* ಚಿನ್ನ ಗೆದ್ದ ಚೋಪ್ರಾಗೆ ಕಾಶೀನಾಥ್‌ ಕೋಚ್‌ ಅಲ್ಲ: ಅಥ್ಲೆಟಿಕ್ಸ್‌ ಸಂಸ್ಥೆ* ಕಾಶೀನಾಥ್‌ ನಮಗೆ ಗೊತ್ತಿಲ್ಲ* 10 ಲಕ್ಷ ಘೋಷಿಸಿದ್ದಕ್ಕೆ ಆಕ್ಷೇಪ

ಬೆಂಗಳೂರು(ಆ.10): ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್‌ ಥ್ರೋನಲ್ಲಿ ಬಂಗಾರದ ಸಾಧನೆ ಮಾಡಿದ ನೀರಜ್‌ ಚೋಪ್ರಾ ಅವರಿಗೆ ಕಾಶೀನಾಥ್‌ ನಾಯ್‌್ಕ ಎಂಬ ಹೆಸರಿನ ಯಾವುದೇ ಕೋಚ್‌ ಅನ್ನು ನೇಮಕ ಮಾಡಿರಲಿಲ್ಲ. ಅವರು ಕೋಚ್‌ ಎಂಬ ಕಾರಣಕ್ಕೆ ಕರ್ನಾಟಕ ಸರ್ಕಾರ ಬಹುಮಾನ ಘೋಷಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ದೊರಕಿದರೆ ರಾಜ್ಯ ಸರ್ಕಾರಕ್ಕೆ ಆಕ್ಷೇಪ ಸಲ್ಲಿಸುವುದಾಗಿ ಅಥ್ಲೆಟಿಕ್ಸ್‌ ಫೆಡರೇಷನ್‌ ಆಫ್‌ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಹೇಳಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತರಿಗೆ ಸನ್ಮಾನ; ಕ್ರೀಡಾಪಟುಗಳ ನೋಡಲು ಮುಗಿಬಿದ್ದ ಫ್ಯಾನ್ಸ್!

ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ ಇತಿಹಾಸದಲ್ಲೇ ಮೊದಲ ಚಿನ್ನದ ಪದಕ ತಂದಿತ್ತ ನೀರಜ್‌ ಚೋಪ್ರಾಗೆ ಕನ್ನಡಿಗ ಕಾಶೀನಾಥ್‌ ನಾಯ್ಕ್ ಕೋಚ್‌ ಆಗಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದು ಕನ್ನಡಿಗರ ಹೆಮ್ಮೆ ಹೆಚ್ಚಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೂ 10 ಲಕ್ಷ ರು. ಬಹುಮಾನ ಘೋಷಿಸಿತ್ತು. ಇದರ ನಡುವೆಯೇ ಅದಿಲ್ಲೆ ಸುಮರಿವಾಲ್ಲಾ ಅವರ ಹೇಳಿಕೆ ಹೊಸ ವಿವಾದ ಸೃಷ್ಟಿಸಿದೆ.

ಈ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿದ ಅದಿಲ್ಲೆ ಅವರು, ನೀರಜ್‌ ಚೋಪ್ರಾ ಅವರೊಂದಿಗೆ ಮಾತನಾಡಿದವರನ್ನೆಲ್ಲಾ ಕೋಚ್‌ ಎನ್ನಲಾಗದು. ಕಾಶೀನಾಥ್‌ ಅವರು ತಮ್ಮ ಕೋಚ್‌ ಎಂದು ನೀರಜ್‌ ಚೋಪ್ರಾ ಹೇಳಿಲ್ಲ, ನಾವೂ ಹೇಳಿಲ್ಲ. ಕಾಶೀನಾಥ್‌ ಯಾರು ಎಂಬುದೇ ನಮಗೆ ಗೊತ್ತಿಲ್ಲ. ಹೀಗಿರುವಾಗ ಕರ್ನಾಟಕ ಸರ್ಕಾರ ಕಾಶೀನಾಥ್‌ ನಾಯ್‌್ಕ ಎಂಬುವವರು ನೀರಜ್‌ ಚೋಪ್ರಾ ಕೋಚ್‌ ಎಂದು 10 ಲಕ್ಷ ರು. ಬಹುಮಾನ ಘೋಷಿಸಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ನಮಗೆ ಅಧಿಕೃತ ಪತ್ರ ವ್ಯವಹಾರ ಆದ ಬಳಿಕ ಸಂಬಂಧಪಟ್ಟವರಿಗೆ ಈ ಬಗ್ಗೆ ದೂರು ನೀಡಲಾಗುವುದು ಎಂದು ಹೇಳಿದರು.

