* ಮುವಾಯ್‌ ಥಾಯ್‌ ಸ್ಪರ್ಧೆಯಲ್ಲಿ ಕರ್ನಾಟಕದ ಸೂರ್ಯ ಸಾಗರ್‌ ಚಾಂಪಿಯನ್‌* 2019ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆದಿದ್ದ ಮ್ಯಾಕ್ಸ್‌ ಮೊವಾಯ್‌ ಥಾಯ್‌ನಲ್ಲಿಯೂ ಸೂರ್ಯ ಸ್ಪರ್ಧಿಸಿದ್ದರು* ಮುವಾಯ್‌ ಥಾಯ್‌ ಎನ್ನುವುದು ಒಂದು ಸಮರ ಕಲೆ ಕ್ರೀಡೆ

ಬೆಂಗಳೂರು(ಸೆ.08) ಭಾರತದಲ್ಲಿ ಪ್ರಥಮ ಬಾರಿಗೆ ನಡೆದ ವಿಶ್ವ ಬಾಕ್ಸಿಂಗ್‌ ಕೌನ್ಸಿಲ್‌(ಡಬ್ಲ್ಯುಬಿಸಿ) ಮುವಾಯ್‌ ಥಾಯ್‌ ಸ್ಪರ್ಧೆಯಲ್ಲಿ ಕರ್ನಾಟಕದ ಸೂರ್ಯ ಸಾಗರ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಸೆ.4ರಂದು ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಅರುಣ್‌ ಸಾಗರ್‌ ಪುತ್ರ ಸೂರ್ಯ ಕರ್ನಾಟಕದವರೇ ಆದ ಬಸವೇಶ್‌ ಅನೂಪ್‌ರನ್ನು ಸೋಲಿಸಿದರು.

ಈ ಮೊದಲು 2019ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆದಿದ್ದ ಮ್ಯಾಕ್ಸ್‌ ಮೊವಾಯ್‌ ಥಾಯ್‌ನಲ್ಲಿಯೂ ಸೂರ್ಯ ಸ್ಪರ್ಧಿಸಿದ್ದರು. ಅದರಲ್ಲಿ ಗೆದ್ದಿದ್ದ ಸೂರ್ಯ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದರು. 2015ರಲ್ಲಿ ಮೊದಲ ಬಾರಿ ಮ್ಯಾಕ್ಸ್‌ ಮೊವಾಯ್‌ ಥಾಯ್‌ನಲ್ಲಿ ಭಾರತದಿಂದ ಅಭಿಮನ್ಯು ಠಾಕೂರ್‌ ಸ್ಪರ್ಧಿಸಿದ್ದರೂ ಗೆಲ್ಲಲು ಸಾಧ್ಯವಾಗಿರಲಿಲ್ಲ.

ಥಾಯ್ಲೆಂಡ್‌ನಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ಅರುಣ್ ಸಾಗರ್ ಪುತ್ರ ಸೂರ್ಯ

ಮುವಾಯ್‌ ಥಾಯ್‌ ಭಾರತದಲ್ಲಿ ಹಲವು ಬಾರಿ ಆಡಲಾಗಿದ್ದರೂ, ಡಬ್ಲ್ಯುಬಿಸಿ ಮುವಾಯ್‌ ಥಾಯ್‌ ಟೈಟಲ್‌ನಡಿ ಇದೇ ಮೊದಲ ಬಾರಿಗೆ ನಡೆಯಿತು. ಸೆ.4ರಂದು ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 9 ಪಂದ್ಯಗಳು ನಡೆದರೂ ಒಂದು ಪಂದ್ಯ ಮಾತ್ರ ಡಬ್ಲ್ಯುಬಿಸಿ ಮುವಾಯ್‌ ಥಾಯ್‌ ಆಗಿದ್ದು, ಉಳಿದ 8 ಸ್ಪರ್ಧೆಗಳು ವಿಶ್ವ ಕಿಕ್‌ ಬಾಕ್ಸಿಂಗ್‌ ನೇಷನ್‌ ಟೈಟಲ್‌ನಡಿ ನಡೆದವು.

ಏನಿದು ಮೊವಾಯ್‌ ಥಾಯ್‌?

ಮುವಾಯ್‌ ಥಾಯ್‌ ಎನ್ನುವುದು ಒಂದು ಸಮರ ಕಲೆ. ಇದು ಥಾಯ್ಲೆಂಡ್‌ನ ರಾಷ್ಟ್ರೀಯ ಕ್ರೀಡೆ. ಪಂಚ್‌, ಕಿಕ್‌, ಮೊಣಕೈ ಹಾಗೂ ಮಂಡಿಗಳ ಮೂಲಕ ಜಾಡಿಸಿ ಬಿಸಾಡುವ ಈ ಕ್ರೀಡೆ ಬಾಕ್ಸಿಂಗ್‌ನ್ನು ಹೋಲುತ್ತದೆ. ಆರ್ಟ್‌ ಆಫ್‌ 8 ಲಿಂಬ್ಸ್‌ (ಎಂಟು ಅಂಗಗಳ ಕಲೆ) ಎಂದೇ ಗುರುತಿಸಿಕೊಂಡಿದೆ. ದೇಹದ 8 ಭಾಗಗಳಾದ ಎರಡು ಕೈ, ಎರಡು ಕಾಲು, ಎರಡು ಮೊಣಕೈ ಹಾಗೂ 2 ಮೊಣಕಾಲುಗಳನ್ನು ಬಳಸಿ ಆಡಲಾಗುತ್ತದೆ. ಈ ಕ್ರೀಡೆಯಲ್ಲಿ ತಲಾ 3 ನಿಮಿಷದ 5 ಸುತ್ತುಗಳಿವೆ. ರಕ್ಷಣಾತ್ಮಕ ಆಟ, ತಂತ್ರಗಾರಿಕೆ, ಕಿಕ್‌ ಹಾಗೂ ಪಂಚ್‌ಗಳ ಆಧಾರದ ಮೇಲೆ ಅಂಕ ಸಿಗಲಿದೆ.