Rafael Nadal: ಟೆನಿಸ್ ವೃತ್ತಿ ಬದುಕಿನ 91ನೇ ಪ್ರಶಸ್ತಿ ಗೆದ್ದ ರಾಫೆಲ್ ನಡಾಲ್
* ಸ್ಪೇನ್ ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ
* ವೃತ್ತಿಬದುಕಿನ 91ನೇ ಪ್ರಶಸ್ತಿ ಗೆದ್ದುಕೊಂಡ ನಡಾಲ್
* 35 ವರ್ಷದ ನಡಾಲ್ ಅತೀ ಹೆಚ್ಚು ಎಟಿಪಿ ಪ್ರಶಸ್ತಿ ಗೆದ್ದವರ ಸಾಲಿನಲ್ಲಿ 4ನೇ ಸ್ಥಾನಕ್ಕೆ ಲಗ್ಗೆ
ಮೆಕ್ಸಿಕೋ ಸಿಟಿ(ಫೆ.28): 21 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ರಾಫೆಲ್ ನಡಾಲ್ (Rafael Nadal) ಟೆನಿಸ್ ವೃತ್ತಿಬದುಕಿನ 91ನೇ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಭಾನುವಾರ ಮೆಕ್ಸಿಕನ್ ಓಪನ್ ಟೆನಿಸ್ ಟೂರ್ನಿಯ (Mexican Open Tennis Tournament) ಫೈನಲ್‌ನಲ್ಲಿ ಅವರು ಬ್ರಿಟನ್‌ನ ಕ್ಯಾಮರೋನ್ ವಿರುದ್ಧ ಜಯಗಳಿಸಿದರು. ಇತ್ತೀಚೆಗಷ್ಟೇ ಆಸ್ಪ್ರೇಲಿಯನ್ ಓಪನ್ (Australian Open) ಗ್ರ್ಯಾನ್‌ಸ್ಲಾಂ ಗೆದ್ದಿದ್ದ 35 ವರ್ಷದ ನಡಾಲ್ ಅತೀ ಹೆಚ್ಚು ಎಟಿಪಿ ಪ್ರಶಸ್ತಿ ಗೆದ್ದವರ ಸಾಲಿನಲ್ಲಿ 4ನೇ ಸ್ಥಾನದಲ್ಲಿದ್ದಾರೆ.
ಇವಾನ್ ಲೆಂಡ್ಲ್(94)ರನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಲು ರಾಫೆಲ್ ನಡಾಲ್ ಅವರಿಗೆ ಇನ್ನೂ 4 ಟ್ರೋಫಿ ಗೆಲ್ಲಬೇಕಿದೆ. ಅಮೆರಿಕದ ಜಿಮ್ಮಿ ಕಾನ್ಸರ್ಸ್ 109 ಟ್ರೋಫಿಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, 103 ಟ್ರೋಫಿ ಗೆದ್ದಿರುವ ಸ್ವಿಸ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ (Roger Federer) 2ನೇ ಸ್ಥಾನದಲ್ಲಿದ್ದಾರೆ.
ಜೋಕೋವಿಚ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಮೆಡ್ವೆಡೆವ್
ದುಬೈ: 20 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ, ಸರ್ಬಿಯಾದ ನೋವಾಕ್ ಜೋಕೋವಿಚ್‌ರನ್ನು (Novak Djokovic) ಹಿಂದಿಕ್ಕಿದ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಎಟಿಪಿ ಟೆನಿಸ್‌ನಲ್ಲಿ ವಿಶ್ವ ನಂ.1 ಸ್ಥಾನ ಅಲಂಕರಿಸಿದ್ದಾರೆ. ಗುರುವಾರ ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಜೋಕೋವಿಚ್, ಚೆಕ್ ಗಣರಾಜ್ಯದ ಜಿರಿ ವೆಸೆಲಿ ವಿರುದ್ಧ ಸೋಲುವುದರೊಂದಿಗೆ ನಂ.1 ಸ್ಥಾನ ಕಳೆದುಕೊಂಡರು.
2ನೇ ಸ್ಥಾನದಲ್ಲಿದ್ದ ಮೆಡ್ವೆಡೆವ್ ಅಗ್ರಸ್ಥಾನಕ್ಕೇರಿ, ಈ ಸಾಧನೆ ಮಾಡಿದ 27ನೇ ಆಟಗಾರ ಎನಿಸಿಕೊಂಡರು. 2020ರ ಫೆಬ್ರವರಿ 3ರಂದು ನಂ.1 ಸ್ಥಾನಕ್ಕೇರಿದ ನೊವಾಕ್ ಜೋಕೋವಿಚ್, ಒಟ್ಟಾರೆ 361 ವಾರಗಳ ಅಗ್ರಸ್ಥಾನದಲ್ಲಿದ್ದು ದಾಖಲೆ ಬರೆದಿದ್ದಾರೆ. 2004ರಿಂದ ರೋಜರ್ ಫೆಡರರ್, ರಾಫೆಲ್ ನಡಾಲ್, ಆ್ಯಂಡಿ ಮರ್ರೆ, ಜೋಕೋವಿಚ್ ನಂ.1 ಸ್ಥಾನ ಪಡೆಯುತ್ತಿದ್ದು, ಬರೋಬ್ಬರಿ 18 ವರ್ಷಗಳ ಬಳಿಕ ಈ ನಾಲ್ವರನ್ನು ಹೊರತುಪಡಿಸಿ ಬೇರೊಬ್ಬ ಆಟಗಾರ ಅಗ್ರಸ್ಥಾನಕ್ಕೇರಿದ್ದಾರೆ.
ಅಂಪೈರ್‌ಗೆ ಹಲ್ಲೆಗೆ ಯತ್ನ: ಜ್ವೆರೆವ್‌ಗೆ ಭಾರೀ ದಂಡ
ಮೆಕ್ಸಿಕೋ ಸಿಟಿ: ಪಂದ್ಯದಲ್ಲಿ ಸೋತ ಬಳಿಕ ಅಂಪೈರ್ ಮೇಲೆ ದಾಳಿಗೆ ಯತ್ನಿಸಿದ್ದ ವಿಶ್ವ ನಂ.3 ಟೆನಿಸಿಗ, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್‌ಗೆ ಟೆನಿಸ್ ವೃತ್ತಿಪರರ ಸಂಸ್ಥೆ (ಎಟಿಪಿ) 40 ಸಾವಿರ ಅಮೆರಿಕನ್ ಡಾಲರ್(ಸುಮಾರು 30 ಲಕ್ಷ ರು.) ದಂಡ ವಿಧಿಸಿದೆ. ಜೊತೆಗೆ ಸಿಂಗಲ್ಸ್ ಹಾಗೂ ಡಬಲ್ಸ್‌ನ ಬಹುಮಾನದ ಮೊತ್ತವಾದ 31,570 ಅಮೆರಿಕನ್ ಡಾಲರ್(ಸುಮಾರು 23.7 ಲಕ್ಷ ರು.) ಹಾಗೂ ಟೂರ್ನಿಯ ರ‍್ಯಾಂಕಿಂಗ್ ಅಂಕಗಳನ್ನೂ ಅವರು ಕಳೆದುಕೊಂಡಿದ್ದಾರೆ.
Alexander Zverev ಅಂಪೈರ್ ಮೇಲೆ ಹಲ್ಲೆಗೆ ಯತ್ನಿಸಿದ ಟೆನಿಸಿಗ ಅಲೆಕ್ಸಾಂಡರ್ ಜ್ವೆರೆವ್
ಬುಧವಾರ ಮೆಕ್ಸಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಡಬಲ್ಸ್ ಪಂದ್ಯದ ಸೋಲಿನ ಬಳಿಕ ಜ್ವೆರೆವ್ ಅಂಪೈರ್ ಕುಳಿತಿದ್ದ ಕುರ್ಚಿಗೆ ರಾಕೆಟ್‌ನಿಂದ ಸತತವಾಗಿ ಬಡಿದು, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು.
ಪ್ರೊ ಲೀಗ್: ಭಾರತ ತಂಡಗಳಿಗೆ ಸೋಲು
ಭುವನೇಶ್ವರ: ಎಫ್‌ಐಎಚ್ ಪ್ರೊ ಲೀಗ್ ಹಾಕಿಯ (FIH Pro League Hockey) ಸ್ಪೇನ್ ವಿರುದ್ಧದ ಪಂದ್ಯಗಳಲ್ಲಿ ಭಾನುವಾರ ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಸೋಲನುಭವಿಸಿವೆ. ಪುರುಷರ ತಂಡ 3-5 ಗೋಲುಗಳಿಂದ ಹಾಗೂ ಮಹಿಳಾ ತಂಡ 3-4 ಗೋಲುಗಳಲ್ಲಿ ಸೋಲುಂಡಿತು.
ಶನಿವಾರ ಸ್ಪೇನ್ ವಿರುದ್ಧವೇ ಗೆದ್ದಿದ್ದ ತಂಡಗಳು, ಮತ್ತದೇ ಪ್ರದರ್ಶನ ಮುಂದುವರಿಸಲು ವಿಫಲವಾಯಿತು. ಪುರುಷರ ತಂಡ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 2021-22ರ ಪ್ರೊ ಲೀಗ್ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, 4 ಪಂದ್ಯಗಳಲ್ಲಿ ಮೊದಲ ಬಾರಿ ಸೋಲುಂಡ ಮಹಿಳಾ ತಂಡ 3ನೇ ಸ್ಥಾನದಲ್ಲಿದೆ.
ವಿಶ್ವ ಪ್ಯಾರಾ ಕೂಟ: ಬೆಳ್ಳಿ ಗೆದ್ದು ಪೂಜಾ ದಾಖಲೆ
ದುಬೈ: ಪ್ಯಾರಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವೈಯಕ್ತಿಕ ಬೆಳ್ಳಿ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಖ್ಯಾತಿಗೆ ಆರ್ಚರಿ ಪಟು ಪೂಜಾ ಜತ್ಯನ್ ಪಾತ್ರರಾಗಿದ್ದಾರೆ. ಭಾನುವಾರ ನಡೆದ ಫೈನಲ್‌ನಲ್ಲಿ ಅವರು ಇಟಲಿಯ ಪೆಟ್ರಿಲ್ಲಿ ವಿನ್ಸೆನ್ಜಾ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.
ಶುಕ್ರವಾರ ಕಾಂಪೌಂಡ್ ಮಿಶ್ರ ವಿಭಾಗದಲ್ಲಿ ಭಾರತದ ಶ್ಯಾಮ್ ಸುಂದರ್-ಜ್ಯೋತಿ ಬಲಿಯಾನ್ ಜೋಡಿ ಬೆಳ್ಳಿ ಗೆದ್ದಿತ್ತು. ಭಾರತ ಒಟ್ಟು 2 ಬೆಳ್ಳಿ ಪದಕದೊಂದಿಗೆ ಅಭಿಯಾನ ಕೊನೆಗೊಳಿಸಿತು. ಭಾರತ ಈ ಮೊದಲು 2 ಬಾರಿ ಪ್ಯಾರಾ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದರೂ ಪದಕ ಗೆಲ್ಲಲು ವಿಫಲವಾಗಿತ್ತು.