Happy Birthday Sania Mirza: 35ನೇ ವಸಂತಕ್ಕೆ ಕಾಲಿರಿಸಿದ ಮೂಗುತಿ ಸುಂದರಿ
* 35ನೇ ವಸಂತಕ್ಕೆ ಕಾಲಿರಿಸಿದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ
* ತಮ್ಮ ಬಾಲ್ಯದ ಫೋಟೋವೊಂದನ್ನು ಹಂಚಿಕೊಂಡ ಸಾನಿಯಾ
* ತಾಯಿಯ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಟೆನಿಸ್ ತಾರೆ
ದುಬೈ(ನ.15): ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ದುಬೈನಲ್ಲಿ ತಮ್ಮ ಪತಿ ಶೋಯೆಬ್ ಮಲಿಕ್ (Shoaib Malik) ಹಾಗೂ ಪುತ್ರ ಇಜಾನ್ ಮಿರ್ಜಾ ಮಲಿಕ್ ಜತೆ ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ವೇಳೆ ತಮ್ಮ ಬಾಲ್ಯದ ಫೋಟೊವೊಂದನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಹುಟ್ಟುಹಬ್ಬದ (Birthday Celebration) ಸಂಭ್ರಮಾಚರಣೆಯ ಕೆಲವು ಫೋಟೋಗಳನ್ನು ಸಾನಿಯಾ ಮಿರ್ಜಾ ತಮ್ಮ ಇನ್‌ಸ್ಟಾಗ್ರಾಂ (Instagram) ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಬರ್ತ್ ಡೇ ಪಾರ್ಟಿಯಲ್ಲಿ ಸುಂದರ ಕೇಕ್, ಗಾಯಕ ಫಾಮಿಲ್ ಖಾನ್ ಅವರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇನ್ನು ಪತಿ ಶೋಯೆಬ್ ಮಲಿಕ್ ಕೂಡಾ ಸಾನಿಯಾ ಮಿರ್ಜಾ ಜತೆಗಿರುವ ಫೋಟೋದೊಂದಿಗೆ, ಹ್ಯಾಪಿ ಬರ್ತ್ ಡೇ ಸಾನು ಎಂದು ಶುಭ ಕೋರಿದ್ದಾರೆ.
Team India ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ ಹೊಸ ಕನಸನ್ನು ಬಿಚ್ಚಿಟ್ಟ ರವಿಶಾಸ್ತ್ರಿ..!
ಇನ್ನು ಸಾನಿಯಾ ಮಿರ್ಜಾ ತಾಯಿ ನಸೀಮಾ ಮಿರ್ಜಾ ಅವರದ್ದೂ ಇಂದೇ ಬರ್ತ್ ಡೇ ಆಗಿದ್ದರಿಂದ, ಮೂಗುತಿ ಸುಂದರಿ ಸಾನಿಯಾ ಮಿರ್ಜಾ ತಮ್ಮ ತಾಯಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಹ್ಯಾಪಿ ಬರ್ತ್ ಡೇ ಮುಮ್ಮಾ ಎಂದು ತಮ್ಮ ಬಾಲ್ಯದ ಫೋಟೋ ಹಂಚಿಕೊಂಡಿರುವ ಸಾನಿಯಾ, ನಿನ್ನ ಜತೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕೆ ನನಗೆ ಎಂದೆಂದಿಗೂ ಹೆಮ್ಮೆಯಾಗುತ್ತದೆ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಸಾನಿಯಾ ಮಿರ್ಜಾ, ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು 2010ರಲ್ಲಿ ವಿವಾಹವಾಗಿದ್ದರು. ಇದಾದ ಬಳಿಕ ಈ ಜೋಡಿ ದುಬೈನಲ್ಲಿ ವಾಸವಾಗಿದ್ದಾರೆ. ಭಾರತದ ಟೆನಿಸ್ ತಾರೆ ಕೆಲಕಾಲ ಯುಎಇನಲ್ಲಿ ಕಾಲ ಕಳೆದರೆ, ಮತ್ತೆ ಕೆಲವು ಕಾಲ ತವರು ಮನೆ ಹೈದರಾಬಾದ್‌ನಲ್ಲಿರುತ್ತಾರೆ. ಇತ್ತೀಚೆಗೆ ದುಬೈನಲ್ಲಿ ಪತಿಯ ಜತೆ ಕೆಲವೊಂದು ಮುದ್ದಾದ ವಿಡಿಯೋಗಳನ್ನು ಸಾನಿಯಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಸಾನಿಯಾ ಮಿರ್ಜಾ ಕಿರು ಪರಿಚಯ: ಟೆನಿಸ್ ತಾರೆ ಸಾನಿಯಾ ಮಿರ್ಜಾ ನವೆಂಬರ್ 15, 1986ರಲ್ಲಿ ಮುಂಬೈನಲ್ಲಿ ಜನಿಸಿದರು. ಮಹಿಳಾ ಡಬಲ್ಸ್ ಶ್ರೇಯಾಂಕದಲ್ಲಿ ವಿಶ್ವ ನಂ.1 ಸ್ಥಾನಕ್ಕೇರಿದ್ದ ಸಾನಿಯಾ ಮಿರ್ಜಾ ಇದುವರೆಗೂ ಒಟ್ಟು 6 ಟೆನಿಸ್ ಗ್ರ್ಯಾನ್‌ಸ್ಲಾಂ ಜಯಿಸಿದ ಸಾಧನೆ ಮಾಡಿದ್ದಾರೆ. 2003ರಿಂದ 2013ರಲ್ಲಿ ನಿವೃತ್ತಿಯಾಗುವ ವರೆಗೂ ಸಾನಿಯಾ ಮಿರ್ಜಾ WTA ಶ್ರೇಯಾಂಕದಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಭಾರತದ ನಂ.1 ಟೆನಿಸ್ ಆಟಗಾರ್ತಿಯಾಗಿದ್ದರು. ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಸೇರಿದಂತೆ ವಿವಿಧ ಟೂರ್ನಿಗಳಲ್ಲಿ 6 ಚಿನ್ನದ ಪದಕ ಸಹಿತ ಒಟ್ಟು 14 ಪದಕಗಳಿಗೆ ಕೊರಳೊಡ್ಡಿದ್ದಾರೆ.
6 ಗ್ರ್ಯಾನ್ ಸ್ಲಾಂ ಚಾಂಪಿಯನ್:
2009ರಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಭಾರತದವರೇ ಆದ ಮಹೇಶ್ ಭೂಪತಿ ಜತೆಗೂಡಿ ಸಾನಿಯಾ ಮಿರ್ಜಾ ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆಲ್ಲುವಲ್ಲಿ ಯಶಸ್ವಿಯಾದರು. ಇದಾದ ಬಳಿಕ 2012ರಲ್ಲಿ ನಡೆದ ಫ್ರೆಂಚ್ ಓಪನ್‌ನಲ್ಲಿ ಮಹೇಶ್ ಭೂಪತಿ ಜತೆ ಸಾನಿಯಾ ಮಿರ್ಜಾ ಎರಡನೇ ಗ್ರ್ತಾನ್‌ಸ್ಲಾಂ ಟ್ರೋಫಿಗೆ ಮುತ್ತಿಕ್ಕಿದರು. ಇನ್ನು 2014ರಲ್ಲಿ ನಡೆದ ಯುಎಸ್ ಓಪನ್‌ನಲ್ಲಿ ಬ್ರೂನೊ ಸೋರಸ್ ಜತೆಗೂಡಿ ಮೂರನೇ ಗ್ರ್ಯಾನ್ ಸ್ಲಾಂ ಗೆಲ್ಲುವಲ್ಲಿ ಯಶಸ್ವಿಯಾದರು.
ಇದಾದ ಬಳಿಕ ಮಹಿಳಾ ಡಬಲ್ಸ್‌ನಲ್ಲಿ 2015ರಲ್ಲಿ ಮಾರ್ಟಿನಾ ಹಿಂಗೀಸ್ ಜತೆಗೂಡಿ ವಿಂಬಲ್ಡನ್ ಟ್ರೋಫಿಗೆ ಮುತ್ತಿಕ್ಕಿದರು. ಇದಾದ ಬಳಿಕ ಅದೇ ವರ್ಷದಲ್ಲಿ ನಡೆದ ಯುಎಸ್ ಓಪನ್‌ನಲ್ಲೂ ಮಾರ್ಟಿನಾ ಹಿಂಗೀಸ್ ಜತೆಗೂಡಿ ಮತ್ತೊಮ್ಮೆ ಗ್ರ್ಯಾನ್ ಸ್ಲಾಂ ಟ್ರೋಫಿ ಜಯಿಸಿದರು. ಇದಾದ ಬಳಿಕ ಮರು ವರ್ಷ ಅಂದರೆ 2016ರಲ್ಲಿ ಮಾರ್ಟಿನಾ ಹಿಂಗೀಸ್ ಜತೆಗೂಡಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಸಾನಿಯಾ ಮಿರ್ಜಾ ಯಶಸ್ವಿಯಾದರು.