26ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ 8 ಚಿನ್ನ, 10 ಬೆಳ್ಳಿ ಮತ್ತು 6 ಕಂಚು ಸೇರಿದಂತೆ ಒಟ್ಟು 24 ಪದಕಗಳನ್ನು ಗೆದ್ದುಕೊಂಡಿದೆ. ಕೊನೆಯ ದಿನ ಭಾರತ 3 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ಪುರುಷರ ಜಾವೆಲಿನ್ ಎಸೆತದಲ್ಲಿ ಸಚಿನ್ ಯಾದವ್ ಬೆಳ್ಳಿ ಗೆದ್ದರು.

ಗುಮಿ(ದಕ್ಷಿಣ ಕೊರಿಯಾ):26ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ 24 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಕಳೆದ ಬಾರಿ(27)ಗಿಂತ ಈ ವರ್ಷ 3 ಪದಕ ಕಡಿಮೆ ಗೆದ್ದರೂ, ಚಿನ್ನದ ಗಳಿಕೆ ಕಳೆದ ಬಾರಿಗಿಂತ 2 ಹೆಚ್ಚಾಗಿದೆ.ಹಿಂದಿನ ಆವೃತ್ತಿಯಲ್ಲಿ 6 ಚಿನ್ನ ಲಭಿಸಿದ್ದರೆ, ಈ ಬಾರಿ 8 ಬಂಗಾರ ಭಾರತದ ಮುಡಿಗೇರಿದೆ. 10 ಬೆಳ್ಳಿ, 6 ಕಂಚು ಗೆದ್ದಿದೆ.

5 ದಿನಗಳ ಕೂಟದ ಕೊನೆ ದಿನವಾದ ಶನಿವಾರ 3 ಬೆಳ್ಳಿ, 3 ಕಂಚು ಲಭಿಸಿತು. ಪುರುಷರ ಜಾವೆಲಿನ್ ಎಸೆತದಲ್ಲಿ ಸಚಿನ್ ಯಾದವ್ (85.16 ಮೀಟರ್) ವೈಯಕ್ತಿಕ ಶ್ರೇಷ್ಠ ಪ್ರದರ್ಶನ ದಾಖಲಿಸಿ ಬೆಳ್ಳಿ ಗೆದ್ದರೆ, ಒಲಿಂಪಿಕ್ ಚಾಂಪಿಯನ್, ಪಾಕಿಸ್ತಾನದ ಅರ್ಶದ್ co(84.40 ಮೀ.) ಚಿನ್ನ ಜಯಿಸಿದರು. ಮಹಿಳೆಯರ 5000 ಮೀ. ರೇಸ್‌ನಲ್ಲಿ ಪಾರುಲ್ ಚೌಧರಿ 15 ನಿಮಿಷ 15.33 ಸೆಕೆಂಡ್‌ಗಳಲ್ಲಿ ಕ್ರಮಿಸಿ, ಕೂಟದಲ್ಲಿ 2ನೇ ಬೆಳ್ಳಿ ಗೆದ್ದರು. 3000 ಮೀ. ಸ್ಟೀಪಲ್ ಚೇಸ್‌ನಲ್ಲೂ ಅವರು 2ನೇ ಸ್ಥಾನಿಯಾಗಿದ್ದರು.

4X100 ಮೀ. ರಿಲೇ ಓಟದಲ್ಲಿ ಬೆಳ್ಳಿ ಗೆದ್ದ ಭಾರತ

ಇನ್ನು, ಅಭಿನಯ, ಸಬಾನಿ ನಂದಾ, ನಿತ್ಯಾ ಹಾಗೂ ಕರ್ನಾಟಕದ ಸ್ನೇಹಾ ಎಸ್.ಎಸ್. ಅವರಿದ್ದ ತಂಡ ಮಹಿಳೆಯರ 4x100 ಮೀ. ರಿಲೇ ಓಟದಲ್ಲಿ 43.86 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿ ಗೆದ್ದಿತು. ಮೂವರಿಗೆ ಕಂಚು: ಪುರುಷರ 200 ಮೀ.ನಲ್ಲಿ ಅನಿಮೇಶ್ ಕುಜೂರ್ (20.32 ಸೆಕೆಂಡ್), ರಾಷ್ಟ್ರೀಯ

ದಾಖಲೆ ಬರೆದರೂ ಕಂಚಿಗೆ ತೃಪ್ತಿಪಟ್ಟುಕೊಂಡರು. 800 ಮೀ. ರೇಸ್‌ನಲ್ಲಿ ಪೂಜಾ (2 ನಿಮಿಷ 01.89 ಸೆಕೆಂಡ್) ವೈಯಕ್ತಿಕ ಶ್ರೇಷ್ಠ ದಾಖಲೆಯೊಂದಿಗೆ ಕಂಚು ಗೆದ್ದರೆ, ಮಹಿಳೆಯರ 400 ಮೀ ಹರ್ಡಲ್ಸ್‌ನಲ್ಲಿ ವಿದ್ಯಾ ರಾಮರಾಜ್ 56.46 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚು ತಮ್ಮದಾಗಿಸಿಕೊಂಡರು.

