Sandeep Nangal ಅಂತಾರಾಷ್ಟ್ರೀಯ ಕಬಡ್ಡಿ ಪಟು ಸಂದೀಪ್ ನಂಗಲ್ ಮೇಲೆ ಭೀಕರ ಗುಂಡಿನ ದಾಳಿ, ಸ್ಥಳದಲ್ಲೇ ಸಾವು!
- ಕಬಡ್ಡಿ ಕಪ್ ಟೂರ್ನಿ ವೇಳೆ ಘನಘೋರ ಘಟನೆ
- ದುಷರ್ಮಿಗಳ ಗುಂಡಿಗೆ ಕಬಡ್ಡಿ ಪಟು ಬಲಿ
- ಅಂತಾರಾಷ್ಟ್ರೀಯ ಕಬಡ್ಡಿ ಪಟು ಸಂದೀಪ್ ನಂಗಲ್
ಜಲಂಧರ್(ಮಾ.14): ಅಂತಾರಾಷ್ಟ್ರೀಯ ಖ್ಯಾತಿಯ ಕಬಡ್ಡಿ ಪಟ್ಟು ಸಂದೀಪ್ ನಂಗಲ್ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ. ಜಲಂಧರ್‌ನಲ್ಲಿ ನಡೆಯುತ್ತಿದ್ದ ಕಬಡ್ಡಿ ಕಪ್ ಟೂರ್ನಿ ವೇಳೆ ದುಷ್ಕರ್ಮಿಗಳು ನಂಗಲ್ ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದರೆ. ಬರೋಬ್ಬರಿ 20 ಗುಂಡುಗಳು ಸಂದೀಪ್ ನಂಗಲ್ ದೇಹ ಹೊಕ್ಕಿದೆ. ಪರಿಣಾಮ ಸಂದೀಪ್ ನಂಗಲ್ ಸ್ಥಳದಲ್ಲೇ ನಿಧನರಾಗಿದ್ದಾರೆ.
ಕಬಡ್ಡಿ ಟೂರ್ನಿ ನಡೆಯುತ್ತಿದ್ದ ವೇಳೆ ಆಗಮಿಸಿದ ಐವರು ಅಪರಿಚಿತರು ಏಕಾಏಕಿ 40 ವರ್ಷದ ಸಂದೀಪ್ ನಂಗಲ್ ಗುರಿಯಾಗಿಸಿ ಗುಂಡು ಹಾರಿಸಿದ್ದಾರೆ. ಈ ವೇಳೆ ಕಬಡ್ಡಿ ಟೂರ್ನಿ ನೋಡಲು ಆಗಮಿಸಿದ ಹಾಗೂ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಕಬಡ್ಡಿ ಪಟುಗಳು ಪ್ರಾಣ ರಕ್ಷಣೆಗಾಗಿ ಓಡಿದ್ದಾರೆ. ಇತ್ತ 20 ಗುಂಡುಗಳು ಸಂದೀಪ್ ಎದೆ ಹಾಗೂ ತಲೆ ಭಾಗಕ್ಕೆ ಬಿದ್ದಿದೆ.
ಇಂದು(ಮಾ.14) ಸಂಜೆ 6 ಗಂಟೆಗೆ ಈ ಘಟನೆ ನಡೆದಿದೆ. ಕಬಡ್ಡಿ ಕ್ಲಬ್ ಜೊತೆಗಿನ ಮನಸ್ತಾಪ ಈ ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಗುಂಡು ಹಾರಿಸಿದ ದುಷ್ಕರ್ಮಿಗಳು ತಕ್ಷಣೇ ಪರಾರಿಯಾಗಿದ್ದಾರೆ.
Himveers 12,500 ಫೀಟ್ ಎತ್ತರದಲ್ಲಿ ಕಬಡ್ಡಿ ಆಡಿದ ಐಟಿಬಿಪಿ ಯೋಧರು!
