ರಾಷ್ಟ್ರೀಯ ಕಿರಿಯರ ಸ್ಕೀಯಿಂಗ್: ಬೆಳ್ಳಿ ಪದಕ ಗೆದ್ದ ರಾಜ್ಯ ಜಿಯಾ
ರಾಷ್ಟ್ರೀಯ ಸಬ್-ಜೂನಿಯರ್ ಆಲ್ಪೈನ್ ಸ್ಕೀಯಿಂಗ್‌ನಲ್ಲಿ ಕರ್ನಾಟಕದ ಯುವ ಪ್ರತಿಭೆ ಜಿಯಾ ಆರ್ಯನ್ ಬೆಳ್ಳಿ ಪದಕ ಜಯಿಸಿದ ಸಾಧನೆ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಗುಲ್ಮಾರ್ಗ್(ಫೆ.11): ಇಲ್ಲಿ ನಡೆದ ರಾಷ್ಟ್ರೀಯ ಸಬ್-ಜೂನಿಯರ್ ಆಲ್ಪೈನ್ ಸ್ಕೀಯಿಂಗ್‌ನಲ್ಲಿ ಸ್ಪರ್ಧಿಸಿದ ಕರ್ನಾಟಕದ ಮೊದಲ ಕ್ರೀಡಾಪಟು ಎನ್ನುವ ಹಿರಿಮೆಗೆ ಪಾತ್ರರಾಗಿರುವ ಜಿಯಾ ಆರ್ಯನ್, ಸ್ಲಾಲೋಮ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಸುಮಾರು 1 ಕಿ.ಮೀ. ದೂರವಿದ್ದ ಟ್ರ್ಯಾಕ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಜಿಯಾ 26.01 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಕೇವಲ 0.1 ಸೆಕೆಂಡ್‌ನಲ್ಲಿ ಜಿಯಾ ಚಿನ್ನದ ಪದಕದಿಂದ ವಂಚಿತರಾದರು.
11 ವರ್ಷದ ಜಿಯಾ ಕಾಶ್ಮೀರದ ಪಹಲ್ಗಂನಲ್ಲಿರುವ ಜವಾಹರ್ ಪ್ರರ್ವತಾರೋಹಣ ಮತ್ತು ಚಳಿಗಾಲದ ಕ್ರೀಡಾ ಸಂಸ್ಥೆಯಲ್ಲಿ ಕಳೆದ 2 ವರ್ಷಗಳಿಂದ ತರಬೇತಿ ಪಡೆಯುತ್ತಿದ್ದಾರೆ. ಸದ್ಯ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಸಜ್ಜಾಗಿರುವ ಜಿಯಾ, 2024ರಲ್ಲಿ ದಕ್ಷಿಣ ಕೊರಿಯಾದ ಗಾಂಗ್ವನ್‌ನಲ್ಲಿ ನಡೆಯಲಿರುವ ಕಿರಿಯರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಗುರಿ ಹೊಂದಿದ್ದಾರೆ. ಕ್ರೀಡಾಕೂಟಕ್ಕೆ ಅರ್ಹತೆ ಪಡೆದರೆ, ಆ ಸಾಧನೆ ಮಾಡುವ ಭಾರತದ ಮೊದಲ ಕ್ರೀಡಾಪಟು ಎನಿಸಲಿದ್ದಾರೆ.
ರಾಷ್ಟ್ರೀಯ ಸ್ಕೀಯಿಂಗ್‌ನಲ್ಲಿ ರಾಜ್ಯದ ಜಿಯಾ ಆರ್ಯನ್ ಸ್ಪರ್ಧೆ
ಏನಿದು ಆಲ್ಪೈನ್ ಸ್ಕೀಯಿಂಗ್?
ಹಿಮ ಗುಡ್ಡದ ಮೇಲಿಂದ ಸ್ಕೀ (ಉಪಕರಣ)ದ ಸಹಾಯದಿಂದ ಜಾರುವ ಕ್ರೀಡೆಯನ್ನು ಆಲ್ಪೈನ್ ಸ್ಕೀಯಿಂಗ್ ಎನ್ನುತ್ತಾರೆ. ಸಾಮಾನ್ಯವಾಗಿ ವೃತ್ತಿಪರ ಸ್ಕೀಯಿಂಗ್ ಸ್ಪರ್ಧೆಗಳ ಒಟ್ಟು ದೂರ 2.4 ಕಿ.ಮೀಗಳಿಂದ 3 ಕಿ.ಮೀ ಇರುತ್ತವೆ. ಸ್ಪರ್ಧಿಗಳು ಸರಾಸರಿ ಗಂಟೆಗೆ 60ರಿಂದ 90 ಕಿ.ಮೀ ವೇಗದಲ್ಲಿ ಚಲಿಸುತ್ತಾರೆ. ಸಬ್ ಜೂನಿಯರ್ ಇಲ್ಲವೇ ಜೂನಿಯರ್ ವಿಭಾಗದಲ್ಲಿ ಗಂಟೆಗೆ 40ರಿಂದ 50 ಕಿ.ಮೀ ವೇಗ ಇರುತ್ತದೆ.