Asianet Suvarna News Asianet Suvarna News

French Open:ಲಸಿಕೆ ಪಡೆಯದಿದ್ರೆ ಜೋಕೋವಿಚ್‌ಗೆ ಫ್ರಂಚ್‌ ಓಪನ್‌ಗೂ ಇಲ್ಲ ಎಂಟ್ರಿ..!

* ಆಸ್ಟ್ರೇಲಿಯನ್ ಓಪನ್ ಟೆನಿಸ್‌ ಟೂರ್ನಿ ಬಳಿಕ ಜೋಕೋವಿಚ್‌ಗೆ ಮತ್ತೊಂದು ಶಾಕ್

* ಲಸಿಕೆ ಪಡೆಯದಿದ್ರೆ ವಿಶ್ವ ನಂ.1 ಟೆನಿಸ್ ಆಟಗಾರನಿಗೆ ಫ್ರೆಂಚ್ ಓಪನ್ ಟೂರ್ನಿಗೂ ಇಲ್ಲ ಅವಕಾಶ

* 2022ರ ಫ್ರೆಂಚ್‌ ಓಪನ್‌ ಟೂರ್ನಿಯು ಮೇ ಇಲ್ಲವೇ ಜೂನ್‌ ತಿಂಗಳಲ್ಲಿ ಆರಂಭ

No vaccine no French Open entry for Novak Djokovic says French Sports ministry kvn
Author
Bengaluru, First Published Jan 18, 2022, 10:21 AM IST

ಪ್ಯಾರಿಸ್(ಜ.18)‌: ಕೋವಿಡ್‌ ಲಸಿಕೆ (COVID Vaccine) ಪಡೆಯದ ಕಾರಣ ಆಸ್ಪ್ರೇಲಿಯಾದಿಂದ ಗಡಿಪಾರಾದ ವಿಶ್ವ ನಂ.1 ಟೆನಿಸಿಗ, ಸರ್ಬಿಯಾದ ನೋವಾಕ್‌ ಜೋಕೋವಿಚ್‌ಗೆ (Novak Djokovic) ಹೊಸ ತಲೆನೋವು ಶುರುವಾಗಿದೆ. ಅವರು ಈ ವರ್ಷ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂ ನಲ್ಲಿ (French Open Grandslam) ಆಡುವ ಅವಕಾಶವನ್ನೂ ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದ್ದಾರೆ. ಸೋಮವಾರ ಫ್ರಾನ್ಸ್‌ನ ಕ್ರೀಡಾ ಸಚಿವೆ ರೋಕ್ಸಾನಾ ಮಾರ್ಸಿನೆಯೆನು ಕೋಔಇಡ್‌ ಲಸಿಕೆ ಪಡೆದಿದ್ದರಷ್ಟೇ ಟೂರ್ನಿಯಲ್ಲಿ ಆಡಲು ಅವಕಾಶ ನೀಡಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಲಸಿಕೆ ಪಡೆಯದಿದ್ದರೂ ಫ್ರೆಂಚ್‌ ಓಪನ್‌ನಲ್ಲಿ ಜೋಕೋವಿಚ್‌ ಆಡಬಹುದು ಎಂದು ಸಚಿವೆ ಹೇಳಿದ್ದರು, ಆದರೆ ಭಾನುವಾರ ಫ್ರಾನ್ಸ್‌ ಸರ್ಕಾರ ಕೋವಿಡ್‌ ಲಸಿಕೆಗೆ ಸಂಬಂಧಿಸಿದಂತೆ ಹೊಸ ಕಾನೂನು ಜಾರಿ ಮಾಡಿದ ಪರಿಣಾಮ ಕ್ರೀಡಾ ಸಚಿವೆ ತಮ್ಮ ಹೇಳಿಕೆ ಬದಲಿಸಿದ್ದಾರೆ. ಹೊಸ ಕಾನೂನಿನ ಪ್ರಕಾರ, ಸಾವರ್ಜನಿಕ ಸ್ಥಳಗಳಿಗೆ ಭೇಟಿ ನೀಡಲು ಕೋವಿಡ್‌ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯಗೊಳಿಸಲಾಗಿದೆ. ‘ನಿಯಮ ಬಹಳ ಸರಳವಾಗಿದೆ. ಹೋಟೆಲ್‌, ಸಿನಿಮಾ, ಕ್ರೀಡಾಂಗಣ ಸೇರಿ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ಸಿಗಬೇಕು ಎಂದರೆ ಕೋಔಇಡ್‌ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಈ ನಿಯಮ ಎಲ್ಲರಿಗೂ ಅನ್ವಯವಾಗುತ್ತದೆ. ಅವರು ಪ್ರೇಕ್ಷಕರಾಗಿರಲಿ ಇಲ್ಲವೇ ಆಟಗಾರರಾಗಿರಲಿ’ ಎಂದು ರೋಕ್ಸಾನಾ ಹೇಳಿದ್ದಾರೆ.