ಅಭಿಮಾನಿಗಳಿಂದ ಗ್ಲಾಡಿಯೇಟರ್ ಎಂದೇ ಕರೆಯಿಸಿಕೊಳ್ಳುತ್ತಿದ್ದ ಸಂದೀಪ್ ನಂಗಲ್ ಅತ್ಯುತ್ತಮ ಕಬಡ್ಡಿ ಪಟು ಅನ್ನೋದರಲ್ಲಿ ಎರಡು ಮಾತಿಲ್ಲ. ಇದೀಗ ಟೂರ್ನಿ ನಡೆಯುತ್ತಿದ್ದ ನಡುವೆ ಕಬಡ್ಡಿ ಅಂಗಣದಲ್ಲೇ ಸಂದೀಪ್ ನಂಗಲ್ ನಿಧನರಾಗಿದ್ದಾರೆ. ಈ ಘಟನೆಗೆ ಕಬಡ್ಡಿ ಪಟುಗಳು, ಕಬಡ್ಡಿ ಫೆಡರೇಶನ್ ಆಘಾತ ವ್ಯಕ್ತಪಡಿಸಿದೆ
ಸಂದೀಪ್ ನಂಗಲ್ ಅಂತಾರಾಷ್ಟ್ರೀಯ ಕಬಡ್ಡಿ ಪಟುವಾಗಿ ಗುರುತಿಸಿಕೊಂಡಿದ್ದಾರೆ. ಕಳೆದೊಂದು ದಶಕದಿಂದ ದೇಶ ವಿದೇಶಗಳಲ್ಲಿ ಕಬಡ್ಡಿ ಟೂರ್ನಿಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಸಾಬೀತು ಮಾಡಿದ್ದಾರೆ. ಕೆನಡಾ, ಅಮೆರಿಕ, ಲಂಡನ್ ಸೇರಿದಂತೆ ಹಲವು ರಾಷ್ಟಗಳ ಲೀಗ್ ಟೂರ್ನಿಗಳಲ್ಲಿ ಸಂದೀಪ್ ನಂಗಲ್ ಆಡಿದ್ದಾರೆ. ಇನ್ನು ಪಂಜಾಬ್ ರಾಜ್ಯ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ್ದಾರೆ.
Pro Kabaddi Final ಪಾಟ್ನಾ ಮಣಿಸಿ ಚೊಚ್ಚಲ ಚಾಂಪಿಯನ್ ಕಿರೀಟ ಗೆದ್ದ ದಬಾಂಗ್ ದಿಲ್ಲಿ!
ಕಬಡ್ಡಿ ಮೇಲಿನ ಅತೀವ ಆಸಕ್ತಿಯಿಂದ ಸಂದೀಪ್ ನಂಗಲ್ ಈಗಲೂ ತನ್ನ ಹುಟ್ಟೂರಿನ ಎಲ್ಲಾ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಇದೇ ರೀತಿ ಜಲಂಧರ್‌ನಲ್ಲಿ ಆಯೋಜಿಸಿದ ಕಬಡ್ಡಿ ಕಪ್ ಟೂರ್ನಿಗಾಗಿ ವಿಶೇಷ ತಯಾರಿ ಮಾಡಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಆದರೆ ದುಷ್ಕರ್ಮಿಗಳು ನಂಗಲ್ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ.
ಸಂದೀಪ್ ನಂಗಲ್ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದರು. ಕಬಡ್ಡಿ ಟೂರ್ನಿಗಾಗಿ ಭಾರತಕ್ಕೆ ಬಂದು ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದರು. ಇದೀಗ ನಂಗಲ್ ಸಾವು ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಆಘಾತ ತಂದಿದೆ. ಜಲಂಧರಲ್ಲಿ ಹಲವು ಕಬಡ್ಡಿ ಟೂರ್ನಮೆಂಟ್‌ಗಳನ್ನು ಸಂದೀಪ್ ಆಯೋಜಿಸುತ್ತಾರೆ. ಗುಂಡಿನ ದಾಳಿ ಬೆನ್ನಲ್ಲೇ ಸಂದೀಪ್ ನಂಗಲ್‌ನ್ನು ಸಮೀಪದ ನಾಕೋಡರ್‌ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲೇ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಸಂದೀಪ್ ನಂಗಲ್ ಮೇಲೆ ಗುಂಡಿನ ದಾಳಿ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಪೊಲೀಸರು ಹೆಚ್ಚಿನ ತನಿಖೆಗೆ ತಂಡ ರಚಿಸಿದ್ದಾರೆ. ಶೀಘ್ರದಲ್ಲೇ ದುಷ್ಕರ್ಮಿಗಳ ಪತ್ತೆ ಹಚ್ಚಿ ಶಿಕ್ಷೆ ನೀಡುವುದಾಗಿ ಹೇಳಿದ್ದಾರೆ.ಹೊರಾಂಗಣ ಕ್ರೀಡಾಂಗಣದಲ್ಲಿ ಕಬಡ್ಡಿ ಟೂರ್ನಿ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇಂಗ್ಲೆಂಡ್‌ನಲ್ಲಿರುವ ಇಬ್ಬರು ಮಕ್ಕಳು ಹಾಗೂ ಪತ್ನಿ ಇದೀಗ ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ. ಘಟನೆಯಿಂದ ಸಂದೀಪ್ ಕುಟುಂಬ ಸಂಪೂರ್ಣ ಜರ್ಝರಿತವಾಗಿದೆ.
ಕಬಡ್ಡಿ ಕ್ಲಬ್, ಫೆಡರೇಶನ್ ನಡುವಿನ ಕೆಲ ಮನಸ್ತಾಪಗಳು ದಾಳಿಗೆ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಅಂತಾರಾಷ್ಟ್ರೀಯ ಕಬಡ್ಡಿ ಪಟು ಕಬಡ್ಡಿ ಅಗಂಣದಲ್ಲೇ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿರುವುದು ನಿಜಕ್ಕೂ ದುರಂತ.