ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸೆಮಿಫೈನಲ್‌ಗೇರಿದ ಮೊಟ್ಟಮೊದಲ ಭಾರತೀಯ ಎನಿಸಿಕೊಂಡ ಶ್ರೇಯಕ್ಕೆ ಲಕ್ಷ್ಯ ಸೆನ್‌ ಪಾತ್ರರಾಗಿದ್ದಾರೆ. 

ಪ್ಯಾರಿಸ್‌ (ಆ.2):ಲಕ್ಷ್ಯ ಸೇನ್ ಪ್ಯಾರಿಸ್‌ನಲ್ಲಿ ಇತಿಹಾಸವನ್ನು ಬರೆದಿದ್ದಾರೆ. 22 ವರ್ಷದ ಷಟ್ಲರ್ ಒಲಿಂಪಿಕ್ಸ್ ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸೆಮಿಫೈನಲ್ ಹಂತವನ್ನು ತಲುಪಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು. ಪ್ಯಾರಿಸ್ ಗೇಮ್ಸ್‌ನಲ್ಲಿ 12ನೇ ಶ್ರೇಯಾಂಕದ ತೈವಾನ್‌ನ ಚೌ ಟಿಯೆನ್ ಚೆನ್ ಅವರನ್ನು ಸೋಲಿಸಿದ ಲಕ್ಷ್ಯ ಅವರು ಪ್ಯಾರಿಸ್ ಗೇಮ್ಸ್‌ನಲ್ಲಿ ಅವಿಸ್ಮರಣೀಯ ಗೆಲುವು ದಾಖಲಿಸಿದರು. ಇದು ಫ್ರೆಂಚ್‌ ರಾಜಧಾನಿಯ ಬ್ಯಾಡ್ಮಿಂಟನ್‌ ಅರೇನಾದಲ್ಲಿ ಕಿಕ್ಕಿರಿದು ಸೇರಿದ್ದ ಅಪಾರ ಪ್ರಮಾಣದ ಭಾರತೀಯ ಪ್ರೇಕ್ಷಕರನ್ನು ಸಂತೋಷದ ಕಡಲಲ್ಲಿ ತೇಲಿಸಿತು. ಲಕ್ಷ್ಯ ಸೇನ್ ಈಗ ತಮ್ಮ ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಪದಕವನ್ನು ಖಚಿತಪಡಿಸಿಕೊಳ್ಳಲು ಒಂದು ಗೆಲುವಿನ ಅಂತರದಲ್ಲಿದ್ದಾರೆ. ಅಲ್ಮೋರಾ ಮೂಲದ ಷಟ್ಲರ್ ಭಾರತದ ಬ್ಯಾಡ್ಮಿಂಟನ್‌ನ ಭರವಸೆಯನ್ನು ಹೆಗಲ ಮೇಲೆ ಹೊತ್ತಿದ್ದಾರೆ. ಪ್ಯಾರಿಸ್‌ ಗೇಮ್ಸ್‌ನ ಕಣದಲ್ಲಿ ಉಳಿದುಕೊಂಡಿರುವ ಏಕೈಕ ಷಟ್ಲರ್‌ ಇವರಾಗಿದ್ದಾರೆ. 

ಗುರುವಾರ ನಡೆದ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಚಿನ್ನದ ಪದಕದ ಸ್ಪರ್ಧಿಗಳಾದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸೋಲನುಭವಿಸಿದರೆ, ಎರಡು ಬಾರಿ ಪದಕ ವಿಜೇತೆ ಪಿವಿ ಸಿಂಧು ಮಹಿಳೆಯರ ಸಿಂಗಲ್ಸ್‌ನ ಪ್ರಿಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೋಲು ಕಂಡಿದ್ದರು.

ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಡಬಲ್ ಶಾಕ್! ಸಿಂಧು, ಸಾತ್ವಿಕ್-ಚಿರಾಗ್ ಹೋರಾಟ ಅಂತ್ಯ

ಅದ್ಭುತ ಪ್ರದರ್ಶನ ನೀಡಿದ ಲಕ್ಷ್ಯ ಸೆನ್‌, ಮೊದಲ ಗೇಮ್‌ನಲ್ಲಿ ಸೋಲು ಕಂಡರೂ, ತೈವಾನ್‌ನ ಚೌ ಟಿಯೆನ್ ಚೆನ್‌ರನ್ನು 19-21, 21-15, 21-12 ರಿಂದ ಒಂದು ಗಂಟೆ 15 ನಿಮಿಷದ ಆಟದಲ್ಲಿ ಸೋಲಿಸಿದರು. 

ಪ್ಯಾರಿಸ್ ಒಲಿಂಪಿಕ್ಸ್‌ ಪದಕ ವಿಜೇತರಿಗೆ ನೀಡುತ್ತಿರುವ ನಿಗೂಢ ಗಿಫ್ಟ್‌ ಬಾಕ್ಸ್‌ನಲ್ಲಿ ಅಂತದ್ದೇನಿದೆ?