* BWF World Tour Finals ಟೂರ್ನಿಯಲ್ಲಿ ಕಿದಂಬಿ ಶ್ರೀಕಾಂತ್ ಹೋರಾಟ ಅಂತ್ಯ* ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ 19​-21, 14​-21 ಶ್ರೀಕಾಂತ್‌ಗೆ ಸೋಲು* ಈಗಾಗಲೇ ಸೆಮೀಸ್‌ ಪ್ರವೇಶಿಸಿರುವ ಸಿಂಧು, ಲಕ್ಷ್ಯ ಸೆನ್

ಬಾಲಿ(ಡಿ.04): ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌ (Kidambi Srikanth) ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸೋಲುವುದರೊಂದಿಗೆ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ (BWF World Tour Finals) ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಈಗಾಗಲೇ ಸೆಮಿಫೈನಲ್‌ ಸ್ಥಾನ ಖಚಿತಪಡಿಸಿಕೊಂಡಿರುವ ಪಿ.ವಿ.ಸಿಂಧು (PV Sindhu) ಕೂಡಾ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸೋಲನುಭವಿಸಿದರು.

ಶುಕ್ರವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಶ್ರೀಕಾಂತ್‌, ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ 19​-21, 14​-21 ಗೇಮ್‌ಗಳಲ್ಲಿ ಸೋಲುವ ಮೂಲಕ ಸೆಮಿಫೈನಲ್‌ ಪ್ರವೇಶಿಸುವ ಅವಕಾಶ ತಪ್ಪಿಸಿಕೊಂಡರು. ಮೊದಲ ಪಂದ್ಯದಲ್ಲಿ ಫ್ರಾನ್ಸ್‌ನ ಟೊಮಾ ಪೊಪೊವ್‌ ವಿರುದ್ಧ ಗೆದ್ದಿದ್ದ ಶ್ರೀಕಾಂತ್‌, 2ನೇ ಪಂದ್ಯದಲ್ಲಿ ಥಾಯ್ಲೆಂಡ್‌ನ ಕುನ್ಲವುಟ್‌ ವಿರುದ್ಧ ಸೋತಿದ್ದರು. 

ಇನ್ನು, ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಸಿಂಧು, ಥಾಯ್ಲೆಂಡ್‌ನ ಚೊಚುವಾಂಗ್‌ ವಿರುದ್ಧ 12-21, 21-19, 14-21 ಅಂತರದಲ್ಲಿ ಸೋಲನುಭವಿಸಿದರು. ಇದರೊಂದಿಗೆ ‘ಎ’ ಗುಂಪಿನಲ್ಲಿ ಚೊಚುವಾಂಗ್‌ ಅಗ್ರಸ್ಥಾನ ಪಡೆದರೆ, ಸಿಂಧು 2 ಗೆಲುವಿನೊಂದಿಗೆ 2ನೇ ಸ್ಥಾನ ಪಡೆದು ಸೆಮೀಸ್‌ ಪ್ರವೇಶಿಸಿದರು. ಮಹಿಳಾ ಡಬಲ್ಸ್‌ನಲ್ಲಿ ಈಗಾಗಲೇ ಸೆಮೀಸ್‌ ರೇಸ್‌ನಿಂದ ಹೊರಬಿದ್ದಿದ್ದ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಜೋಡಿ ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸಿತು.

ಡೇವಿಸ್‌ ಕಪ್‌: ಸೆಮೀಸ್‌ ಪ್ರವೇಶಿಸಿದ ರಷ್ಯಾ

ಮ್ಯಾಡ್ರಿಡ್‌: ಎರಡು ಬಾರಿಯ ಚಾಂಪಿಯನ್‌ ರಷ್ಯಾ ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ (Davis Cup Tennis Tournament) ಸೆಮಿಫೈನಲ್‌ ಪ್ರವೇಶಿಸಿದೆ. ಗುರುವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ರಷ್ಯಾ, ಸ್ವೀಡನ್‌ ವಿರುದ್ಧ 2-0 ಅಂತರದಲ್ಲಿ ಗೆಲುವು ಸಾಧಿಸಿತು. 

BWF Badminton World Tour Finals: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಪಿ.ವಿ.ಸಿಂಧು, ಲಕ್ಷ್ಯ ಸೆನ್‌

ಮೊದಲ ಸಿಂಗಲ್ಸ್‌ ಪಂದ್ಯದಲ್ಲಿ ಆ್ಯಂಡ್ರೆ ರುಬ್ಲೆವ್‌, ಎಲಿಯಾಸ್‌ ವಿರುದ್ಧ 6-2, 5-7, 7-6(3)ಅಂತರದಲ್ಲಿ ಗೆದ್ದರೆ, 2ನೇ ಸಿಂಗಲ್ಸ್‌ ಪಂದ್ಯದಲ್ಲಿ ಡ್ಯಾನಿಲ್‌ ಮೆಡ್ವೆಡೆವ್‌, ಮೈಕೆಲ್‌ ವಿರುದ್ಧ 6-4, 6-4 ಅಂತರದಲ್ಲಿ ಗೆಲುವು ಸಾಧಿಸಿದರು. ಹೀಗಾಗಿ ಡಬಲ್ಸ್‌ ಪಂದ್ಯಕ್ಕೂ ಮುನ್ನವೇ ರಷ್ಯಾ ಸೆಮೀಸ್‌ಗೆ ಲಗ್ಗೆ ಇಟ್ಟಿತು. ಸೆಮೀಸ್‌ನಲ್ಲಿ ರಷ್ಯಾ ತಂಡ ಜರ್ಮನಿ ವಿರುದ್ಧ ಸ್ಪರ್ಧಿಸಲಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಸರ್ಬಿಯಾ-ಕ್ರೊವೇಷಿಯಾ ಎದುರಾಗಲಿವೆ.

ಇಂದು ರಾಜ್ಯ ವಾಲಿಬಾಲ್‌ ತಂಡಕ್ಕೆ ಆಯ್ಕೆ ