ಟೈಕ್ವಾಂಡೋದಲ್ಲಿ ಸಾಧನೆ: ಇಂಡಿಯಾ ಬುಕ್ ಆಫ್ ರೆಕಾರ್ಡ್ ಪಡೆದ ಒಂದೂವರೆ ವರ್ಷದ ಬಾಲಕ..!
ರುದ್ರೇಶ್, ಸವಿತಾ ದಂಪತಿಯ ಮುದ್ದಾದ ಮಗ. ತನ್ನ ಒಂದು ವರ್ಷ ೬ ತಿಂಗಳ ವಯಸ್ಸಿನಲ್ಲಿಯೇ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗರಿಯನ್ನ ತನ್ನ ಮುಡಿಗೇರಿಸಿಕೊಂಡಿದ್ದಾನೆ. ಟೈಕ್ವಾಂಡೋ ಕ್ರೀಡೆಯಲ್ಲಿ ತನ್ನದೇ ಚಾಪು ಮೂಡಿಸುವ ಮೂಲಕ, ಇಂಡಿಯಾದ ಪ್ರತಿಷ್ಠಿತ ಸಾಧನೆಯನ್ನು ಈ ಪುಟ್ಟ ಬಾಲಕ ಮಾಡಿದ್ದಾನೆ.
ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ(ಜು.28): ಚಿಕ್ಕ ಮಕ್ಕಳು ಬೆಳೆಯುವ ಸಮಯದಲ್ಲಿ ಮನೆ ಬಿಟ್ಟು ಎಲ್ಲೂ ಹೋಗಬಾರದು ಎಂದು ಜೋಪಾನವಾಗಿ ಪೋಷಕರು ನೋಡಿಕೊಳ್ತಾರೆ. ಆದ್ರೆ ಇಲ್ಲೊಂದು ಯುವ ಜೋಡಿ, ತಮ್ಮಂತೆಯೇ ಮಗನೂ ಕ್ರೀಡೆಯಲ್ಲಿ ಯಶಸ್ಸು ಕಾಣಬೇಕು ಎಂದು ಚಿಕ್ಕ ವಯಸ್ಸಿನಲ್ಲಿಯೇ ಇನ್ನಿಲ್ಲದ ಅಭ್ಯಾಸ ಮಾಡಿಸಿ ಸಾಧನೆ ಮಾಡಿಸಿರುವ ಘಟನೆ ಕೋಟೆನಾಡಿನಲ್ಲಿ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಆ ಸಾಧನೆ ಏನು ಅಂತೀರಾ? ಈ ಸ್ಟೋರಿ ನೋಡಿ....,
ನೋಡಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಲ್ಲರಿಗಿಂತ ನಾನೇನು ಕಮ್ಮಿ ಇಲ್ಲ ಎಂದು ದೊಡ್ಡ ಮಕ್ಕಳೊಟ್ಟಿಗೇ ಕ್ರೀಡಾಭ್ಯಾಸ ಮಾಡ್ತಿರೋ ಪುಟಾಣಿ ಬಾಲಕ. ಹೆಸರು ಪ್ರಣವ್ ಅಭ್ಯಂತ್ ಅಂತ, ಚಿತ್ರದುರ್ಗ ನಗರದ IUDP ಬಡಾವಣೆಯ ನಿವಾಸಿಗಳಾದ ರುದ್ರೇಶ್, ಸವಿತಾ ದಂಪತಿಯ ಮುದ್ದಾದ ಮಗ. ತನ್ನ ಒಂದು ವರ್ಷ ೬ ತಿಂಗಳ ವಯಸ್ಸಿನಲ್ಲಿಯೇ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗರಿಯನ್ನ ತನ್ನ ಮುಡಿಗೇರಿಸಿಕೊಂಡಿದ್ದಾನೆ. ಟೈಕ್ವಾಂಡೋ ಕ್ರೀಡೆಯಲ್ಲಿ ತನ್ನದೇ ಚಾಪು ಮೂಡಿಸುವ ಮೂಲಕ, ಇಂಡಿಯಾದ ಪ್ರತಿಷ್ಠಿತ ಸಾಧನೆಯನ್ನು ಈ ಪುಟ್ಟ ಬಾಲಕ ಮಾಡಿದ್ದಾನೆ. ಇತ್ತ ತಂದೆ ತಾಯಿ ಇಬ್ಬರೂ ಟೈಕ್ವಾಂಡೋ ತರಬೇತುದಾರರು, ತನ್ನ ಮಗನಿಗೂ ಅದೇ ರೀತಿ ಟೈಕ್ವಾಂಡೋದಲ್ಲಿ ಸಾಧನೆ ಮಾಡಿಸಬೇಕು ಎನ್ನುವ ಛಲದಿಂದ ಈ ಯುವ ದಂಪತಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಎಷ್ಟೋ ಮಂದಿ ಪೋಷಕರು ತಮ್ಮ ಮಕ್ಕಳನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಬಂದ್ರೆ ಏನಾಗುತ್ತದೋ ಎಂದು ಯೋಚನೆ ಮಾಡ್ತಾರೆ. ಆದ್ರೆ ನನ್ನ ಮಗ ಚಿಕ್ಕ ವಯಸ್ಸಿನಲ್ಲಿಯೇ ಟೈಕ್ವಾಂಡೋ ಕ್ರೀಡೆ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರಿಂದಲೇ ಈ ಸಾಧನೆ ಮಾಡಲು ಸಹಕಾರಿಯಾಯಿತು. ಮಕ್ಕಳನ್ನು ಪೋಷಕರು ನಾಲ್ಕು ಗೋಡೆ ಮಧ್ಯೆ ಬೆಳೆಸೋದಕ್ಕಿಂದ ಹೊರಗಿನ ಪ್ರಪಂಚವನ್ನು ತೋರಿಸಿ, ಅವರಿಗೆ ಇಷ್ಟವಾದ ಕ್ರೀಡೆಯಲ್ಲಿ ಭಾಗವಹಿಸಲಿ ಅವಕಾಶ ಮಾಡಿಕೊಡಿ ಅಂತಾರೆ ಪುಟಾಣಿ ಬಾಲಕನ ತಂದೆ.
