10 ಕೋಟಿ ರೂ ದಾಟಿದ ಚಿನ್ನದ ಹುಡುಗ ನೀರಜ್ ಜಾವೆಲಿನ್, ಲೊವ್ಲಿನಾ ಬಾಕ್ಸಿಂಗ್ ಗ್ಲೌಸ್ E ಹರಾಜು..!
* E ಹರಾಜಿನಲ್ಲಿ ಅಮೂಲ್ಯ ವಸ್ತುಗಳ ಹರಾಜು ಪ್ರಕ್ರಿಯೆ ಆರಂಭ
* ನೀರಜ್ ಚೋಪ್ರಾ ಬಳಸಿದ ಜಾವೆಲಿನ್ ಮೌಲ್ಯ 10 ಕೋಟಿ ಗಡಿ ದಾಟಿದೆ
* ಲೊವ್ಲಿನಾ ಬಾಕ್ಸಿಂಗ್ ಗ್ಲೌಸ್ ಕೊಳ್ಳಲು ಸಿಕ್ಕಾಪಟ್ಟೆ ಡಿಮ್ಯಾಂಡ್
ನವದೆಹಲಿ(ಸೆ.18): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತಕ್ಕೆ ಬಂಗಾರದ ಪದಕ ಗೆದ್ದುಕೊಟ್ಟ ಚಿನ್ನದ ಹುಡುಗ ನೀರಜ್ ಚೋಪ್ರಾ ಹಾಗೂ ಬಾಕ್ಸಿಂಗ್‌ನಲ್ಲಿ ಕಂಚಿನ ಪದಕ ಜಯಿಸಿದ ಲೊವ್ಲಿನಾ ಬೊರ್ಗೊಹೈನ್ ಬಳಸಿದ್ದ ಬಾಕ್ಸಿಂಗ್ ಗ್ಲೌಸ್ ದಾಖಲೆಯ ಮೊತ್ತಕ್ಕೆ ಹರಾಜಾಗುವ ಮುನ್ಸೂಚನೆ ಸಿಕ್ಕಿದ್ದು, ಹರಾಜು ಆರಂಭವಾಗಿ ಎರಡನೇ ದಿನಕ್ಕೆ 10 ಕೋಟಿ ರುಪಾಯಿ ಗಡಿ ದಾಟಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ ಉಡುಗೊರೆ ಹಾಗೂ ಸ್ಮರಣಿಕೆಗಳ ಹರಾಜು ಪ್ರಕ್ರಿಯೆಗೆ ತಮ್ಮ ಜನ್ಮದಿನದಂದೇ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೀರಜ್ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಬಳಸಿದ್ದ ಜಾವೆಲಿನ್‌ಗೆ E ಹರಾಜಿನಲ್ಲಿ 1 ಕೋಟಿ ರುಪಾಯಿ ಮೂಲ ಬೆಲೆ ನಿಗದಿಪಡಿಸಲಾಗಿತ್ತು. ಇನ್ನು ಲೊವ್ಲಿನಾ ಬಾಕ್ಸಿಂಗ್ ಗ್ಲೌಸ್‌ಗೆ 80 ಲಕ್ಷ ರುಪಾಯಿ ಮೂಲ ಬೆಲೆ ನಿಗದಿಯಾಗಿತ್ತು. ಇದೀಗ ಎರಡನೇ ದಿನ ಮುಕ್ತಾಯವಾಗುವ ಮುನ್ನವೇ ಈ ಎರಡು ಅಮೂಲ್ಯ ವಸ್ತುಗಳನ್ನು ಖರೀದಿಸಲು ಜನ ಮುಗಿಬಿದ್ದಿದ್ದಾರೆ.
1 ಕೋಟಿಗೆ ಹರಾಜಾಯ್ತು ಮೋದಿಯವರ 500 ರೂ. ಕೇಸರಿ ಕರ್ಚೀಫ್..!
ಇದಷ್ಟೇ ಅಲ್ಲದೇ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ ಸಿಂಧು ಶಟಲ್ ರಾಕೆಟ್ 2 ಕೋಟಿ ರುಪಾಯಿ ಗಡಿ ದಾಟಿದ್ದರೆ, ಪ್ಯಾರಾಲಿಂಪಿಕ್ಸ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ ಸುಮಿತ್ ಅಂತಿಲ್ ಬಳಸಿದ ಜಾವೆಲಿನ್ 3 ಕೋಟಿ ರೂ ಗಡಿ ದಾಟಿದೆ.
ನಮಾಮಿ ಗಂಗೆಗೆ ಹಣ ಬಳಕೆ: E ಹರಾಜು ಪ್ರಕ್ರಿಯೆಯು ಸೆಪ್ಟೆಂಬರ್ 17ರಿಂದ ಅಕ್ಟೋಬರ್ 7ರವರೆಗೆ ನಡೆಯಲಿದೆ. ಈ ಹರಾಜಿನಲ್ಲಿ ಸಂಗ್ರಹವಾದ ಹಣವನ್ನು ಗಂಗಾ ನದಿಯ ಪುನಶ್ಚೇತನ ಮತ್ತು ಸಂರಕ್ಷಣೆಯ ಉದ್ದೇಶ ಹೊಂದಿರುವ ನಮಾಮಿ ಗಂಗೆ ಅಭಿಯಾನಕ್ಕೆ ಬಳಸಲಾಗುತ್ತದೆ.
ನೀವೂ ಕೂಡಾ ಹರಾಜಿನಲ್ಲಿ ಪಾಲ್ಗೊಳ್ಳಬಹುದು: ಈ E ಹರಾಜಿನಲ್ಲಿ ಯಾವುದೇ ವ್ಯಕ್ತಿ ಕೂಡಾ ಪಾಲ್ಗೊಳ್ಳಬಹುದಾಗಿದೆ. ಈ ಉಡುಗೊರೆ ಹಾಗೂ ಸ್ಮರಣಿಕೆಗಳನ್ನು ಪಡೆಯಲು https://pmmementos.gov.in ವೆಬ್ ಸೈಟ್ ಮೂಲಕ ಇ -ಹರಾಜಿನಲ್ಲಿ ಭಾಗವಹಿಸಬಹುದು.