33ನೇ ಆವೃತ್ತಿ ಒಲಿಂಪಿಕ್ಸ್‌ ಜುಲೈ 26ರಂದು ಆರಂಭಗೊಂಡಿದ್ದು ಇಂದು ಅಧಿಕೃತವಾಗಿ ತೆರೆ ಬೀಳಲಿದೆ. ಭಾನುವಾರ ನಡೆಯಲಿದೆ. ಬಳಿಕ ಸಂಜೆ ವೇಳೆ ಅದ್ಧೂರಿ ಸಮಾರೋಪ ಸಮಾರಂಭ ಆರಂಭಗೊಳ್ಳಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್‌: ಸಿಟಿ ಆಫ್‌ ಲವ್‌ ಖ್ಯಾತಿಯ ಪ್ಯಾರಿಸ್‌ನಲ್ಲಿ ಕಳೆದ 17 ದಿನಗಳಿಂದ ನಡೆಯುತ್ತಿರುವ ಜಾಗತಿಕ ಕ್ರೀಡಾ ಹಬ್ಬ ಒಲಿಂಪಿಕ್ಸ್‌ಗೆ ಭಾನುವಾರ ತೆರೆ ಬೀಳಲಿದೆ. ಪ್ಯಾರಿಸ್‌ನ ಸೀನ್‌ ನದಿಯಲ್ಲಿ ಅದ್ಧೂರಿಯಾಗಿ ಚಾಲನೆ ದೊರೆತಿದ್ದ ಕ್ರೀಡಾಕೂಟ, ಸ್ಟೇಡ್‌ ಡೆ ಫ್ರಾನ್ಸ್‌ ಕ್ರೀಡಾಂಗಣದಲ್ಲಿ ವರ್ಣರಂಜಿತ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಳ್ಳಲಿದೆ.

33ನೇ ಆವೃತ್ತಿ ಒಲಿಂಪಿಕ್ಸ್‌ ಜುಲೈ 26ರಂದು ಆರಂಭಗೊಂಡಿದ್ದು, 200ಕ್ಕೂ ಹೆಚ್ಚು ದೇಶಗಳ ಅಥ್ಲೀಟ್‌ಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಕೆಲ ಸ್ಪರ್ಧೆಗಳು ಕ್ರೀಡಾಕೂಟದ ಕೊನೆ ದಿನವಾದ ಭಾನುವಾರ ನಡೆಯಲಿದೆ. ಬಳಿಕ ಸಂಜೆ ವೇಳೆ ಅದ್ಧೂರಿ ಸಮಾರೋಪ ಸಮಾರಂಭ ಆರಂಭಗೊಳ್ಳಲಿದೆ.

100ಕ್ಕೂ ಹೆಚ್ಚು ಕಲಾವಿದರು, ನೃತ್ಯಗಾರರು ವಿವಿಧ ಸಂಗೀತ ಪ್ರದರ್ಶನಗಳನ್ನು ನೀಡಲಿದ್ದು, ಸರ್ಕಸ್ ಕಲಾವಿದರು ಕೂಡಾ ಪಾಲ್ಗೊಳ್ಳಲಿದ್ದಾರೆ. ಸಿಡಿಮದ್ದು ಪ್ರದರ್ಶನ, ನೃತ್ಯ, ಲೇಸರ್‌ ಲೈಟ್‌ ಶೋ ಕೂಡಾ ಸಮಾರಂಭದ ಪ್ರಮುಖ ಆಕರ್ಷಣೆಯಾಗಿರಲಿದೆ. ಫ್ರಾನ್ಸ್‌ನ ಗತ ವೈಭವ ಸಾರುವ ಪ್ರದರ್ಶನಗಳು ಸಮಾರಂಭದಲ್ಲಿರಲಿವೆ ಎಂದು ವರದಿಯಾಗಿದೆ.

ಈ ಸಲ ಒಲಿಂಪಿಕ್ಸ್‌ನಲ್ಲಿ ಭಾರತದ ಸವಾಲು ಅಂತ್ಯ: ಗೆದ್ದಿದ್ದು ಕೇವಲ 6 ಪದಕ, ಹಲವು ಪದಕಗಳು ಜಸ್ಟ್‌ ಮಿಸ್‌!

ಪಥಸಂಚಲನ: ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲಾ 206 ದೇಶಗಳ ಅಥ್ಲೀಟ್‌ಗಳಿಂದ ಸಮಾರೋಪ ಸಮಾರಂಭದಲ್ಲಿ ಪಥಸಂಚಲನ ನಡೆಯಲಿದೆ. ಉದ್ಘಾಟನಾ ಸಮಾರಂಭದ ವೇಳೆ ಸೀನ್‌ ನದಿ ಮೇಲೆ ಬೋಟ್‌ಗಳಲ್ಲಿ ಪಥಸಂಚಲನ ನಡೆಸಲಾಗಿತ್ತು. ಸಮಾರೋಪ ಸಮಾರಂಭ ಸಾಂಪ್ರದಾಯಿಕವಾಗಿ ಕ್ರೀಡಾಂಗಣದಲ್ಲೇ ಆಯೋಜನೆಗೊಳ್ಳಲಿದೆ.

ಒಲಿಂಪಿಕ್‌ ಧ್ವಜ ಲಾಸ್‌ ಏಂಜಲೀಸ್‌ಗೆ ಹಸ್ತಾಂತರ

2028ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲಿರುವ ಲಾಸ್‌ ಏಂಜಲೀಸ್‌ಗೆ ಈ ಬಾರಿ ಸಮಾರೋಪ ಸಮಾರಂಭದಲ್ಲಿ ಒಲಿಂಪಿಕ್‌ ಧ್ಜಜ ಹಸ್ತಾಂತರಿಸಲಾಗುತ್ತದೆ. ಪ್ರತಿ ಬಾರಿ ಒಲಿಂಪಿಕ್ಸ್‌ ಸಮಾರೋಪದ ವೇಳೆ ಮುಂದಿನ ಕ್ರೀಡಾಕೂಟದ ಆಯೋಜಕರಿಗೆ ಧ್ವಜ ಹಸ್ತಾಂತರಿಸುವ ಸಂಪ್ರದಾಯವಿದೆ.

Big Breaking: ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ ಗೆಲ್ಲುವ ಕನಸು ಇನ್ನೂ ಕೊಂಚ ತಡ..! ಇಲ್ಲಿದೆ ಹೊಸ ಅಪ್‌ಡೇಟ್

ಶ್ರೀಜೇಶ್‌, ಮನು ಭಾಕರ್‌ ಭಾರತದ ಧ್ಜಜಧಾರಿಗಳು

ಸಮಾರೋಪ ಸಮಾರಂಭದ ಪಥಸಂಚನಲದಲ್ಲಿ ಶೂಟರ್‌ ಮನು ಭಾಕರ್‌ ಹಾಗೂ ಹಾಕಿ ತಂಡದ ಗೋಲ್‌ ಕೀಪರ್ ಶ್ರೀಜೇಶ್‌ ಭಾರತದ ಧ್ವಜಧಾರಿಯಾಗಿರಲಿದ್ದಾರೆ. ಇನ್ನೂ ಕೆಲವು ಕ್ರೀಡಾಪಟುಗಳು, ಅಧಿಕಾರಿಗಳು ಕೂಡಾ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಟಾಮ್‌ ಕ್ರೂಸ್‌ ಸೇರಿ ಪ್ರಮುಖರು ಭಾಗಿ

ಸಮಾರಂಭದಲ್ಲಿ ಹಾಲಿವುಡ್‌ ನಟ ಟಾಮ್‌ ಕ್ರೂಸ್‌ ಸೇರಿ ಪ್ರಮುಖ ಕಲಾವಿದರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕ್ರೂಸ್‌ ಅವರು ಸ್ಟಂಟ್‌ ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 2 ಗಂಟೆಗೂ ಹೆಚ್ಚು ಕಾಲ ಸಮಾರಂಭ ನಡೆಯಲಿದೆ ಎಂದು ವರದಿಯಾಗಿದೆ.

ಸಮಾರೋಪ ಸಮಾರಂಭ

ರಾತ್ರಿ 12.30ರಿಂದ(ಭಾರತೀಯ ಕಾಲಮಾನ)

ನೇರಪ್ರಸಾರ: ಸ್ಪೋರ್ಟ್ಸ್‌ 18 ಚಾನೆಲ್‌, ಜಿಯೋ ಸಿನಿಮಾ