- ಧನಂಜಯ್ ಎಸ್. ಹಕಾರಿ, ಕನ್ನಡಪ್ರಭ

ಬೆಂಗಳೂರು(ಡಿ.29): ಕೊರೋನಾ ಹಾವಳಿ, ಕ್ರೀಡಾ ಇಲಾಖೆ ಅಧಿಕಾರಿಗಳ ವಿಳಂಬ ಧೋರಣೆಯ ಅಡೆತಡೆಗಳಿಗೆ ಕೊನೆಗೂ ತಾತ್ಕಾಲಿಕ ಬ್ರೇಕ್‌ ಬಿದ್ದಂತಾಗಿದೆ. ಆಮೆಗತಿಯಲ್ಲಿ ಸಾಗಿದ್ದ ಕಂಠೀರವ ಕ್ರೀಡಾಂಗಣದ ಹೊಸ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಕೆ ಕಾರ್ಯ ಸೋಮವಾರದಿಂದ ಆರಂಭವಾಗಿದೆ. 

ಸುಮಾರು ಒಂದೂವರೆ ವರ್ಷದ ಬಳಿಕ ಟ್ರ್ಯಾಕ್‌ ಅಳವಡಿಕೆ ಕಾರ‍್ಯಕ್ಕೆ ಚಾಲನೆ ದೊರೆತಂತಾಗಿದೆ. ಕಳೆದ ನವೆಂಬರ್‌ 2ನೇ ವಾರದಲ್ಲಿ ಮಳೆ ಬರುವಿಕೆಯನ್ನು ನೋಡಿಕೊಂಡು ದೀಪಾವಳಿ ಬಳಿಕ ಕಾಮಗಾರಿ ಆರಂಭಿಸುವುದಾಗಿ ಇಲಾಖೆ ನಿರ್ದೇಶಕರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದರು. ಅಂತೆಯೇ ಈಗ ಟ್ರ್ಯಾಕ್‌ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ವಿದೇಶದಿಂದ ಟ್ರ್ಯಾಕ್‌ ಸಾಮಗ್ರಿ:

ಉತ್ತಮ ಗುಣಮಟ್ಟದ ಟ್ರ್ಯಾಕ್‌ ಅಳವಡಿಸುವ ಉದ್ದೇಶದಿಂದ ಸಿಂಥೆಟಿಕ್‌ ಸಾಮಗ್ರಿಯನ್ನು ಯುರೋಪ್‌ ಖಂಡದ 3 ರಾಷ್ಟ್ರಗಳಿಂದ ತರಿಸಲಾಗಿದೆ ಎಂದು ಹಿರಿಯ ಕ್ರೀಡಾ ಅಧಿಕಾರಿಯೊಬ್ಬರು ಹೇಳಿದ್ದಾರೆ. ರೆಕಾರ್ಟನ್‌ ಹೆಸರಿನ ಸಿಂಥೆಟಿಕ್‌ ಟ್ರ್ಯಾಕ್‌ ಸಾಮಗ್ರಿ ದೇಶದ ವಿವಿಧ ಭಾಗಗಳಲ್ಲಿ ಬಳಸಲಾಗಿದೆ. ದೇಶದ ವಿವಿದೆಡೆ ಸಿಂಥೆಟಿಕ್‌ ಟ್ರ್ಯಾಕ್‌ನ್ನು ಯಶಸ್ವಿಯಾಗಿ ಅಳವಡಿಸಿರುವ ಅಡ್ವಾನ್ಸಡ್‌ ಪಾಲಿಮರ್‌ ಟೆಕ್ನಾಲಜಿ ಕಂಪೆನಿ, ಕಂಠೀರವದ ಸಿಂಥೆಟಿಕ್‌ ಟ್ರ್ಯಾಕ್‌ ಕಾಮಗಾರಿಯ ಹೊಣೆ ಹೊತ್ತಿದೆ. ಪಾಲಿಮರ್‌ ಕಂಪೆನಿಯ ಸಿಬ್ಬಂದಿಯೊಬ್ಬರು ಒಂದೂವರೆ ತಿಂಗಳಲ್ಲಿ ಟ್ರ್ಯಾಕ್‌ ಕಾರ‍್ಯವನ್ನು ಪೂರ್ಣಗೊಳಿಸಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಅಂತೂ ಬಂತು ಕಂಠೀರವಕ್ಕೆ ಸಿಂಥೆಟಿಕ್‌ ಟ್ರ್ಯಾಕ್, 3 ದೇಶಗಳಿಂದ ಟ್ರ್ಯಾಕ್‌ ಸಾಮಾಗ್ರಿ ಆಮದು

ಕಾಮಗಾರಿ ಹೇಗೆ ನಡೆಯುತ್ತೆ?