ಸಿಂಗಾಪುರ ಓಪನ್ ಬ್ಯಾಡ್ಮಿಂಟನ್: ಸಾತ್ವಿಕ್-ಚಿರಾಗ್ ಜೋಡಿ ಹೊರಕ್ಕೆ

ಸಿಂಗಾಪುರ: ಈ ಋತುವಿನ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಕಾತರದಲ್ಲಿ ಭಾರತದ ತಾರಾ ಡಬಲ್ಸ್ ಜೋಡಿ ಸಾತ್ವಿಕ್ -ಚಿರಾಗ್ ಶೆಟ್ಟಿ ಕನಸು ಭಗ್ನಗೊಂಡಿದೆ. ವಿಶ್ವದ ಮಾಜಿ ನಂ.1 ಪುರುಷ ಡಬಲ್ಸ್ ಜೋಡಿಗೆ ಸಿಂಗಾಪುರ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋಲು ಎದುರಾಯಿತು.

ಶನಿವಾರ ನಡೆದ ಅಂತಿಮ 4ರ ಘಟ್ಟದ ಪಂದ್ಯದಲ್ಲಿ ಹಾಲಿ ವಿಶ್ವನಂ.3, ಮಲೇಷ್ಯಾದ ಆರೊನ್ ಚಿಯಾ ಮತ್ತು ಸೋಹ್ ವೊಯಿ ಯಿಕ್ ವಿರುದ್ಧ 21-19, 10-21, 18-21 ಗೇಮ್‌ಗಳಲ್ಲಿ ಪರಾಭವಗೊಂಡಿತು. 2ನೇ ಗೇಮ್‌ನಲ್ಲಿ ಕಳಪೆ ಆಟವಾಡಿ, 3ನೇ ಗೇಮ್‌ನಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದ ಭಾರತೀಯ ಜೋಡಿ ಒಂದು ಹಂತದಲ್ಲಿ 11-20 ಅಂಕಗಳಿಂದ ಹಿಂದಿತ್ತು. 7 ಮ್ಯಾಚ್ ಪಾಯಿಂಟ್ ಗಳನ್ನು ಉಳಿಸಿಕೊಂಡರೂ, ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.

ವೀಸಾ ಕೊಡಿ, ಇಲ್ಲದಿದ್ದರೆ ಏಷ್ಯಾ ಹಾಕಿ ಭಾರತದಿಂದ ಸ್ಥಳಾಂತರಿಸಿ: ಪಾಕ್ ಆಗ್ರಹ

ಲಾಹೋರ್: ಈ ಬಾರಿ ಭಾರತದಲ್ಲಿ ನಡೆಯಲಿರುವ ಪುರುಷರ ಏಷ್ಯಾಕಪ್‌ನಲ್ಲಿ ಭಾಗವಹಿಸಲು ತನ್ನ ಆಟಗಾರರಿಗೆ ವೀಸಾ ಖಾತರಿಪಡಿಸಿದ್ದರೆ, ಏಷ್ಯಾಕಪ್ ಅನ್ನು ಭಾರತದಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಪಾಕಿಸ್ತಾನ ಹಾಕಿ ಫೆಡರೇಶನ್ ಆಗ್ರಹಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಆಟಗಾರರಿಗೆ ವೀಸಾ ಸಮಸ್ಯೆ ಎದುರಾಗಿದೆ.

ಈ ಬೆನ್ನಲ್ಲೇ ಪಿಎಚ್‌ಎಫ್ ವಕ್ತಾರರು ಪ್ರತಿಕ್ರಿಯಿಸಿದ್ದು, 'ಏಷ್ಯಾಕಪ್ ಫೆಡರೇಶನ್ ಮತ್ತು ಸ್ಥಳೀಯ ಸಂಘಟಕರು ವೀಸಾ ನೀಡುವ ಬಗ್ಗೆ ಲಿಖಿತ ಭರವಸೆ ನೀಡಿದರೆ ಮಾತ್ರ ಪಿಎಚ್‌ ಎಫ್ ತನ್ನ ತಂಡವನ್ನು ಪಂದ್ಯಾವಳಿಗೆ ಕಳುಹಿಸುತ್ತದೆ. ಭಾರತದಲ್ಲಿ ಆಡಲು ಅನುಮತಿಗಾಗಿ ನಾವು ನಮ್ಮ ಸರ್ಕಾರವನ್ನು ಸಂಪರ್ಕಿಸುತ್ತೇವೆ' ಎಂದು ಪಿಎಚ್‌ಎಫ್ ವಕ್ತಾರರು ತಿಳಿಸಿದ್ದಾರೆ. ಏಷ್ಯಾಕಪ್ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ.