ಟೆನಿಸ್ ದಿಗ್ಗಜ ಪೀಟ್ ಸಾಂಪ್ರಸ್ ದಾಖಲೆ ಸರಿಗಟ್ಟಿದ ಜೋಕೋವಿಚ್..!
ಸರ್ಬಿಯಾದ ಸ್ಟಾರ್ ಟೆನಿಸ್ ಆಟಗಾರ ನೊವಾಕ್ ಜೋಕೋವಿಚ್ ತಮ್ಮ ಬಾಲ್ಯದ ಹೀರೋ ಪೀಟ್ ಸಾಂಪ್ರಾಸ್ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಲಂಡನ್(ನ.08): ವಿಶ್ವ ನಂ.1 ಸರ್ಬಿಯಾದ ಟೆನಿಸಿಗ ನೊವಾಕ್ ಜೋಕೋವಿಚ್, ಟೆನಿಸ್ ದಿಗ್ಗಜ ಅಮೆರಿಕದ ಪೀಟ್ ಸಾಂಪ್ರಾಸ್ ಹೆಸರಿನಲ್ಲಿದ್ದ ದಾಖಲೆಯಲ್ಲಿ ಸರಿಗಟ್ಟಿದ್ದಾರೆ. ವರ್ಷಾಂತ್ಯವನ್ನು ನಂ.1 ಸ್ಥಾನದಲ್ಲಿ ಕೊನೆಗೊಳಿಸುವ ಮೂಲಕ ಜೋಕೋವಿಚ್ ಈ ದಾಖಲೆ ಮಾಡಿದ್ದಾರೆ.
ವರ್ಷಾಂತ್ಯವನ್ನು ನಂ.1 ಸ್ಥಾನದಲ್ಲಿ 6ನೇ ಬಾರಿ ಕೊನೆಗೊಳಿಸಿದ ದಾಖಲೆ ಇಲ್ಲಿಯವರೆಗೂ ಸಾಂಪ್ರಾಸ್ ಹೆಸರಿನಲ್ಲಿತ್ತು. ಈ ವರ್ಷವೂ ಸೇರಿ ಜೋಕೋವಿಚ್ ಒಟ್ಟು 6ನೇ ಬಾರಿ ವಿಶ್ವ ನಂ.1 ಸ್ಥಾನದಲ್ಲಿ ವರ್ಷವನ್ನು ಕೊನೆಗೊಳಿಸುವುದರಲ್ಲಿದ್ದಾರೆ. ಸ್ಪೇನ್‌ನ ರಾಫೆಲ್ ನಡಾಲ್, ಮುಂದಿನ ವಾರ ನಡೆಯಲಿರುವ ಸೋಫಿಯಾ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಜೋಕೋವಿಚ್ ನಂ.1ನಲ್ಲಿ ಮುಂದುವರಿಯಲಿದ್ದಾರೆ.
33 ವರ್ಷದ ಸರ್ಬಿಯಾದ ಸ್ಟಾರ್ ಟೆನಿಸ್ ಆಟಗಾರ 2011, 2012, 2014, 2015 ಹಾಗೂ 2018ರಲ್ಲಿ ಜೋಕೋವಿಚ್ ನಂ.1 ಸ್ಥಾನದಲ್ಲಿ ವರ್ಷ ಕೊನೆಗೊಳಿಸಿದ್ದರು. ಪೀಟ್ ಸಾಂಪ್ರಾಸ್ ಆಟವನ್ನು ನೋಡುತ್ತಾ ಬೆಳೆದವನು ನಾನು, ಈಗ ಅವರ ದಾಖಲೆಯನ್ನು ಸರಿಗಟ್ಟಿರುವುದಕ್ಕೆ ನಿಜಕ್ಕೂ ಹೆಮ್ಮೆಯಾಗುತ್ತಿದೆ ಎಂದು ನೊವಾಕ್ ಜೋಕೋವಿಚ್ ಹೇಳಿದ್ದಾರೆ.
ಪ್ಯಾರಿಸ್ ಮಾಸ್ಟರ್ಸ್: ಕ್ವಾರ್ಟರ್‌ಗೆ ಲಗ್ಗೆಯಿಟ್ಟ ರಾಫೆಲ್ ನಡಾಲ್
17 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ಜೋಕೋವಿಚ್ ಕಳೆದ ಸೆಪ್ಟೆಂಬರ್‌ನಲ್ಲೇ ಸ್ಯಾಂಪ್ರಾಸ್ ಹೆಸರಿನಲ್ಲಿದ್ದ(286 ವಾರಗಳ ಕಾಲ ನಂ.1 ಸ್ಥಾನ) ದಾಖಲೆಯನ್ನು ಹಿಂದಿಕ್ಕಿದ್ದರು ಎನ್ನುವುದು ಮತ್ತೊಂದು ವಿಶೇಷ.