Asianet Suvarna News Asianet Suvarna News

Novak Djokovic ಕೋವಿಡ್‌ ಲಸಿಕೆ ಪಡೆಯಲು ಆಸಕ್ತಿ ತೋರಿದ ಟೆನಿಸ್ ದಿಗ್ಗಜ ನೊವಾಕ್ ಜೋಕೋವಿಚ್

* ಕೋವಿಡ್ ಲಸಿಕೆ ಪಡೆಯುವ ವಿಚಾರದಲ್ಲಿ ಮನಸ್ಸು ಬದಲಿಸಿದ ನೊವಾಕ್ ಜೋಕೋವಿಚ್

* ಪ್ಯಾರಿಸ್‌ ಒಲಿಂಪಿಕ್ಸ್‌ನ ಪದಕದ ಮೇಲೆ ದೃಷ್ಟಿ ನೆಟ್ಟಿರುವ ಜೋಕೋ

* ಕೋವಿಡ್ ಲಸಿಕೆ ಪಡೆಯದೆ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಿಂದ ಹೊರಗುಳಿದಿದ್ದ ವಿಶ್ವದ ನಂ.1 ಟೆನಿಸಿಗ 

Novak Djokovic eyeing gold at Paris Olympics 2024 Tennis Legend denies anti vaccination claim kvn
Author
Bengaluru, First Published Feb 19, 2022, 11:50 AM IST | Last Updated Feb 19, 2022, 11:50 AM IST

ಬೆಲ್ಗ್ರೇಡ್(ಫೆ.19)‌: ಇತ್ತೀಚೆಗಷ್ಟೇ ಕೋವಿಡ್‌ ಲಸಿಕೆ (Covid vaccination) ಕಡ್ಡಾಯಗೊಳಿಸುವ ಟೂರ್ನಿಗಳನ್ನು ತ್ಯಾಗ ಮಾಡಲು ಸಿದ್ಧ ಎಂದಿದ್ದ ವಿಶ್ವ ನಂ.1 ಟೆನಿಸಿಗ ನೊವಾಕ್‌ ಜೋಕೋವಿಚ್‌ (Novak Djokovic) ಈಗ ಮನಸ್ಸು ಬದಲಾಯಿಸಿದ್ದು, ಭವಿಷ್ಯದಲ್ಲಿ ಲಸಿಕೆ ಪಡೆಯುವ ಬಗ್ಗೆ ಮುಕ್ತ ಮನಸ್ಸು ಹೊಂದಿದ್ದೇನೆ ಎಂದಿದ್ದಾರೆ. ಅಲ್ಲದೇ, ಪ್ಯಾರಿಸ್‌ ಒಲಿಂಪಿಕ್ಸ್‌ನ (Paris Olympics) ಪದಕದ ಮೇಲೆ ದೃಷ್ಟಿ ನೆಟ್ಟಿರುವುದಾಗಿ ತಿಳಿಸಿದ್ದಾರೆ. 

‘ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ನನಗೆ ಪದಕ ಗೆಲ್ಲಲಾಗಲಿಲ್ಲ. ಒಲಿಂಪಿಕ್ಸ್‌ ಚಿನ್ನದ ಪದಕ ನನ್ನ ದೊಡ್ಡ ಬಯಕೆ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಅದನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದೇನೆ’ ಎಂದಿದ್ದಾರೆ. ‘ಮೆಲ್ಬರ್ನ್‌ನಲ್ಲಿ ನನಗಾದ ಅನುಭವ ಅನಿರೀಕ್ಷಿತ. ಅದನ್ನು ಮರೆಯಲು ಕಷ್ಟವಿದೆ. ಅಲ್ಲಿ ನನಗಾದ ಎಲ್ಲಾ ಒಳ್ಳೆಯ ಅನುಭವಗಳನ್ನು ಯಾವತ್ತೂ ನೆನಪಿಸಿಕೊಳ್ಳುತ್ತೇನೆ. ಗಡಿಪಾರು ಘಟನೆಯ ಹೊರತಾಗಿಯೂ ಆಸ್ಪ್ರೇಲಿಯಾ ಜೊತೆ ನನಗೆ ಉತ್ತಮ ಸಂಬಂಧವಿದೆ. ಮುಂದೆ ಅಲ್ಲಿಗೆ ತೆರಳಿ ಆಡುವ ಬಯಕೆ ಇದೆ’ ಎಂದು ಹೇಳಿದ್ದಾರೆ.

