ನವದೆಹಲಿ(ನ.29): ಜಗತ್ತಿನೆಲ್ಲೆಡೆ ಕೊರೋನಾ ಹಾವಳಿ ಮುಂದುವರಿದಿದೆ. ಹೀಗಾಗಿ ವರ್ಷಾಂತ್ಯದಲ್ಲಿ ನಡೆಯಬೇಕಿದ್ದ ಕೆಲ ಕ್ರೀಡೆಗಳನ್ನು ಮುಂದೂಡಲಾಗುತ್ತಿದೆ. ಇನ್ನು ಕೆಲ ಕ್ರೀಡೆಗಳನ್ನು ರದ್ದುಗೊಳಿಸಲಾಗುತ್ತಿದೆ. 

ಇದೀಗ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌)ನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಎಂದು ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಪ್ರಕಟಿಸಲಾಗಿದೆ. ಕೊರೋನಾ ಕಾರಣದಿಂದಾಗಿ ಪ್ರೊ ಕಬಡ್ಡಿಯನ್ನು ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಲಾಗಿದೆ. ಆಟಗಾರರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

8ನೇ ಆವೃತ್ತಿ ಪ್ರೊ ಕಬಡ್ಡಿಯನ್ನು ಈ ವರ್ಷ ಜುಲೈ ರಿಂದ ಅಕ್ಟೋಬರ್‌ ವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಈ ವೇಳೆ ಕೊರೋನಾದಿಂದಾಗಿ ದೇಶದೆಲ್ಲೆಡೆ ಲಾಕ್‌ಡೌನ್‌ ಇದ್ದ ಕಾರಣದಿಂದ ಟೂರ್ನಿ ನಡೆಸುವುದು ಅಸಾಧ್ಯವಾಗಿತ್ತು. ಒಳಾಂಗಣದಲ್ಲಿ ನಡೆಯುವ ಕಬಡ್ಡಿ ಆಟದಲ್ಲಿ ಆಟಗಾರರು ಪರಸ್ಪರ ಸಂಪರ್ಕ ಪಡೆದಿರುತ್ತಾರೆ. ಸದ್ಯ ದೇಶದಲ್ಲಿ ಕೊರೋನಾದಂತಹ ಮಹಾಮಾರಿಯಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ‍್ಯವಾಗಿದೆ. ಹೀಗಾಗಿ ಕಬಡ್ಡಿ ಆಟವನ್ನು ಮುಂದಿನ ವರ್ಷ ಸುರಕ್ಷತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಆಯೋಜಿಸಲು ಚಿಂತಿಸಲಾಗುವುದು ಎಂದು ಪಿಕೆಎಲ್‌ ಹೇಳಿದೆ.

ಈ ವರ್ಷ ಪ್ರೊ ಕಬಡ್ಡಿ ಟೂರ್ನಿ ನಡೆಯುತ್ತಾ..?

ಪ್ರೊ ಕಬಡ್ಡಿಯಲ್ಲಿ ದೇಶಿಯ ಆಟಗಾರರ ಜೊತೆಯಲ್ಲಿ ವಿದೇಶಿ ಆಟಗಾರರು ಪ್ರಾಮುಖ್ಯತೆ ಪಡೆದಿದ್ದಾರೆ. ಕೊರೋನಾದಿಂದಾಗಿ ದೇಶದಲ್ಲಿ ವಿದೇಶ ಪ್ರಯಾಣವನ್ನು ಡಿ.31ರ ವರೆಗೆ ನಿಷೇಧಿಸಲಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಟೂರ್ನಿ ಆಯೋಜಿಸುವುದು ಸೂಕ್ತವಲ್ಲ ಎಂದು ಆಯೋಜಕರು ಹೇಳಿದ್ದಾರೆ.