ಟೇಬಲ್ ಟೆನಿಸ್ ಒಕ್ಕೂಟಕ್ಕೆ ಡೆಲ್ಲಿ ಹೈಕೋರ್ಟ್ ತಪರಾಕಿ: ಮನಿಕಾ ಬಾತ್ರಾಗೆ ಗೆಲುವು..!
* ಭಾರತ ಟೇಬಲ್ ಟೆನಿಸ್ ಒಕ್ಕೂಟದ ಎದುರು ಮನಿಕಾ ಬಾತ್ರಾ(Manika Batra)ಗೆ ಗೆಲುವು
* ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಗೊಳ್ಳಲು ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವುದು ಕಡ್ಡಾಯ ಆದೇಶಕ್ಕೆ ಕೋರ್ಟ್ ತಡೆಯಾಜ್ಞೆ
* ರಾಷ್ಟ್ರೀಯ ಕೋಚ್ ವಿರುದ್ದ ತನಿಖೆ ನಡೆಸುವಂತೆ ಡೆಲ್ಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ
ನವದೆಹಲಿ(ಸೆ.24): ಮುಂಬರುವ ಯಾವುದೇ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಗೊಳ್ಳಲು ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವುದು ಕಡ್ಡಾಯ ಎಂದು ಭಾರತೀಯ ಟೇಬಲ್ ಟೆನಿಸ್(Table Tennis) ಒಕ್ಕೂಟ (ಟಿಟಿಎಫ್‌ಐ) ಹೊರಡಿಸಿದ್ದ ಆದೇಶವನ್ನು ದೆಹಲಿ ಹೈಕೋರ್ಟ್(Delhi High Court ) ತಡೆ ಹಿಡಿದಿದೆ. ಜತೆಗೆ ಟಿಟಿಎಫ್‌ಐ ವಿರುದ್ಧ ಖ್ಯಾತ ಟೇಬಲ್ ಟೆನಿಸ್ ಪಟು ಮನಿಕಾ ಬಾತ್ರಾ(Manika Batra) ಮಾಡಿರುವ ಆರೋಪದ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಂಡಿರಲಿಲ್ಲ ಎಂಬ ಕಾರಣಕ್ಕೆ ತಮ್ಮನ್ನು ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಿಂದ ಕೈಬಿಟ್ಟಿರುವುದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕೋಚ್ ಸೌಮ್ಯದೀಪ್ ಫಿಕ್ಸಿಂಗ್ ಮಾಡು ಎಂದಿದ್ದರು: ಮನಿಕಾ ಬಾತ್ರಾ ಅಚ್ಚರಿಯ ಹೇಳಿಕೆ!
ಟೋಕಿಯೋ ಒಲಿಂಪಿಕ್ಸ್(Tokyo Olympics) ವೇಳೆ ರಾಷ್ಟ್ರೀಯ ಕೋಚ್ ಸೌಮ್ಯದೀಪ್ ರಾಯ್‌ಗೆ ಪಂದ್ಯದ ವೇಳೆ ಕೋರ್ಟ್ ಪಕ್ಕದಲ್ಲಿ ಕುಳಿತುಕೊಳ್ಳಲು ಬಿಡದೆ ಅಶಿಸ್ತು ಪ್ರದರ್ಶಿಸಿದ್ದಾರೆ ಎಂದು ಟಿಟಿಎಫ್‌ಐ ಈ ಮುನ್ನ, ಮನಿಕಾಗೆ ನೋಟಿಸ್ ನೀಡಿತ್ತು. ಇದಕ್ಕೆ ಪ್ರತಿಯಾಗಿ ಮನಿಕಾ, ಈ ಹಿಂದೆ ಒಲಿಂಪಿಕ್ಸ್ ಅರ್ಹತಾ ಸುತ್ತಿನ ವೇಳೆ ಸೌಮ್ಯದೀಪ್ ತನಗೆ ಪಂದ್ಯ ಕೈಚೆಲ್ಲುವಂತೆ ಹೇಳಿದ್ದರು. ತಮ್ಮ ಅಕಾಡೆಮಿಯ ವಿದ್ಯಾರ್ಥಿನಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಈ ಫಿಕ್ಸಿಂಗ್ ಆಮಿಷ ಒಡ್ಡಿದ್ದರು ಮನಿಕಾ ಆರೋಪಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ರಾಷ್ಟ್ರೀಯ ಕೋಚ್ ವಿರುದ್ಧ ಬಾತ್ರಾ ಮಾಡಿರುವ ಆರೋಪದ ಕುರಿತು ತನಿಖೆ ನಡೆಸಿ, 4 ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿತು. ಜತೆಗೆ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳುವಿಕೆ ಕಡ್ಡಾಯ ಎಂಬ ಆದೇಶಕ್ಕೂ ತಡೆಯಾಜ್ಞೆ ನೀಡಿತು.