ಈ ಮೊದಲು ವಿಶ್ವದ ನಂ.1 ಟೆನಿಸಿಗ ನೊವಾಕ್ ಜೋಕೋವಿಚ್ ಇತ್ತೀಚೆಗೆ ನೀಡಿದ  ಸಂದರ್ಶನವೊಂದರಲ್ಲಿ, ಬಲವಂತವಾಗಿ ಕೋವಿಡ್‌ ಲಸಿಕೆ ಪಡೆಯುವುದನ್ನು ನನ್ನ ಮೇಲೆ ಹೇರಿದರೆ, ತಾವು ಟೆನಿಸ್‌ ವೃತ್ತಿಜೀವನವನ್ನು ತ್ಯಾಗ ಮಾಡಲು ಸಿದ್ದರಿರುವುದಾಗಿ ಹೇಳಿದ್ದರು. ದಿಗ್ಗಜ ಟೆನಿಸಿಗನ ಈ ಹೇಳಿಕೆಗೆ ಜಗತ್ತಿನಾದ್ಯಂತ ಹಲವು ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದವು. 

ಇದರ ಬೆನ್ನಲ್ಲೇ ಸೆರಮ್‌ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆದಾರ್ ಪೂನಾವಾಲಾ, ಲಸಿಕೆ ಪಡೆಯದಿರುವ ನೊವಾಕ್ ಜೋಕೋವಿಚ್ ಅವರ ಅಭಿಪ್ರಾಯವನ್ನು ನಾನು ಸ್ವಾಗತಿಸುತ್ತೇನೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ನೀವು ಇನ್ನಷ್ಟು ವರ್ಷಗಳ ಕಾಲ ಟೆನಿಸ್ ಆಡುವುದನ್ನು ನಾನು ನೋಡಲು ಇಷ್ಟಪಡುತ್ತೇನೆ. ಕೋವಿಡ್ ಲಸಿಕೆ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳಲಿದ್ದಾರಾ ಎನ್ನುವ ವಿಶ್ವಾಸವಿದೆ ಎಂದು ಟ್ವೀಟ್ ಮಾಡಿದ್ದರು.

ಬೆಂಗಳೂರು ಓಪನ್‌: ಸತತ 2ನೇ ಫೈನಲ್‌ಗೆ ಸಾಕೇತ್‌-ರಾಮ್‌

ಬೆಂಗಳೂರು: ಭಾರತದ ಸಾಕೇತ್‌ ಮೈನೇನಿ-ರಾಮ್‌ಕುಮಾರ್‌ ರಾಮನಾಥನ್‌ ಜೋಡಿ ಬೆಂಗಳೂರು ಓಪನ್‌ (Bengaluru Open) ಎಟಿಪಿ ಟೆನಿಸ್‌ ಟೂರ್ನಿಯಲ್ಲಿ ಸತತ 2ನೇ ಬಾರಿ ಫೈನಲ್‌ ಪ್ರವೇಶಿಸಿದೆ. ಕಳೆದ ವಾರ ನಡೆದ ಬೆಂಗಳೂರು ಓಪನ್‌-1 ನಲ್ಲಿ ಪ್ರಶಸ್ತಿ ಗೆದ್ದಿದ್ದ ಈ ಜೋಡಿ ಮತ್ತೊಮ್ಮೆ ಚಾಂಪಿಯನ್‌ ಆಗುವ ನಿರೀಕ್ಷೆಯಲ್ಲಿದೆ.

ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಈ ಜೋಡಿ ಫ್ರಾನ್ಸ್‌ನ ಎನ್ಜೋ-ಆಸ್ಪ್ರೇಲಿಯಾದ ಆ್ಯಂಡ್ರೂ ಹ್ಯಾರಿಸ್‌ ವಿರುದ್ಧ 6-1, 7-6(3) ಸೆಟ್‌ಗಳಿಂದ ಗೆಲುವು ಸಾಧಿಸಿತು. ಸಾಕೇತ್‌-ರಾಮ್‌ ಜೋಡಿ ಫೈನಲ್‌ನಲ್ಲಿ ಭಾರತದ ಅರ್ಜುನ್‌ ಖಾಡೆ-ಆಸ್ಟ್ರಿಯಾದ ಅಲೆಕ್ಸಾಂಡರ್‌ ಎರ್ಲೆರ್‌ ಜೋಡಿಯನ್ನು ಎದುರಿಸಲಿದೆ. 

