ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ನಿಖಾತ್ , ಸಂಭ್ರಮದಲ್ಲಿ ಭಾರತದ ಮಾನ ಕಳೆದ ತೆಲಂಗಾಣ ಕ್ರೀಡಾ ಪ್ರಾಧಿಕಾರ ಅಧ್ಯಕ್ಷ!
ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಬಾಕ್ಸರ್ ನಿಖಾತ್ ಜರೀನ್ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತ 49 ಪದಕ ಬಾಚಿಕೊಂಡಿದೆ. ಆದರೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತೆಲಂಗಾಣ ಕ್ರೀಡಾ ಪ್ರಾಧಿಕಾರ ಅಧ್ಯಕ್ಷ ರಾಜಕೀಯ ಪ್ರದರ್ಶಿಸಿ ಭಾರತದ ಮಾನ ಕಳೆದಿದ್ದಾರೆ.
ಬರ್ಮಿಂಗ್‌ಹ್ಯಾಮ್(ಆ.07): ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಬಾಕ್ಸರ್ ನಿಖಾತ್ ಜರೀನ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ತೀವ್ರ ಪೈಪೋಟಿಯಿಂದ ಕೂಡಿದ ಫೈನಲ್ ಸುತ್ತಿನಲ್ಲಿ ನಿಖಾತ್ ಜರೀನ್ ಉತ್ತರ ಐರ್ಲೆಂಡ್‌ನ ಕ್ಯಾರ್ಲಿ ಎಂಸಿ ನೌಲ್ ವಿರುದ್ಧ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಮೊದಲ ಸುತ್ತಿನ ಬಳಿಕ ನಿಖಾತ್ 5-0 ಮುನ್ನಡೆ ಸಾಧಿಸಿದ್ದರು. ಎರಡನೇ ಸುತ್ತಿನಲ್ಲಿ ಎಂಸಿ ನೌಲ್ ಆಕ್ರಣಣಕಾರಿ ಆಟಕ್ಕೆ ಮುಂದಾದರು. ಆದರೆ ಪಂಚ್‌ನಲ್ಲಿ ನಿಖಾತ್ ಭರ್ಜರಿ ಮುನ್ನಡೆ ಸಾಧಿಸಿದರು. ಫಲಿತಾಂಶ ಘೋಷಿಸಲು ಕೆಲ ಹೊತ್ತು ತೆಗೆದ ರೆಫ್ರಿ, ನಿಖಾತ್ ಜರೀನ್ ಕೈಎತ್ತಿ ಗೆಲುವು ಖಚಿತಪಡಿಸಿದರು. ಈ ವೇಳೆ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತೆರಳಿರುವ ತೆಲಂಗಾಣ ರಾಜ್ಯ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಎ.ವೆಂಕಟೇಶ್ವರ್ ರೆಡ್ಡಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ರಾಜಕೀಯ ಪ್ರದರ್ಶಿಸಿದ್ದಾರೆ. ನಿಖಾತ್ ಗೆಲುವು ದಾಖಲಿಸುತ್ತಿದ್ದಂತೆ ಎ.ವೆಂಕಟೇಶ್ವರ್ ರೆಡ್ಡಿ ತಿರಂಗ ಹಿಡಿದು ಸಂಭ್ರಮಿಸಿದ್ದಾರೆ. ಆದರೆ ತಿರಂಗ ಜೊತೆಗೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಫೋಟೋ ಹಿಡಿದು ಸಂಭ್ರಮಿಸಿದ್ದಾರೆ. ಈ ನಡೆ ಯಾಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಪ್ರಶ್ನಿಸಿದ್ದಾರೆ.