400 ಮೀಟರ್‌ ಟ್ರ್ಯಾಕ್‌ ಇದಾಗಿದ್ದು, ಟ್ರ್ಯಾಕ್‌ನ ಸುತ್ತಲೂ ಮೊದಲ ಪದರದಲ್ಲಿ 3 ಸೆ.ಮೀ. ಎತ್ತರದ ಅಳತೆಯಲ್ಲಿ ಡಾಂಬರೀಕರಣ ಮಾಡಲಾಗುವುದು. ಡಾಂಬರೀಕರಣ ನಡೆಯುವ ವೇಳೆ ಹ್ಯಾಮರ್‌ ಕೇಜ್‌, ಥ್ರೋವರ್‌ ಕೇಜ್‌ ಹಾಗೂ ಲಾಂಗ್‌ಜಂಪ್‌ ಬಾಕ್ಸ್‌ಗಳನ್ನು ಹಾಕಲಾಗುವುದು. ಟಾರ್‌ ಹಾಕಿದ ಬಳಿಕ ರೋಲರ್‌ನಲ್ಲಿ ಸಮತಟ್ಟು ಮಾಡಲಾಗುವುದು. ಪೂರ್ಣ ಡಾಂಬರೀಕರಣ ಮಾಡಲು 3 ರಿಂದ 4 ದಿನಗಳು ಬೇಕಾಗಲಿದೆ. ಆ ಬಳಿಕ ಮಳೆ ಬಾರದೇ ಇದ್ದರೆ ಸುಮಾರು 10 ರಿಂದ 15 ದಿನಗಳಲ್ಲಿ ಡಾಂಬರೀಕರಣ ಪೂರ್ಣ ಪ್ರಮಾಣದಲ್ಲಿ ಒಣಗಲಿದ್ದು. ಆ ನಂತರ ಅಂಟು (ಸೆಲ್ಯೂಷನ್‌) ಹರಡುತ್ತಾ ಸಿಂಥೆಟಿಕ್‌ ಸರ್‌ಫೇಸ್‌ ಪುಡಿಯನ್ನು ಎರಚಬೇಕು. ಸಿಂಥೆಟಿಕ್‌ ಸಾಮಗ್ರಿಯನ್ನು ಹಾಕುವ ವೇಳೆ ಮಳೆ ಬರಬಾರದು. ಹೆಚ್ಚು ಬಿಸಿಲು ಇರುವುದನ್ನು ನೋಡಿಕೊಂಡೇ ಈ ಕಾರ‍್ಯಕ್ಕೆ ಮುಂದಾಗಬೇಕಿದೆ. ಸಿಂಥೆಟಿಕ್‌ ಸರ್‌ಫೇಸ್‌ ಪುಡಿ, ಅಂಟಿನಲ್ಲಿ ಬೆರೆತು ಒಳಗಲು 5 ರಿಂದ 6 ಗಂಟೆ ಬೇಕಾಗಲಿದೆ. ಸಿಂಥೆಟಿಕ್‌ ಸರ್‌ಫೇಸ್‌ ರಬ್ಬರ್‌ನಂತೆ ಗಟ್ಟಿಯಾದ ಬಳಿಕ 11 ಮಿಲಿ ಮೀಟರ್‌ ಇರಲಿದೆ. ಯಂತ್ರದ ಮೂಲಕ ಮಾರ್ಕ್ ನಡೆಸಲಾಗುವುದು. ಆ ಬಳಿಕ ಟ್ರ್ಯಾಕ್‌ ಉಪಯೋಗಕ್ಕೆ ಸಿದ್ಧ ಇರಲಿದೆ. ಇಷ್ಟೆಲ್ಲಾ ಕಾರ‍್ಯಕ್ಕೆ 2 ರಿಂದ 3 ತಿಂಗಳು ಹಿಡಿಯುವ ಸಾಧ್ಯತೆಯಿದೆ ಎಂದು ಸಿಂಥೆಟಿಕ್‌ ಟ್ರ್ಯಾಕ್‌ ತಜ್ಞ, ರಾಜ್ಯ ಅಥ್ಲೆಟಿಕ್‌ ಸಂಸ್ಥೆ ಕಾರ‍್ಯದರ್ಶಿ ರಾಜವೇಲು ‘ಕನ್ನಡಪ್ರಭ’ ಕ್ಕೆ ಮಾಹಿತಿ ನೀಡಿದ್ದಾರೆ.

ಟ್ರ್ಯಾಕ್‌ ಅಳವಡಿಕೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಫೆಬ್ರವರಿ 15ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ಇದ್ದು, ನಂತರ ಅಥ್ಲೀಟ್‌ಗಳಿಗೆ ಅಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗುವುದು. - ಕೆ. ಶ್ರೀನಿವಾಸ್‌, ಕ್ರೀಡಾ ಇಲಾಖೆ ಆಯುಕ್ತ