Asianet Suvarna News Asianet Suvarna News

ಕಂಠೀರವ ಸ್ಟೇಡಿಯಂನಲ್ಲಿನ್ನು ಫುಟ್ಬಾಲ್‌ಗೆ ಅವಕಾಶವಿಲ್ಲ: ಕ್ರೀಡಾ ಸಚಿವ ನಾರಾಯಣಗೌಡ

* ಕಂಠೀರವ ಸ್ಟೇಡಿಯಂಗೆ ಹೊಸದಾಗಿ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣ

* ಸಿಂಥೆಟಿಕ್‌ ಟ್ರ್ಯಾಕ್‌ನ ಗುಣಮಟ್ಟ ಪರಿಶೀಲಿಸಿದ ಕ್ರೀಡಾಸಚಿವ ನಾರಾಯಣಗೌಡ

* ಏಪ್ರಿಲ್‌ ತಿಂಗಳಲ್ಲಿ ರಾಜ್ಯ ಮಿನಿ ಒಲಿಂಪಿಕ್ಸ್‌ ನಡೆಸಲು ಉದ್ದೇಶಿಸಿಸಲಾಗಿದೆ

No football in Sri Kanteerava stadium says Karnataka Sports Minister KC Narayana Gowda kvn
Author
Bengaluru, First Published Feb 25, 2022, 10:28 AM IST

ಬೆಂಗಳೂರು(ಫೆ.25): ಕಂಠೀರವ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಗುಣಮಟ್ಟದ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸಲಾಗಿದ್ದು, ಶೀಘ್ರದಲ್ಲೇ ಉದ್ಘಾಟನೆ ಮಾಡುತ್ತೇವೆ. ಈ ಕ್ರೀಡಾಂಗಣದಲ್ಲಿ ಇನ್ನು ಮುಂದೆ ಫುಟ್ಬಾಲ್‌ ಪಂದ್ಯಗಳಿಗೆ ಅವಕಾಶ ನೀಡದಿರಲು ನಿರ್ಧರಿಸಿದ್ದೇವೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ (KC Narayana Gowda) ಅವರು ತಿಳಿಸಿದರು. ಈ ವರೆಗೆ ಬೆಂಗಳೂರು ಎಫ್‌ಸಿ ತಂಡವು ಕಂಠೀರವ ಸ್ಟೇಡಿಯಂ ಅನ್ನು ತನ್ನ ತವರು ಸ್ಟೇಡಿಯಂ ಮಾಡಿಕೊಂಡಿತ್ತು. ಇದೀಗ ಸಚಿವರ ಹೇಳಿಕೆಯು ಬಿಎಫ್‌ಸಿ ಪಾಳಯದಲ್ಲಿ ಹೊಸ ಸಂಚಲನ ಹುಟ್ಟುಹಾಕಿದೆ.

ಗುರುವಾರ ಕಂಠೀರವ ಕ್ರೀಡಾಂಗಣಕ್ಕೆ (Sree Kanteerava stadium) ಭೇಟಿ ನೀಡಿದ ಅವರು, ಹೊಸದಾಗಿ ಅಳವಡಿಸಲಾದ ಸಿಂಥೆಟಿಕ್‌ ಟ್ರ್ಯಾಕ್‌ನ (synthetic athletics track) ಗುಣಮಟ್ಟಪರಿಶೀಲಿಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿದೇಶದಿಂದ ತರಿಸಿದ ಹೊಸ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸಲಾಗಿದೆ. ಇದಕ್ಕೆ 5 ಕೋಟಿ ರು. ವೆಚ್ಚವಾಗಿದ್ದು, ಮುಂದೆ 2 ಕೋಟಿ ರು. ವೆಚ್ಚದಲ್ಲಿ ಪೇಟಿಂಗ್‌ ಕೆಲಸ ಆರಂಭಿಸುತ್ತೇವೆ ಎಂದರು.

ಹಳೆ ಟ್ರ್ಯಾಕ್‌ನಿಂದ ಕ್ರೀಡಾಪಟುಗಳ ಅಭ್ಯಾಸ, ಟೂರ್ನಿಗಳ ಆಯೋಜನೆಗೆ ಸಮಸ್ಯೆ ಆಗಿತ್ತು. ಹೊಸ ಟ್ರ್ಯಾಕ್‌ನಲ್ಲಿ ಖೇಲೋ ಇಂಡಿಯಾ (Khelo India) ಯೂನಿವರ್ಸಿಟಿ ಗೇಮ್ಸ್‌ ಸೇರಿದಂತೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಲು ಅನುಕೂಲವಾಗಲಿದೆ. ಅಮೃತ ಕ್ರೀಡಾ ದತ್ತು ಯೋಜನೆಯಲ್ಲಿ 75 ಕ್ರೀಡಾಪಟುಗಳಿಗೆ ಇಲಾಖೆಯಿಂದ ವಿಶೇಷ ತರಬೇತಿ ನೀಡಲಾಗುತ್ತಿದೆ. ಸಿದ್ಧಿ ಮಕ್ಕಳಲ್ಲಿರುವ ವಿಶೇಷ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ತರಬೇತಿ ನೀಡಲಾಗುತ್ತಿದೆ ಎಂದ ಸಚಿವರು, ಬಜೆಟ್‌ನಲ್ಲಿ ಕ್ರೀಡೆಗೆ ಉತ್ತಮ ಅನುದಾನ ನೀಡುತ್ತೇವೆ. ಅಥ್ಲೀಟ್‌ಗಳ ಪ್ರಗತಿಗೆ ಸೂಕ್ತ ಕೋಚ್‌ಗಳ ನೇಮಕಾತಿ ಮಾಡುತ್ತೇವೆ ಎಂದು ತಿಳಿಸಿದರು.

