ನವದೆಹಲಿ(ಮಾ.20): 2020ರ ಟೋಕಿಯೋ ಒಲಿಂಪಿಕ್ಸ್‌ ನಡೆಯುವ ಬಗ್ಗೆ ಇನ್ನೂ ಅನುಮಾನಗಳಿದ್ದರೂ, ಭಾರತೀಯ ಒಲಿಂಪಿಕ್‌ ಸಂಸ್ಥೆ (ಐಒಎ) ಗುರುವಾರ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ)ಯನ್ನು ಬೆಂಬಲಿಸಿದ್ದು, ಕ್ರೀಡಾಕೂಟ ನಿಗದಿತ ವೇಳಾಪಟ್ಟಿಯ ಪ್ರಕಾರ ನಡೆದರೆ ಏನೇ ಆತಂಕವಿದ್ದರೂ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದೆ.

ಕೊರೋನಾ ಆತಂಕ: 2020ರಲ್ಲೇ ಟೋಕಿಯೋ ಒಲಿಂಪಿಕ್ಸ್‌ ನಡೆಸಲು ಸಾಧ್ಯವೇ?

ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಐಒಸಿ ಹಾಗೂ ಟೋಕಿಯೋ ಗೇಮ್ಸ್‌ ಆಯೋಜಕರು ಜುಲೈ 24ರಿಂದಲೇ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ನಡೆಸಬೇಕು ಎಂದು ಪಟ್ಟು ಹಿಡಿದಿದ್ದು, ವಿಶ್ವದಾದ್ಯಂತ ಟೀಕೆಗೆ ಗುರಿಯಾಗಿದ್ದಾರೆ. ಆದರೆ ಐಒಎ ಮಾತ್ರ ಐಒಸಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದೆ.

‘ಕೊರೋನಾ ಸೋಂಕು ಜಗತ್ತಿನಾದ್ಯಂತ ಹರಡುತ್ತಿದ್ದು ಭಾರೀ ಸಮಸ್ಯೆ ಉಂಟಾಗಿದೆ. ಆದರೆ ಮುಂದಿನ ಒಂದು ಇಲ್ಲವೇ ಎರಡು ತಿಂಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬರಲಿದೆ ಎನ್ನುವ ವಿಶ್ವಾಸವಿದೆ. ಕೊರೋನಾ ಉಗಮಸ್ಥಾನ ಚೀನಾದಲ್ಲಿ ಈಗಾಗಲೇ ನಿಯಂತ್ರಣಕ್ಕೆ ತರಲಾಗಿದೆ. ಯಾವುದೇ ಅಡ್ಡಿ ಆತಂಕವಿಲ್ಲದೆ ನಿಗದಿತ ವೇಳಾಪಟ್ಟಿಯಂತೆ ಒಲಿಂಪಿಕ್ಸ್‌ ನಡೆಯುವ ನಿರೀಕ್ಷೆ ಇದೆ ಎಂದು ಐಒಎ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ‘ಐಒಸಿ ನಮ್ಮ ಮಾತೃ ಸಂಸ್ಥೆ. ಅದು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರಬೇಕಾಗುತ್ತದೆ. ಕ್ರೀಡಾಕೂಟ ನಡೆಸಲು ಐಒಸಿ ನಿರ್ಧರಿಸಿದರೆ ಏನೇ ಆತಂಕವಿದ್ದರೂ ನಾವು ಸ್ಪರ್ಧಿಸಬೇಕಾಗುತ್ತದೆ’ ಎಂದು ಅಧಿಕಾರಿ ಹೇಳಿದ್ದಾರೆ. ಐಒಸಿ ನಿಲುವಿಗೆ ಹಲವು ಅಥ್ಲೀಟ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದು ಕೆಲ ಅಧಿಕಾರಿಗಳು ಸಹ ಅಥ್ಲೀಟ್‌ಗಳ ಕೂಗಿಗೆ ದನಿಗೋಡಿಸಿದ್ದಾರೆ.

10 ಪದಕ ಗೆಲ್ಲುವ ಗುರಿ: ಭಾರತೀಯ ಕ್ರೀಡಾಪಟುಗಳ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಐಒಎ ಒಪ್ಪಿಕೊಂಡಿದೆ. ‘ನಮ್ಮ ಕ್ರೀಡಾಪಟುಗಳ ಅಭ್ಯಾಸಕ್ಕೆ ಸಮಸ್ಯೆಯಾಗುತ್ತಿದೆ. ಆದರೆ ಭಾರತ ಮಾತ್ರವಲ್ಲ, ಎಲ್ಲಾ ದೇಶಗಳ ಕ್ರೀಡಾಪಟುಗಳಿಗೂ ತೊಂದರೆಯಾಗುತ್ತಿದೆ. ಹೀಗಾಗಿ ನಮ್ಮ ನಿರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಟೋಕಿಯೋ ಗೇಮ್ಸ್‌ನಲ್ಲಿ ನಾವು 10 ಅಥವಾ ಹೆಚ್ಚು ಪದಕಗಳನ್ನ ನಿರೀಕ್ಷೆ ಮಾಡುತ್ತಿದ್ದೇವೆ’ ಎಂದು ಐಒಎ ಅಧಿಕಾರಿ ಹೇಳಿದ್ದಾರೆ.

ಅಥ್ಲೀಟ್‌ಗಳ ಮೇಲೆ ನಿಗಾ: ಐಒಎ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ತಿಳಿಸಿದೆ. ‘ನಾವು ನಮ್ಮೆಲ್ಲಾ ಅಥ್ಲೀಟ್‌ಗಳ ಅಭ್ಯಾಸದ ಮೇಲೆ ನಿಗಾ ವಹಿಸಿದ್ದೇವೆ. ಅವರ ಆರೋಗ್ಯದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. ಭಾರತ ಸರ್ಕಾರ, ಐಒಸಿ ಹಾಗೂ ಟೋಕಿಯೋ ಗೇಮ್ಸ್‌ ಆಯೋಜಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದು ಐಒಎ ಅಧಿಕಾರಿ ಮಾಹಿತಿ ನೀಡಿದ್ದಾರೆ.