ನಿಖಾತ್ ಜರೀನ್ ಗೆಲುವಿನ ಸಂಭ್ರಮದಲ್ಲಿ ತಿರಂಗ ಮುಂದೆ ಕೆ ಚಂದ್ರಶೇಕರ್ ರಾವ್ ಫೋಟೋ ಯಾಕೆ? ನಿಖಾತ್ ಜರೀನ್ ಫೋಟೋ ಹಿಡಿಯಬಹುದಿತ್ತಲ್ಲಾ? ಅಥವಾ ಕೇವಲ ತಿರಂಗ ಮಾತ್ರ ಸಾಕಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಥ್ಲೀಟ್ ಫೋಟೋ ಹಿಡಿದು ಸಂಭ್ರಮ ಪಡುವ ಬದಲು ಕೆಸಿಆರ್ ಫೋಟೋ ಹಿಡಿದು ಸಂಭ್ರಮಿಸುವ ಹಿಂದಿನ ಲಾಜಿಕ್ ಏನು ಎಂದು ಪ್ರಶ್ನಿಸಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್ ತ್ರಿಪಲ್ ಜಂಪ್‌ನಲ್ಲಿ ಭಾರತಕ್ಕೆ ಚಿನ್ನ, 47 ಪದಕದೊಂದಿಗೆ 5ನೇ ಸ್ಥಾನ!
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ರಾಜಕೀಯ ಪ್ರದರ್ಶಿಸುವುದು ಸೂಕ್ತವಲ್ಲ. ನಿಖಾತ್ ಜರೀನ್ ತೆಲಂಗಾಣ ಮೂಲದವರು. ಹೀಗಾಗಿ ತೆಲಂಗಾಣ ಕ್ರೀಡಾಪಟುಗಳ ಜೊತೆಗೆ ಕ್ರೀಡಾ ಪ್ರಾಧಿಕಾರ ಹಾಗೂ ನಿಯೋಗ ಬರ್ಮಿಂಗ್‌ಹ್ಯಾಮ್‌ನಲ್ಲಿ ಬೀಡುಬಿಟ್ಟಿದೆ. ನಿಖಾತ್ ತೆಲಂಗಾಣ ಮಾತ್ರವಲ್ಲ ದೇಶಕ್ಕೆ ಚಿನ್ನದ ಕಿರೀಟ ತೊಡಿಸಿದ್ದಾರೆ. ನಿಖಾತ್ ಜರೀನ್ ಫೋಟೋ ಹಿಡಿದು ಸಂಭ್ರಮಿಸುವುದು ಹೆಚ್ಚು ಸೂಕ್ತ. ಆದರೆ ತೆಲಂಗಾಣ ಸಿಎಂ ಕೆಸಿಆರ್ ಫೋಟೋ ಹಿಡಿದು ಸಂಭ್ರಮಿಸುತ್ತಿರುವುದು ಸೂಕ್ತವಲ್ಲ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಇಷ್ಟೇ ಅಲ್ಲ ಈ ರೀತಿಯ ರಾಜಕೀಯ ಹಾಗೂ ಒಲೈಕೆ ಅಂತಾರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲಿ ಅಗತ್ಯವಿಲ್ಲ ಅನ್ನೋ ಮಾತುಗಳು ಕೇಳಿಬಂದಿದೆ.
ನಿಖಾತ್ ಜರೀನ್ ಚಿನ್ನದ ಪದಕದೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ಒಟ್ಟು 49 ಪದಕ ಗೆದ್ದುಕೊಂಡಿದೆ. 17 ಚಿನ್ನ, 13 ಬೆಳ್ಳಿ ಹಾಗೂ 19 ಕಂಚಿನ ಪದಕ ಭಾರತ ಗೆದ್ದುಕೊಂಡಿದೆ. ಈ ಮೂಲಕ ಪದಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. 4ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ 18 ಚಿನ್ನದ ಪದಕ ಗೆದ್ದುಕೊಂಡಿದೆ. ಇನ್ನೊಂದು ಚಿನ್ನ ಗೆದ್ದರೆ ಭಾರತ 4ನೇ ಸ್ಥಾನಕ್ಕೇರಲಿದೆ.