ಏಪ್ರಿಲ್‌ನಲ್ಲಿ ಮಿನಿ ಒಲಿಂಪಿಕ್ಸ್‌:

ಏಪ್ರಿಲ್‌ ತಿಂಗಳಲ್ಲಿ ರಾಜ್ಯ ಮಿನಿ ಒಲಿಂಪಿಕ್ಸ್‌ ನಡೆಸಲು ಉದ್ದೇಶಿಸಿದ್ದೇವೆ. ಅಂಡರ್‌-14 ವಿಭಾಗದಲ್ಲಿ ನಡೆಯುವ ಈ ಕ್ರೀಡಾಕೂಟ ಕಂಠೀರವದ ಜೊತೆ ಬೆಂಗಳೂರಿನ ಇತರೆ ಕೆಲ ಕ್ರೀಡಾಂಗಣಗಳಲ್ಲಿ ಆಯೋಜಿಸುತ್ತೇವೆ ಎಂದು ಸಚಿವರು ಹೇಳಿದರು.

ಐಎಸ್‌ಎಲ್‌ ಫೈನಲ್‌ಗೆ ಪ್ರೇಕ್ಷಕರಿಗೆ ಪ್ರವೇಶ ?

ನವದೆಹಲಿ: 2 ವರ್ಷಗಳಲ್ಲಿ ಮೊದಲ ಬಾರಿ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿ ಫೈನಲ್‌ಗೆ ಪ್ರೇಕ್ಷಕರಿಗೆ ಅನುಮತಿ ಸಿಗುವ ನಿರೀಕ್ಷೆ ಇದೆ. ಕಳೆದ ನವೆಂಬರ್‌ನಲ್ಲಿ ಆರಂಭವಾಗಿರುವ ಟೂರ್ನಿಯ ಫೈನಲ್‌ ಪಂದ್ಯ ಗೋವಾದಲ್ಲಿ ಮಾರ್ಚ್‌ 20ಕ್ಕೆ ನಿಗದಿಯಾಗಿದೆ. 

Sri Kanteerava Stadium: ಕೊನೆಗೂ ಕಂಠೀರವಕ್ಕೆ ಹೊಸ ಟ್ರ್ಯಾಕ್‌ ಮೆರುಗು

ಜನವರಿ 23ರಂದು ಪ್ರಕಟವಾದ ಸರ್ಕಾರದ ಮಾರ್ಗಸೂಚಿ ಅನ್ವಯ ಸಾರ್ವಜನಿಕ ಸಮಾರಂಭಗಳಲ್ಲಿ ಆಸನದ ಶೇ.50ರಷ್ಟು ಭರ್ತಿ ಮಾಡಲು ಅವಕಾಶವಿದೆ. ಹೀಗಾಗಿ ಆಯೋಜಕರು ಪ್ರೇಕ್ಷಕರಿಗೆ ಅನುಮತಿ ನೀಡುವ ಸಾಧ್ಯತೆ ಇದ್ದು, ಸುಮಾರು 9,500 ಮಂದಿಗೆ ಪಂದ್ಯ ವೀಕ್ಷಣೆಗೆ ಅವಕಾಶ ಸಿಗುವ ನಿರೀಕ್ಷೆ ಇದೆ.

ಎಟಿಕೆ-ಒಡಿಶಾ ನಡುವಿನ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯ

ಇಂಡಿಯನ್ ಸೂಪರ್‌ ಲೀಗ್ (Indian Super League) ಟೂರ್ನಿಯ 100ನೇ ಪಂದ್ಯದಲ್ಲಿ ಎಟಿಕೆ ಮೋಹನ್ ಬಗಾನ್ ಹಾಗೂ ಓಡಿಶಾ ಎಫ್‌ಸಿ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಿದೆ. ಎಟಿಕೆ ಮೋಹನ್ ಬಗಾನ್ ತಂಡವು ಪ್ರಸಕ್ತ ಆವೃತ್ತಿಯ ಐಎಸ್‌ಎಲ್ ಟೂರ್ನಿಯಲ್ಲಿ ಮತ್ತೊಮ್ಮೆ ಒಡಿಶಾ ಸವಾಲನ್ನು ಮೆಟ್ಟಿನಿಲ್ಲಲು ಯಶಸ್ವಿಯಾಗಲಿಲ್ಲ.

ಪಂದ್ಯದ 5ನೇ ನಿಮಿಷದಲ್ಲೇ ರಿಡೀಮ್‌ ಗೋಲು ಬಾರಿಸುವ ಮೂಲಕ ಒಡಿಶಾಗೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಇದಾದ ಬಳಿಕ ಎಟಿಕೆ ಮೋಹನ್ ಬಗಾನ್‌ ಪರ ಪಂದ್ಯದ 8ನೇ ನಿಮಿಷದಲ್ಲಿ ಜೊನಿ ಕೌಕೊ ಗೋಲು ಬಾರಿಸಿ ಸಮಬಲ ಸಾಧಿಸುವಂತೆ ಮಾಡಿದರು. ಇದಾದ ಬಳಿಕ ಉಭಯ ತಂಡಗಳು ಸಾಕಷ್ಟು ಹರಸಾಹಸ ಮಾಡಿದವಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ.
 

Follow Us:
Download App:
  • android
  • ios