ಪ್ಯಾರಿಸ್ ಒಲಿಂಪಿಕ್ಸ್ ಪದಕ ಬೇಟೆಯಾಡಿದ ಮನು ಭಾಕರ್ ಬಗ್ಗೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್ ಸಂಗತಿಗಳಿವು!
ಇನ್ನೂ ಪುಟಾಣಿ ಬಾಲಕನ ದಿನಚರಿ ಬಗ್ಗೆ ಅವರ ಮೊದಲ ಗುರು ತಾಯಿಯನ್ನೇ ವಿಚಾರಿಸಿದ್ರೆ, ನನ್ನ ಮಗ ೯ ತಿಂಗಳು ಇರುವಾಗಲೇ ನಾನು ಮನೆಯಲ್ಲಿ ಟೈಕ್ವಾಂಡೋ ಕುರಿತು ತರಬೇತಿ ನೀಡಲು ಶುರು ಮಾಡಿದೆನು. ಅದರಂತೆ ಅವನೂ ಕೂಡ ಸಾಕಷ್ಟು ಆಸಕ್ತಿಯಿಂದ ಕಲಿತ ಪರಿಣಾಮ ಇಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಿಕ್ಕಿದೆ. ಎಂದಿನಂತೆ ನಿತ್ಯ ೬ ಗಂಟೆ ಸುಮಾರಿಗೆ ನನ್ನ ಮಗನೂ ಎದ್ದು ನಮ್ಮ ಜೊತೆ ರೆಡಿ ಆಗ್ತಾನೆ. ನಾನು ಮತ್ತು ನನ್ನ ಪತಿ ರುದ್ರೇಶ್ ಇಬ್ಬರೂ ಮೊದಲಿನಿಂದಲೂ ಟೈಕ್ವಾಂಡೋ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿರೋದ್ರಿಂದ, ನನ್ನ ಮಗನಿಗೆ ಹೊರಗಡೆ ಹಾಗೂ ಮನೆಯಲ್ಲಿ ಅಭ್ಯಾಸ ಮಾಡಿಸಲು ಅನುಕೂಲವಾಯಿತು. ನನ್ನ ಮಗ ಒಂದು ವರ್ಷ ಐದು ತಿಂಗಳಲ್ಲಿಯೇ ಟೈಕ್ವಾಂಡೋ ಕ್ರೀಡೆಯಲ್ಲಿ ಪಕ್ವತೆ ಕಂಡು ಕೊಂಡಿದ್ದನು. ಆದ್ರೆ ಯಾವುದೇ ರೆಕಾರ್ಡ್ ಆಗಬೇಕಾದ್ರೆ ಒಂದು ವರ್ಷ ೬ ತಿಂಗಳು ಆಗಬೇಕು, ಹಾಗಾಗಿ ಒಂದು ತಿಂಗಳು ಕಾದಿದ್ದು ಆ ಪ್ರಶಸ್ತಿ ಪಡೆಯಬೇಕಾಯಿತು. ಇದಲ್ಲದೇ ಈಗ WORLD WIDE BOOK OF RECORD ಗೂ ನನ್ನ ಮಗ ಸೆಲೆಕ್ಟ್ ಆಗಿದ್ದಾನೆ. ಶೀಘ್ರದಲ್ಲಿಯೇ ಆ ಪ್ರಶಸ್ತಿ ಕೂಡ ಬರುವ ನಿರೀಕ್ಷೆಯಿದೆ ಅಂತಾರೆ ಪ್ರಣವ್ ತಾಯಿ & ತರಬೇತುದಾರೆ ಸವಿತಾ.
ಒಟ್ಟಾರೆಯಾಗಿ ಮಕ್ಕಳು ಐದು ವರ್ಷ ಆಗುವವರೆಗೂ ಸ್ಕೂಲ್ ಗೆ ಸೇರಿಸೋದಕ್ಕೂ ಹಿಂದೇಟು ಹಾಕುವ ಈ ಕಾಲದಲ್ಲಿ, ಇಲ್ಲೊಬ್ಬ ಪುಟಾಣಿ ಬಾಲಕ ಟೈಕ್ವಾಂಡೋದಲ್ಲಿ ಸಾಧನೆಗೈದಿರೋದು ಎಲ್ಲರ ಕಣ್ಣು ನಿಬ್ನೆರಗು ಮಾಡುವಂತೆ ಮಾಡಿದೆ. ಇನ್ನೂ ಆ ಮಗು ಎತ್ತರಕ್ಕೆ ಬೆಳೆಯಲಿ ಎಂಬುದು ನಮ್ಮೆಲ್ಲರ ಬಯಕೆ.