ಬೆಂಗಳೂರು(ಡಿ.17):  ಭಗವಾನ್ ಶ್ರೀ ಮಹಾವೀರ್ ಜೈನ್ ಅಸೋಸಿಯೇಷನ್ ಹಾಗೂ ಜೈನ್ ಸಹಕಾರ್ ಬೆಂಗಳೂರು ಸಹಯೋಗದೊಂದಿಗೆ  ರಾಜ್ಯ ಮಟ್ಟದ ಜೈನ್ ಸಹಕಾರ್ ಬ್ಯಾಡ್ಮಿಂಟನ್ ಹಾಗೂ ಕ್ರೀಡಾಕೂಟ ಸ್ಪರ್ಧೆ ಯಶಸ್ವಿಯಾಗಿ ನಡೆದಿದೆ. ನಗರದ ನಾಗರಭಾವಿ  ಅಕ್ಷಯ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಕ್ರೀಡಾಕೂಟ ಏರ್ಪಡಿಸಲಾಗಿದ್ದು, ಜೈನ ಸಮುದಾಯದ ಕ್ರೀಡಾ ಸ್ಪೂರ್ತಿ ಎಲ್ಲ ಮೆಚ್ಚುಗೆಗೆ ಪಾತ್ರವಾಗಿದೆ. 

ರಾಜ್ಯಮಟ್ಟದ ಜೈನ್ ಸಹಕಾರಾ ಬ್ಯಾಡ್ಮಿಂಟನ್ ಮತ್ತು ಇತರ ಆಟೋಟ ಸ್ಪರ್ಧೆಗಳನ್ನು ಪುರುಷರಿಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆಯೋಜಿಸಲಾಗಿತ್ತು.  ಬೆಂಗಳೂರಿನ ಕೊಟ್ಟಿಗೆಪಾಳ್ಯ ವಾರ್ಡಿನ ಬಿಬಿಎಂಪಿ ಸದಸ್ಯರಾದ ಶ್ರೀ ಮೋಹನ್ ಕುಮಾರ್ ಹಾಗೂ ರಾಷ್ಟ್ರೀಯ ಕ್ರೀಡಾಪಟು ಸಹನಾ ಕುಮಾರಿ  ಕ್ರೀಡೆಗೆ ಚಾಲನೆ ನೀಡಿದರು. ವಿದ್ಯಾ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆ ಮೂಡಬಿದರೆಯ ಅಧ್ಯಕ್ಷ ಯುವರಾಜ್ ಜೈನ್ರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. 

ಜೈನ್ ಸಹಕಾರ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಸ್ಪರ್ಧಿಗಳಿಗೆ ಆದಮ್ಯಚೇತನ ಫೌಂಡೇಶನ್ ಅಧ್ಯಕ್ಷರಾದ ತೇಜಸ್ವಿನಿ ಅನಂತ್ ಕುಮಾರ್ ಪ್ರಶಸ್ತಿ ವಿತರಿಸಿದರು. ಇನ್ನು ಸಮಾರೋಪ ಸಮಾರಂಭದಲ್ಲಿ  ಚಲನಚಿತ್ರ ಖ್ಯಾತ ನಟಿ  ಅಭಿನಯ,  ಐಪಿಎಸ್ ಅಧಿಕಾರಿ ಜಿನೇಂದ್ರ ಖನಗಾವಿ ಹಾಗೂ ಯುವ ಪ್ರಖ್ಯಾತ ಚಿತ್ರಕಲಾವಿದ ಚಿತ್ತಾ ಜಿನೇಂದ್ರ ಎಂ ಎಂ ಪಾಲ್ಗೊಂಡಿದ್ದರು. 

ಜೈನ್ ಸಹಕಾರ್ ಬ್ಯಾಡ್ಮಿಂಟನ್ ಕ್ರೀಡೋತ್ಸವವನ್ನು ಪ್ರತಿ ವರ್ಷ ಯಶಸ್ವಿಯಾಗಿ ಆಯೋಜಿಸುತ್ತಿದ್ದು, ಈ ಬಾರಿ ನಿರೀಕ್ಷೆ ಮೀರಿದ ಸ್ಪಂದನೆ ಸಿಕ್ಕಿದೆ. ಬೆಂಗಳೂರಿನಲ್ಲಿ ಜಂಜಾಟದ ಜೀವನದಲ್ಲಿ ಕೊನೆಪಕ್ಷ ಒಂದು ದಿನವಾದರೂ ಎಲ್ಲರೂ ಮುಕ್ತ ಮನಸ್ಸಿನಿಂದ ನಗುನಗುತ್ತಾ ಇರೋಣ ಎಂಬುದೇ ನಮ್ಮೆಲ್ಲರ ಆಶಯ ಎಂದು ಆಯೋಜಕರಾದ ಮಾಳ ಹರ್ಷೇಂದ್ರ ಜೈನ್ ಹೇಳಿದರು.