ನೀರಜ್‌ ಚೋಪ್ರಾ ಅವರಿಗೆ ಕಠಿಣ ತರಬೇತಿ ನೀಡಿದ್ದೆವು. ಮೂರು ಮಂದಿ ವಿದೇಶಿ ತರಬೇತುದಾರರನ್ನು ನೇಮಿಸಿ ಕಳೆದ 6 ವರ್ಷದಿಂದ ಒಲಿಂಪಿಕ್ಸ್‌ಗಾಗಿ ತರಬೇತಿ ನೀಡಿದ್ದೇವೆ. ಇದೀಗ ಯಾರೋ ವ್ಯಕ್ತಿ ಬಂದು ಕೋಚ್‌ ಎಂದರೆ ಹೇಗೆ? ಕಾಶೀನಾಥ್‌ ಯಾವ ಸಮಯದಲ್ಲೂ ನೀರಜ್‌ ಚೋಪ್ರಾಗೆ ಕೋಚ್‌ ಆಗಿರಲಿಲ್ಲ ಎಂದರು.

ಚಿನ್ನದ ಹುಡುಗನಿಗೆ ತರಬೇತಿ ನೀಡಿದ್ದ ಶಿರಸಿ ಕಾಶಿನಾಥ್‌ಗೆ 10 ಲಕ್ಷ ರೂ. ಬಹುಮಾನ

ಉವೆ ಹಾನ್‌ ನೇತೃತ್ವದಲ್ಲಿ ಕ್ಲಾಸ್‌ ಬಾರ್ಟೊನಿಟ್ಜ್, ಗ್ಯಾರಿ ಕಲ್ವರ್ಟ್‌, ವರ್ನರ್‌ ಡೇನಿಯಲ್ಸ್‌ ಎಂಬ ಮೂವರು ವಿದೇಶಿ ತರಬೇತುದಾರರು ಚೋಪ್ರಾ ಅವರಿಗೆ ತರಬೇತಿ ನೀಡಿದ್ದಾರೆ. ಅದಕ್ಕೆ ಮೊದಲು ನಸೀಮ್‌ ಅಹ್ಮದ್‌ ಎಂಬುವರು ಕೋಚ್‌ ಆಗಿದ್ದರು. ಶ್ರಮ ವಹಿಸಿ ಪದಕ ಗೆದ್ದಿದ್ದು ನೀರವ್‌ ಚೋಪ್ರಾ, ತರಬೇತಿ ನೀಡಿದ್ದು ಬೇರೆಯ ತರಬೇತುದಾರರು. ಒಬ್ಬರ ಶ್ರಮ ಬೇರೊಬ್ಬರಿಗೆ ಲಾಭ ತಂದುಕೊಡಬಾರದು ಎಂದು ಸ್ವತಃ ಅಥ್ಲೀಟ್‌ ಆಗಿದ್ದ ಹಾಗೂ ಅರ್ಜುನ ಪ್ರಶಸ್ತಿ ವಿಜೇತರೂ ಆಗಿರುವ ಅದಿಲ್ಲೆ ಸುಮರಿವಾಲ್ಲಾ ಅಭಿಪ್ರಾಯಪಟ್ಟರು.