ನವದೆಹಲಿ(ಡಿ.26): ಭಾರತದ ತಾರಾ ಮಹಿಳಾ ಕುಸ್ತಿಪಟು ವಿನೇಶ್‌ ಫೋಗಾಟ್‌, ವಿದೇಶದಲ್ಲಿ ತರಬೇತಿ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಸಮ್ಮತಿಸಿದೆ. 

ವಿನೇಶ್‌ ಜತೆಯಲ್ಲಿ ವೈಯಕ್ತಿಕ ಕೋಚ್‌ ವೊಲ್ಲೇರ್‌ ಅಕೋಸ್‌, ಪ್ರಿಯಾಂಕ ಫೋಗಾಟ್‌ ಮತ್ತು ಫಿಸಿಯೊ ಪೂರ್ಣಿಮಾ ರಾಮನ್‌ ವಿದೇಶಕ್ಕೆ ತೆರಳಲಿದ್ದಾರೆ. ವಿನೇಶ್‌ ಮತ್ತವರ ತಂಡ ಹಂಗೇರಿಯಲ್ಲಿ 40 ದಿನ ಅಭ್ಯಾಸ ನಡೆಸಲಿದೆ. 

ಡಿಸೆಂಬರ್ 28 ರಿಂದ ಜನವರಿ 24 ರವರೆಗೆ ಹಂಗೇರಿಯ ಬುಡಾಪೆಸ್ಟ್‌ನ ವಾಸಸ್‌ ಸ್ಪೋರ್ಟ್ಸ್ ಕ್ಲಬ್‌, ಜನವರಿ24 ರಿಂದ ಫೆಬ್ರವರಿ 5 ರವರೆಗೆ ಪೋಲೆಂಡ್‌ನ ಒಲಿಂಪಿಕ್‌ ತರಬೇತಿ ಕೇಂದ್ರದಲ್ಲಿ ಅಭ್ಯಾಸ ನಡೆಯಲಿದೆ. ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಯೋಜನೆ (ಟಾಫ್ಸ್‌) ಅಡಿ ಸರ್ಕಾರಕ್ಕೆ 15.51 ಲಕ್ಷ ವ್ಯಯ ಮಾಡಲಾಗುತ್ತಿದೆ.

ಪಿ ವಿ ಸಿಂಧು ಜತೆ ತೆರಳಲು ಫಿಟ್ನೆಸ್‌ ಕೋಚ್‌ಗೆ ಅಸ್ತು...!

ಈ ಮೊದಲು ಭಾರತದ ತಾರಾ ಬ್ಯಾಡ್ಮಿಂಟನ್ ಪಟು ಪಿ.ವಿ. ಸಿಂಧು ಜನವರಿಯಲ್ಲಿ ನಡೆಯಲಿರುವ 3 ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ತಮ್ಮ ಜತೆ ಫಿಸಿಯೋ ಹಾಗೂ ಫಿಟ್ನೆಸ್ ಕೋಚ್ ಕರೆದೊಯ್ಯಲು ಅವಕಾಶ ನೀಡಬೇಕು ಎಂದು ಸಾಯ್ ಬಳಿ ಮನವಿ ಮಾಡಿಕೊಂಡಿದ್ದರು. ಸಿಂಧು ಜತೆ ಫಿಸಿಯೋ ಹಾಗೂ ಫಿಟ್ನೆಸ್ ಕೋಚ್‌ ಕರೆದೊಯ್ಯುವುದರಿಂದ 8.25 ಲಕ್ಷ ರುಪಾಯಿ ಖರ್ಚಾಗಬಹುದು ಎಂದು ಅಂದಾಜಿಸಲಾಗಿದ್ದು, ಇದಕ್ಕೆ ಸಾಯ್ ಸಮ್ಮತಿ ಸೂಚಿಸಿದ್ದನ್ನು ನೆನಪಿಸಿಕೊಳ್ಳಬಹುದಾಗಿದೆ.