93ನೇ ವಯಸ್ಸಿಗೆ ಓಟ ಆರಂಭಿಸಿದ್ದ ಶತಾಯುಷಿ ಅಥ್ಲೀಟ್ ಮನ್ ಕೌರ್ ಇನ್ನಿಲ್ಲ..!
* ‘ಚಂಡೀಗಢದ ಅಚ್ಚರಿಯ ಮಹಿಳೆ’ ಮನ್ ಕೌರ್ ನಿಧನ
* ಶತಾಯುಷಿ ಮನ್ ಕೌರ್ ಮೊಹಾಲಿಯ ಆಸ್ಪತ್ರೆಯಲ್ಲಿ ಕೊನೆಯುಸಿರು
* 93ನೇ ವಯಸ್ಸಿಗೆ ಓಟ ಆರಂಭಿಸಿದ್ದ ಮನ್ ಕೌರ್
ಚಂಡೀಗಢ(ಆ.01): ಶತಾಯುಷಿ ಅಥ್ಲೀಟ್ ಮನ್ ಕೌರ್(105) ಅವರು ಹೃದಯಾಘಾತದಿಂದ ಶನಿವಾರ ನಿಧನರಾದರು. ‘ಚಂಡೀಗಢದ ಅಚ್ಚರಿಯ ಮಹಿಳೆ’ ಎಂದೇ ಖ್ಯಾತರಾಗಿದ್ದ ಮನ್ ಕೌರ್, ಇಳಿ ವಯಸ್ಸಿನಲ್ಲಿ ಓಟದ ಸ್ಪರ್ಧೆಗಳಲ್ಲಿ ಪದಕ ಗೆಲ್ಲುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
1916 ಮೇ 1ರಂದು ಜನಿಸಿದ್ದ ಕೌರ್, ತಮ್ಮ ಹಿರಿಯ ಪುತ್ರ ಗುರುದೇವ್ ಅವರು ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ನೋಡಿ ಸ್ಫೂರ್ತಿಗೊಂಡು 93ನೇ ವಯಸ್ಸಿನಲ್ಲಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಶುರು ಮಾಡಿದ್ದರು. ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮನ್ ಕೌರ್ ಅವರನ್ನು ಮೊಹಾಲಿಯ ದೇರಾಬಸ್ಸಿ ಆಯುರ್ವೇದಿಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮನ್ ಕೌರ್ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಮಗಳನ್ನು ಅಗಲಿದ್ದಾರೆ.
ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರ ಆರೋಗ್ಯದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದರು. ಆದರೆ ಇದ್ದಕ್ಕಿದ್ದಂತೆ ಏನಾಯ್ತೋ ಗೊತ್ತಿಲ್ಲ, ದಿಢೀರ್ ಹೃದಯಾಘಾತ ಸಂಭವಿಸಿದೆ ಎಂದು ಪುತ್ರ ಗುರುದೇವ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಜಪಾನ್ ಮಣಿಸಿ, ರ‍್ಯಾಂಕಿಂಗ್‌ನಲ್ಲಿ ಶ್ರೇಷ್ಠ ಸಾಧನೆ ಮಾಡಿದ ಭಾರತ ಹಾಕಿ ತಂಡ..!
2007ರಲ್ಲಿ ಚಂಡೀಗಢದಲ್ಲಿ ನಡೆದ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ ಮೊದಲ ಪದಕ ಗೆದ್ದ ಅವರು, 2017ರಲ್ಲಿ ನ್ಯೂಜಿಲೆಂಡ್‌ನ ಆಕ್ಲಂಡ್‌ನಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್ ಗೇಮ್ಸ್‌ನ 100 ಮೀಟರ್‌ನಲ್ಲಿ ಸ್ವರ್ಣ ಪದಕಕ್ಕೆ ಮುತ್ತಿಟ್ಟಿದ್ದರು. ಪೋಲೆಂಡ್‌ನಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್ ಗೇಮ್ಸ್‌ನ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗಗಳಲ್ಲಿ ಚಿನ್ನ ಗೆದ್ದಿದ್ದ ಕೌರ್ ಹಲವು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ.