Peng Shuai Missing ಕಮ್ಯುನಿಷ್ಟ್ ನಾಯಕನ ಮೇಲೆ ಆರೋಪ ಮಾಡಿದ ಚೀನಾ ಟೆನಿಸ್ ಆಟಗಾರ್ತಿ ನಾಪತ್ತೆ..!
* ಚೀನಾದ ಟೆನಿಸ್ ಅಟಗಾರ್ತಿ ಪೆಂಗ್ ಶೂಯಿ ದಿಢೀರ್ ನಾಪತ್ತೆ
* ಕಮ್ಯುನಿಷ್ಟ್ ನಾಯಕನ ಮೇಲೆ ಗಂಭೀರ ಸೆಕ್ಸ್ ಆರೋಪ ಮಾಡಿದ್ದ ಆಟಗಾರ್ತಿ
*ಚೀನಾ ಟೆನಿಸ್ ಆಟಗಾರ್ತಿ ಪೆಂಗ್ ಶೂಯಿ ಬೆಂಬಲಕ್ಕೆ ನಿಂತ ಟೆನಿಸ್ ಜಗತ್ತು
ಬೆಂಗಳೂರು(ನ.20): ಚೀನಾ ಟೆನಿಸ್ ಆಟಗಾರ್ತಿ ಪೆಂಗ್ ಶೂಯಿ (Peng Shuai) ದಿಢೀರ್ ನಾಪತ್ತೆಯಾಗಿ, ಇಡೀ ಟೆನಿಸ್ ಜಗತ್ತು ಆತಂಕಕ್ಕೆ ಒಳಗಾಗಿದೆ. ಚೀನಾದ ಕಮ್ಯುನಿಷ್ಟ್ ನಾಯಕ (Communist leader) ಮಾಜಿ ವೈಸ್ ಪ್ರೀಮಿಯರ್ ಜಾಂಗ್ ಗೌಲಿ ತಮ್ಮ ಮನೆಯಲ್ಲಿ ಸೆಕ್ಸ್ ನಡೆಸಲು ಆಹ್ವಾನಿಸಿದ್ದರು ಎನ್ನುವ ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೆ ಟೆನಿಸ್ ಆಟಗಾರ್ತಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಜಾಂಗ್ ಗೌಲಿ ಎದುರು ಸೆಕ್ಸ್ ಆರೋಪ (Sex allegations) ನಡೆಸಿದ ಬಳಿಕ ಟೆನಿಸ್ ಆಟಗಾರ್ತಿ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಪೆಂಗ್ ಶೂಯಿ ನವೆಂಬರ್ 02ರಂದು ಮಾಜಿ ವೈಸ್ ಪ್ರೀಮಿಯರ್ ಜಾಂಗ್ ಗೌಲಿ ನಡೆಸಿದ ಚಾಟಿಂಗ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಜಾಂಗ್ ಗೌಲಿ 2013ರಿಂದ 2018ರ ಅವಧಿಯಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ವೈಸ್ ಪ್ರೀಮಿಯರ್ ಆಗಿ ಕರ್ತವ್ಯವನ್ನು ನಿಭಾಯಿಸಿದ್ದರು. ಜಾಂಗ್ ಗೌಲಿ ಚೀನಾದ ಕಮ್ಯುನಿಷ್ಟ್ ಪಾರ್ಟಿಯ ಸದಸ್ಯರೂ ಸಹ ಆಗಿದ್ದಾರೆ.
ನವೆಂಬರ್ 02ರಂದು ಜಾಂಗ್ ಗೌಲಿ ಮೇಲೆ ಟೆನಿಸ್ ಆಟಗಾರ್ತಿ(Tennis Player) ಪೆಂಗ್ ಶೂಯಿ ಆರೋಪ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದರು. ಆದರೆ ಪೆಂಗ್ ಶೂಯಿ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಎಲ್ಲಾ ಆರೋಪದ ಸ್ಕ್ರೀನ್‌ಶಾಟ್‌ಗಳನ್ನು ಚೀನಾ ಸೆನ್ಸಾರ್ ಮಾಡಿದ್ದು, ಕೇವಲ 30 ನಿಮಿಷಗಳೊಳಗಾಗಿ ಪೆಂಗ್ ಶೂಯಿ ಹಂಚಿಕೊಂಡಿದ್ದ ಪೋಸ್ಟ್‌ನ್ನು ಅಳಿಸಿ ಹಾಕಿದೆ. ಪೆಂಗ್ ಶೂಯಿ ವೈಬೊ ಎನ್ನುವ ಸಾಮಾಜಿಕ ಜಾಲತಾಣದಲ್ಲಿ ಈ ಆರೋಪ ಮಾಡಿದ್ದರು. ಪೆಂಗ್ ಶೂಯಿಗೆ ವೈಬೋ ಜಾಲತಾಣದಲ್ಲಿ ಅರ್ಧ ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಇದ್ದಾರೆ.
AB de Villiers Retires: ನಾನು ಎಂದೆದಿಗೂ ಆರ್‌ಸಿಬಿಗ: ಭಾವನಾತ್ಮಕ ಸಂದೇಶ ರವಾನಿಸಿದ ಎಬಿ ಡಿವಿಲಿಯರ್ಸ್
ಮಹಿಳಾ ಟೆನಿಸ್ ಅಸೋಸಿಯೇಷನ್ ಮುಖ್ಯಸ್ಥೆ ಸ್ಟೀವ್ ಸಿಮೊನ್, ಈ ಘಟನೆಯ ಕುರಿತಂತೆ ಪ್ರತಿಕ್ರಿಯಿಸಿದ್ದು, ಮಹಿಳೆಯರಿಗೆ ಸೂಕ್ತ ಗೌರವ ಸಿಗಬೇಕು. ಅದನ್ನು ಬಿಟ್ಟು ರೀತಿ ಸೆನ್ಸಾರ್ ಮಾಡುವುದಲ್ಲ. ಪೆಂಗ್ ಶೂಯಿ ಅವರನ್ನು ಆನ್‌ಲೈನ್ ಮೂಲಕ ಸಂಪರ್ಕಿಸುವ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ ಎಂದು ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ನಾವು ಆಕೆಯನ್ನು ಸಂಪರ್ಕಿಸಲು ಸಾಧ್ಯವಿರುವ ಎಲ್ಲಾ ಫೋನ್ ನಂಬರ್‌ಗಳಿ, ಇ-ಮೇಲ್ ಹಾಗೂ ಇನ್ನಿತ್ತರ ಡಿಜಿಟಲ್ ಸಂಪರ್ಕ ಮಾಧ್ಯಮಗಳ ಮೂಲಕ ಪ್ರಯತ್ನ ಮಾಡಿದೆವು. ಆದರೆ ಹೀಗಿದ್ದೂ ಪೆಂಗ್ ಶೂಯಿ ಅವರ ಸಂಪರ್ಕ ಸಾಧ್ಯವಾಗಿಲ್ಲ ಎಂದು ಸ್ಟೀವ್ ಸಿಮೊನ್ ಹೇಳಿದ್ದಾರೆ.
ಪೆಂಗ್ ಶೂಯಿ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಟೆನಿಸ್ ಜಗತ್ತು ಆತಂಕ ವ್ಯಕ್ತಪಡಿಸಿದೆ. ಅಮೆರಿಕದ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ (Serena Williams) ಈ ಕುರಿತಂತೆ ಟ್ವೀಟ್ ಮಾಡಿದ್ದು, ನನ್ನ ಸಹ ಆಟಗಾರ್ತಿ ಪೆಂಗ್ ಶೂಯಿ ನಾಪತ್ತೆಯಾಗಿರುವ ವಿಚಾರ ತಿಳಿದು ನಾನು ಆಘಾತಕ್ಕೊಳಗಾಗಿದ್ದೇನೆ. ಆಕೆ ಸುರಕ್ಷಿತವಾಗಿದ್ದಾಳೆ ಹಾಗೂ ಆದಷ್ಟು ಬೇಗ ಪತ್ತೆಯಾಗಲಿದ್ದಾಳೆ ಎನ್ನುವ ವಿಶ್ವಾಸವಿದೆ. ಇದು ಸರಿಯಾಗಿ ತನಿಖೆಯಾಗಲೇಬೇಕು ಹಾಗೂ ಇಂತಹ ಘಟನೆಗಳನ್ನು ಮೌನದಿಂದ ಸಹಿಸಲು ಸಾಧ್ಯವಿಲ್ಲ. ಇಂತಹ ಸಂಕಷ್ಟದ ಕ್ಷಣಗಳಲ್ಲಿ ನಾವು ಅವರ ಕುಟುಂಬದ ಜತೆಯಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಜಪಾನಿನ ಟೆನಿಸ್ ಆಟಗಾರ್ತಿ ನವೊಮಿ (Naomi Osaka) ಒಸಾಕ ಕೂಡಾ ಟ್ವೀಟ್ ಮೂಲಕ ಪೆಂಗ್ ಶೂಯಿ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ 20 ಟೆನಿಸ್ ಗ್ರ್ಯಾನ್‌ಸ್ಲಾಂ ಒಡೆಯ ನೊವಾಕ್ ಜೋಕೋವಿಚ್ (Novak Djokovic) ಕೂಡಾ ಪೆಂಗ್ ಶೂಯಿ ಬೆಂಬಲಕ್ಕೆ ನಿಂತಿದ್ದಾರೆ. ಪೆಂಗ್ ಶೂಯಿ ನಾಪತ್ತೆಯಾಗಿರುವ ಸುದ್ದಿ ತಿಳಿದು ನನಗೆ ಶಾಕ್ ಆಯಿತು. ಆಕೆ ಚೆನ್ನಾಗಿದ್ದಾರೆ ಎಂದು ಭಾವಿಸುತ್ತೇನೆ. ಆಕೆಯನ್ನು ನಾವು ಆದಷ್ಟು ಬೇಗ ಹುಡುಕಲಿದ್ದೇವೆ ಎಂದು ಹೇಳಿದ್ದಾರೆ.