ರಾಜ್ಯದಲ್ಲಿ ಕೊರೋನಾ ದೇಣಿಗೆಗಾಗಿ ಆನ್‌ಲೈನ್ ಚೆಸ್ ಟೂರ್ನಿ
ಕೊರೋನಾ ವೈರಸ್ ಭೀತಿಯಿಂದಾಗಿ ಈಗಾಗಲೇ ಹಲವು ಕ್ರೀಡಾಚಟುವಟಿಕೆಗಳು ಸ್ತಬ್ಧವಾಗಿವೆ. ಇದರ ಬೆನ್ನಲ್ಲೇ ಈ ವಾರಾಂತ್ಯದಲ್ಲಿ ಆನ್‌ಲೈನ್ ಚೆಸ್ ಟೂರ್ನಿ ಆಯೋಜನೆಗೆ ವೇದಿಕೆ ಸಜ್ಜಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಏ.28): ಕೊರೋನಾ ವಿರುದ್ಧದ ಹೋರಾಟಕ್ಕಾಗಿ ದೇಣಿಗೆ ಸಂಗ್ರಹಿಸುವ ಸಲುವಾಗಿ ಮೊಬೈಲ್ ಪ್ರೀಮಿಯರ್ ಲೀಗ್ (ಎಂಪಿಎಲ್) ಜೊತೆ ರಾಜ್ಯ ಕ್ರೀಡಾ ಇಲಾಖೆ ಕೈ ಜೋಡಿಸಿದೆ.
ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆ, ಎಂಪಿಎಲ್ ಹಾಗೂ ಕ್ರೀಡಾ ಇಲಾಖೆ ಸಹಕಾರದೊಂದಿಗೆ ಮೇ 2 ಹಾಗೂ 3ರಂದು ಆನ್‌ಲೈನ್ ಚೆಸ್ ಟೂರ್ನಿಯನ್ನು ಆಯೋಜಿಸಲಾಗಿದೆ. ಇದರಿಂದ ಸಂದಾಯವಾಗುವ ಹಣವನ್ನು ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗುವುದು ಎಂದು ತಿಳಿಸಲಾಗಿದೆ.
ಪ್ರವೇಶ ಶುಲ್ಕ 50 ರು.ಗಳಾಗಿದ್ದು, ಪ್ರಶಸ್ತಿ ವಿಜೇತರಿಗೆ 1 ಲಕ್ಷ ರು. ನೀಡಲಾಗುವುದು. ಒಟ್ಟು ಪ್ರಶಸ್ತಿ ಮೊತ್ತ 10 ಲಕ್ಷ ರು.ಗಳಾಗಿವೆ ಎಂದು ಆಯೋಜಕರು ತಿಳಿಸಿದ್ದಾರೆ. ಎಂಪಿಎಲ್ ಆ್ಯಪ್ ದೇಶಾದ್ಯಂತ ಸುಮಾರು 40 ಮಿಲಿಯನ್(4 ಕೋಟಿ) ಮಂದಿ ಬಳಸುತ್ತಿದ್ದು, ಸಾಕಷ್ಟು ಮಂದಿ ಭಾಗವಹಿಸುವ ನಿರೀಕ್ಷೆ ಆಯೋಜಕರದ್ದಾಗಿದೆ. ಆನ್‌ಲೈನ್ ಚೆಸ್‌ನಲ್ಲಿ ಭಾಗವಹಿಸಲು ಈಗಾಗಲೇ ಎಂಪಿಎಲ್ ಆ್ಯಪ್ ಮೂಲಕ ರಿಜಿಸ್ಟ್ರೇಷನ್ ಆರಂವಾಗಿದೆ. ಇದೊಂದು ಸುರಕ್ಷಿತ ಆ್ಯಪ್ ಆಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕ್ರಿಕೆಟಿಗ ಪಾರ್ಥೀವ್ ಪಟೇಲ್‌ಗೆ ಒಂಬತ್ತೇ ಬೆರಳು!
ಈ ಬಗ್ಗೆ ಮಾತನಾಡಿದ ರಾಜ್ಯ ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಸಿ.ಟಿ. ರವಿ, ಇದು ಎಲ್ಲರ ಪಾಲಿಗೂ ಕಠಿಣ ಪರೀಕ್ಷೆಯ ಕಾಲ. ಇಂತಹ ಸಂದರ್ಭದಲ್ಲಿ ನಾವೆಲ್ಲಾ ಒಗ್ಗಟ್ಟನ್ನು ಪ್ರದರ್ಶಿಸಬೇಕು. ನಮ್ಮೆಲ್ಲರ ಶತ್ರುವೀಗ ಕೊರೋನಾ ವೈರಸ್. ಕೊರೋನಾ ಕೆಲವರ ಬದುಕಿನಲ್ಲಿ ಚೆಲ್ಲಾಟವಾಡಿದೆ. ಆದರೆ ಚೆಸ್ ಈಗ ಒಂದೊಳ್ಳೆಯ ಉದ್ಧೇಶಕ್ಕಾಗಿ ಇದೇ ವಾರಾಂತ್ಯದಲ್ಲಿ ಆನ್‌ಲೈನ್ ಟೂರ್ನಿ ಆಯೋಜಿಸಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡುಗೆ ನೀಡಲು ಮುಂದಾಗಿರುವುದು ಒಳ್ಳೆಯ ಕೆಲಸ ಎಂದಿದ್ದಾರೆ.
ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ ಇದೀಗ ಜಾಗತಿಕ ಪಿಡುಗಾಗಿ ಪರಿಣಮಿಸಿದೆ. ಸುಮಾರು 20 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, 2 ಲಕ್ಷಕ್ಕೂ ಅಧಿಕ ಮಂದಿ ಕೊರೋನಾದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಇನ್ನು ಭಾರತದಲ್ಲಿ ಕೊರೋನಾ ಹರಡದಂತೆ ತಡೆಯಲು ಮೇ 03ರವರೆಗೆ ಭಾರತ ಲಾಕ್‌ಡೌನ್ ಜಾರಿಯಲ್ಲಿದೆ. ಹೀಗಾಗಿ ಎಲ್ಲಾ ಕ್ರೀಡಾ ಚಟುವಟಿಕೆಗಳು ಸ್ತಬ್ಧವಾಗಿವೆ. ಇನ್ನು ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಟೂರ್ನಿ ಕೂಡಾ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.