೇಯಂಗ್ ಎದುರು ಸೋಲು ಕಾಣುವ ಮೂಲಕ ಅಭಿಯಾನ ಮುಗಿಸಿದ್ದಾರೆ
ಮೊದಲ ಹೋರಾಟದ ಗೆಲುವಿನ ಬಳಿಕ ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಹಿರಂಗಪಡಿಸಿರುವ ಅವರು, 'ಪುಟ್ಟ ಒಲಿಂಪಿಯನ್ ಒಬ್ಬರನ್ನು ಜೊತೆಯಲ್ಲಿಟ್ಟುಕೊಂಡು ಆಡುತ್ತಿದ್ದೇನೆ' ಎಂದು ಬರೆದಿದ್ದಾರೆ.
ಮನು ಭಾಕರ್‌ಗೆ ಇದೆ ಹ್ಯಾಟ್ರಿಕ್ ಒಲಿಂಪಿಕ್ ಪದಕ ಗೆಲ್ಲುವ ಅವಕಾಶ..! ಇನ್ನೊಂದು ಸ್ಪರ್ಧೆಗೆ ಕ್ಷಣಗಣನೆ
ಸಾಮಾನ್ಯವಾಗಿ ಗರ್ಭಿಣಿಯಾದಾಗ ತುಂಬಾ ಸೂಕ್ಷ್ಮವಾಗಿ ಹಾಗೂ ಎಚ್ಚರಿಕೆಯಿಂದ ಇರಬೇಕು ಎಂದು ಹೇಳುವುದು ಸಾಮಾನ್ಯ. ಆದರೆ ನಾದಾ ಹಫೀಜ್ ತಾವು 7 ತಿಂಗಳು ಗರ್ಭಿಣಿಯಾಗಿದ್ದರೂ, ಪ್ರತಿಷ್ಠಿತ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈಜಿಪ್ಟ್ ದೇಶವನ್ನು ಪ್ರತಿನಿಧಿಸುವ ಮೂಲಕ ಜಾಗತಿಕ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಾವು 7 ತಿಂಗಳ ಗರ್ಭಿಣಿಯಾಗಿದ್ದರೂ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಧೈರ್ಯದ ಬಗ್ಗೆ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ನಾದಾ ಹಫೀಜ್, ಪ್ಯಾರಿಸ್ ಒಲಿಂಪಿಕ್ಸ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಮುನ್ನ 2016ರ ರಿಯೋ ಒಲಿಂಪಿಕ್ಸ್ ಹಾಗೂ 2021ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು.