ಹ್ಯಾಟ್ರಿಕ್ ಒಲಿಂಪಿಕ್ ಮೆಡಲ್‌ನತ್ತ ಮನು ಭಾಕರ್; 2ನೇ ಸ್ಥಾನಿಯಾಗಿ ಫೈನಲ್‌ಗೆ ಲಗ್ಗೆಯಿಟ್ಟ ಹರ್ಯಾಣ ಶೂಟರ್
ಹರ್ಯಾಣ ಮೂಲದ ತಾರಾ ಶೂಟರ್ ಮನು ಭಾಕರ್ ಹ್ಯಾಟ್ರಿಕ್ ಒಲಿಂಪಿಕ್ಸ್ ಪದಕದತ್ತ ದಾಪುಗಾಲಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಪ್ಯಾರಿಸ್: ಈಗಾಗಲೇ ಹಾಲಿ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಕ್ಕೆ ಕೊರಳೊಡ್ಡಿರುವ ಭಾರತದ ತಾರಾ ಶೂಟರ್ ಮನು ಭಾಕರ್, ಇದೀಗ ಹ್ಯಾಟ್ರಿಕ್ ಪದಕ ಮುಡಿಗೇರಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಇದೀಗ ಮನು ಭಾಕರ್ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿಂದು ಫೈನಲ್‌ಗೆ ಎರಡನೇ ಸ್ಥಾನಿಯಾಗಿ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಫೈನಲ್‌ನಲ್ಲೂ ಮನು ಭಾಕರ್ ಇಂತಹದ್ದೇ ಪ್ರದರ್ಶನ ತೋರಿದರೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಮೂರು ಪದಕ ತಮ್ಮದಾಗಿಸಿಕೊಳ್ಳಲಿದ್ದಾರೆ.
ಹೌದು 22 ವರ್ಷದ ಮನು ಭಾಕರ್ ಈಗಾಗಲೇ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಭಾರತ ಪರ ಪದಕದ ಖಾತೆ ತೆರೆದಿದ್ದರು. ಇನ್ನು ಇದಾದ ಬಳಿಕ ಸರಬ್ಜೋತ್ ಸಿಂಗ್ ಜತೆಗೂಡಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲೂ ಮನು ಭಾಕರ್ ಕಂಚಿನ ಜಯಿಸಿದ್ದರು. ಈ ಮೂಲಕ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಅಥ್ಲೀಟ್ ಎನ್ನುವ ಐತಿಹಾಸಿಕ ದಾಖಲೆ ನಿರ್ಮಿಸಿದ್ದರು.
ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಹರ್ಯಾಣ ಮೂಲದ ಮನು ಭಾಕರ್, ಪ್ರಿಸಿಷನ್‌ನಲ್ಲಿ 294 ಹಾಗೂ ರಾಪಿಡ್ ರೌಂಡ್‌ನಲ್ಲಿ 296 ಹೀಗೆ ಒಟ್ಟು 590 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದು ಪೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇನ್ನು ಹಂಗೇರಿ ದೇಶದ ವೆರೊನಿಕಾ ಮೇಜರ್ 592 ಅಂಕಗಳೊಂದಿಗೆ ಒಲಿಂಪಿಕ್ ರೆಕಾರ್ಡ್‌ನೊಂದಿಗೆ ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
ಇದೀಗ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯ ಫೈನಲ್ ಪಂದ್ಯವು ಆಗಸ್ಟ್ 03ರ ಮಧ್ಯಾಹ್ನ 1 ಗಂಟೆಯಿಂದ ಆರಂಭವಾಗಲಿದ್ದು, ಮನು ಭಾಕರ್ ಹ್ಯಾಟ್ರಿಕ್ ಒಲಿಂಪಿಕ್ಸ್ ಪದಕವನ್ನು ತಮ್ಮದಾಗಿಸಿಕೊಳ್ಳಲಿ ಎನ್ನುವುದು ಕೋಟ್ಯಾಂತರ ಅಭಿಮಾನಿಗಳ ಹಾರೈಕೆಯಾಗಿದೆ.