2022ರ ಫ್ರೆಂಚ್‌ ಓಪನ್‌ ಟೂರ್ನಿಯು ಮೇ ಇಲ್ಲವೇ ಜೂನ್‌ ತಿಂಗಳಲ್ಲಿ ನಡೆಯಲಿದ್ದು ಆ ವೇಳೆಗೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದರೆ ನಿಯಮಗಳನ್ನು ಸಡಿಲಿಸಬಹುದು. ಮುಂದಿನ ಆದೇಶದ ವರೆಗೂ ಈ ನಿಯಮ ಜಾರಿಯಲ್ಲಿ ಇರಲಿದೆ ಎಂದು ರೋಕ್ಸಾನಾ ಸ್ಪಷ್ಟಪಡಿಸಿದ್ದಾರೆ. ವಿಶ್ವ ಟೆನಿಸ್‌ನ ಶೇ.95ರಷ್ಟು ಆಟಗಾರರು ಹಾಗೂ ಆಟಗಾರ್ತಿಯರು ಕೋವಿಡ್‌ ಲಸಿಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ತವರು ತಲುಪಿದ ಜೋಕೋವಿಚ್‌

ಬೆಲ್ಗ್ರೇಡ್‌: ಆಸ್ಪ್ರೇಲಿಯಾದ ಸರ್ಕಾರ ಗಡಿಪಾರು ಮಾಡಿದ ಬಳಿಕ ಭಾನುವಾರ ಮೆಲ್ಬರ್ನ್‌ನಿಂದ ದುಬೈಗೆ ತೆರಳಿದ್ದ ಜೋಕೋವಿಚ್, ಸೋಮವಾರ ದುಬೈನಿಂದ ತಮ್ಮ ತವರು ಸರ್ಬಿಯಾಧ ಬೆಲ್ಗ್ರೇಡ್‌ಗೆ ಪ್ರಯಾಣಿಸಿದರು. ಅಲ್ಲಿನ ನಿಕೊಲಾ ಟೆಸ್ಲಾ ವಿಮಾನ ನಿಲ್ದಾಣದ ಬಳಿ ಜೋಕೋವಿಚ್‌ರನ್ನು ಸ್ವಾಗತಿಸಲು ನೂರಾರು ಅಭಿಮಾನಿಗಳು ನೆರೆದಿದ್ದರು. ಭಾನುವಾರವಷ್ಟೇ ಸರ್ಬಿಯಾ ಅಧ್ಯಕ್ಷ ಅಲೆಕ್ಸಾಂಡರ್‌ ವುಸಿಚ್‌, ಜೋಕೋವಿಚ್‌ಗೆ ತವರಿಗೆ ವಾಪಸಾಗುವಂತೆ ತಿಳಿಸಿದ್ದರು.

ಆಸ್ಪ್ರೇಲಿಯನ್‌ ಓಪನ್‌: ನಡಾಲ್‌, ಒಸಾಕ 2ನೇ ಸುತ್ತಿಗೆ ಲಗ್ಗೆ

ಮೆಲ್ಬರ್ನ್‌: ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ (Australian Open Grand slam) ಟೆನಿಸ್‌ ಟೂರ್ನಿಯಲ್ಲಿ ರಾಫೆಲ್‌ ನಡಾಲ್‌(Rafael Nadal), ನವೊಮಿ ಒಸಾಕ, ಆಶ್ಲೆ ಬಾರ್ಟಿ ಸುಲಘ ಗೆಲುವುಗಳೊಂದಿಗೆ 2ನೇ ಸುತ್ತು ಪ್ರವೇಶಿಸಿದ್ದಾರೆ. ಸೋಮವಾರ ಮೊದಲ ಸುತ್ತಿನಲ್ಲಿ ನಡಾಲ್‌, ಅಮೆರಿಕದ ಗಿರೊನ್‌ ವಿರುದ್ಧ 6-1, 6-4, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಟೂರ್ನಿಯಲ್ಲಿ ಆಡುತ್ತಿರುವ ಏಕೈಕ ಮಾಜಿ ಚಾಂಪಿಯನ್‌ ನಡಾಲ್‌, 2ನೇ ಬಾರಿಗೆ ಆಸ್ಪ್ರೇಲಿಯನ್‌ ಓಪನ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. 2ನೇ ಸುತ್ತಿನಲ್ಲಿ ನಡಾಲ್‌ಗೆ ಜರ್ಮನಿಯ ಯಾನ್ನಿಕ್‌ ಹಾನ್‌ಮನ್‌ ಎದುರಾಗಲಿದ್ದಾರೆ.

Australian Open 2022: ಇಂದಿನಿಂದ ಆಸ್ಟ್ರೇಲಿಯನ್ ಓಪನ್‌ ಗ್ರ್ಯಾನ್‌ ಸ್ಲಾಂ ಆರಂಭ

ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ 2 ಬಾರಿ ಚಾಂಪಿಯನ್‌ ಜಪಾನ್‌ನ ಒಸಾಕ, ಕೊಲಂಬಿಯಾದ ಕ್ಯಾಮಿಲಾ ಒಸೊರಿಯೊ ವಿರುದ್ಧ 6-3, 6-3 ಸೆಟ್‌ಗಳಲ್ಲಿ ಗೆದ್ದರೆ, ಅಗ್ರ ಶ್ರೇಯಾಂಕಿತೆ, ಆಸ್ಪ್ರೇಲಿಯಾದ ಬಾರ್ಟಿ ಉಕ್ರೇನ್‌ನ ಸುರೆಂಕೊ ವಿರುದ್ಧ 6-0, 6-1ರಲ್ಲಿ ಭರ್ಜರಿ ಗೆಲುವು ದಾಖಲಿಸಿದರು. ಫ್ರೆಂಚ್‌ ಓಪನ್‌ ಚಾಂಪಿಯನ್‌ ಬಾರ್ಬೊರಾ ಕ್ರೇಜಿಕೋವಾ, 5ನೇ ಶ್ರೇಯಾಂಕಿತೆ ಮರಿಯಾ ಸಕ್ಕಾರಿ, 2 ಬಾರಿ ಆಸ್ಪ್ರೇಲಿಯನ್‌ ಓಪನ್‌ ಚಾಂಪಿಯನ್‌ ವಿಕ್ಟೋರಿಯಾ ಅಜರೆಂಕ ಸಹ 2ನೇ ಸುತ್ತಿಗೆ ಪ್ರವೇಶ ಪಡೆದರು.

Follow Us:
Download App:
  • android
  • ios