ಪ್ಯಾರಿಸ್‌(ಸೆ.09): ಕೊರೋನಾ ಸೋಂಕಿನ ಭೀತಿಯ ನಡುವೆಯೇ ವಿಶ್ವದಾದ್ಯಂತ ಕ್ರೀಡಾಕೂಟಗಳು, ಟೂರ್ನಿಗಳು ನಡೆಯುತ್ತಿದ್ದರೂ ಪ್ರೇಕ್ಷಕರು ಕ್ರೀಡಾಂಗಣಗಳಿಗೆ ಪ್ರವೇಶಿಸಲು ಅವಕಾಶ ಸಿಕ್ಕಿರುವುದು ಕೆಲವೇ ಕೆಲವು ದೇಸಿ ಟೂರ್ನಿಗಳಲ್ಲಿ ಮಾತ್ರ. 

ಆದರೆ ಮಹತ್ವದ ಅಂತಾರಾಷ್ಟ್ರೀಯ ಪಂದ್ಯಾವಳಿಗೆ ಪ್ರೇಕ್ಷಕರಿಗೆ ಪ್ರವೇಶ ನೀಡಿದ ಉದಾಹರಣೆ ಇಲ್ಲ. ಫ್ರೆಂಚ್‌ ಟೆನಿಸ್‌ ಫೆಡರೇಷನ್‌ ಸಾಹಸಕ್ಕೆ ಕೈಹಾಕುತ್ತಿದ್ದು, ಸೆಪ್ಟೆಂಬರ್ 27ರಿಂದ ಆರಂಭಗೊಳ್ಳಲಿರುವ ಫ್ರೆಂಚ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂ ಟೂರ್ನಿಯಲ್ಲಿ ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸುವುದಾಗಿ ಘೋಷಿಸಿದೆ.

ಸ್ಥಳೀಯ ಸರ್ಕಾರಿ ಆಡಳಿತ 5000 ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡಿದ್ದು, ಪಂದ್ಯಗಳು ನಡೆಯುವ ಎರಡು ಪ್ರಮುಖ ಕೋರ್ಟ್‌ಗಳಿಗೆ ತಲಾ 5000 ಹಾಗೂ ಮತ್ತೊಂದು ಕೋರ್ಟ್‌ಗೆ 1500 ಪ್ರೇಕ್ಷಕರನ್ನು ಬಿಡುವುದಾಗಿ ಫ್ರೆಂಚ್‌ ಟೆನಿಸ್‌ ಫೆಡರೇಷನ್‌ನ ಅಧ್ಯಕ್ಷ ಬನಾರ್ಡ್‌ ಗ್ಯುಡಿಚೆಲಿ ತಿಳಿಸಿದ್ದಾರೆ.

ತಮಿಳು ನಟನ ಜೊತೆ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ನಿಶ್ಚಿತಾರ್ಥ

ಒಟ್ಟಾರೆ ಒಂದು ದಿನ ಮೂರು ಕೋರ್ಟ್‌ಗಳು ಸೇರಿ 11.500 ಪ್ರೇಕ್ಷಕರಿಗೆ ಟೆನಿಸ್  ಪಂದ್ಯ ವೀಕ್ಷಣೆಗೆ ಅವಕಾಶ ಸಿಕ್ಕಂತೆ ಆಗಲಿದೆ. ಸದ್ಯ ಯುಎಸ್ ಓಪನ್ ಟೆನಿಸ್ ಟೂರ್ನಿ ನಡೆಯುತ್ತಿದ್ದು, ಖಾಲಿ ಸ್ಟೇಡಿಯಂನಲ್ಲಿ ಪಂದ್ಯಾವಳಿಗಳು ನಡೆಯುತ್ತಿವೆ.