Pro Kabaddi League: ಬೆಂಗಳೂರು ಬುಲ್ಸ್‌ ಪ್ಲೇ ಆಫ್ಸ್‌ ಭವಿಷ್ಯ ಇಂದು ನಿರ್ಧಾರ..!

ಖಾಡೆ-ಎರ್ಲೆರ್‌ ಜೋಡಿ ಸೆಮೀಸ್‌ನಲ್ಲಿ ಶ್ರೀರಾಮ್‌ ಬಾಲಾಜಿ-ವಿಷ್ಣುವರ್ಧನ್‌ ಜೋಡಿಯನ್ನು ಸೋಲಿಸಿತು. ಸಿಂಗಲ್ಸ್‌ನಲ್ಲಿ ಆಸ್ಪ್ರೇಲಿಯಾದ ಅಲೆಕ್ಸಾಂಡರ್‌ ವುಕಿಚ್‌, ಬಲ್ಗೇರಿಯಾದ ದಿಮಿತಾರ್‌ ಕುಜ್‌ಮನೋವ್‌, ಫ್ರಾನ್ಸ್‌ನ ಎನ್ಜೋ, ಕ್ರೊವೇಷಿಯಾದ ಬೊರ್ನಾ ಗೊಜೊ ಸೆಮಿಫೈನಲ್‌ ಪ್ರವೇಶಿಸಿದರು.

ಬಾಸ್ಕೆಟ್‌ಬಾಲ್‌: ಫೆಬ್ರವರಿ 24ರಿಂದ ಭಾರತದ ಅರ್ಹತಾ ಪಂದ್ಯಗಳು

ನವದೆಹಲಿ: ಮುಂಬರುವ ಫಿಬಾ ಬಾಸ್ಕೆಟ್‌ಬಾಲ್‌ ವಿಶ್ವಕಪ್‌ 2023ರ ಏಷ್ಯನ್‌ ಅರ್ಹತಾ ಟೂರ್ನಿಯಲ್ಲಿ ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಅರ್ಹತಾ ಪಂದ್ಯಗಳು ಫಿಲಿಪ್ಪೀನ್ಸ್‌ನ ಮಾನಿಲಾದಲ್ಲಿ ಫೆಬ್ರವರಿ 24ರಿಂದ 28ರ ವರೆಗೆ ನಿಗದಿಯಾಗಿದ್ದು, ಭಾರತದ ಜೊತೆ ಗುಂಪಿನಲ್ಲಿ ನ್ಯೂಜಿಲೆಂಡ್‌, ಫಿಲಿಪ್ಪೀನ್ಸ್‌, ಕೊರಿಯಾ ತಂಡಗಳಿವೆ. 

ಭಾರತ ತಂಡದಲ್ಲಿ ಕರ್ನಾಟಕದ ಬಿ.ಎಂ.ಮನೋಜ್‌ ಕೂಡಾ ಸ್ಥಾನ ಪಡೆದಿದ್ದಾರೆ. ತಂಡಕ್ಕೆ ಫೆಬ್ರವರಿ 24ರಂದು ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರಾಗಲಿದೆ. ಬಳಿಕ ಫೆಬ್ರವರಿ 25ಕ್ಕೆ ಫಿಲಿಪ್ಪೀನ್ಸ್‌, ಫೆಬ್ರವರಿ 26ಕ್ಕೆ ಕೊರಿಯಾ ಹಾಗೂ ಫೆಬ್ರವರಿ 28ರಂದು ಮತ್ತೆ ನ್ಯೂಜಿಲೆಂಡ್‌ ಎದುರು ಸ್ಪರ್ಧಿಸಲಿದೆ.

Latest Videos
Follow Us:
Download App:
  • android
  • ios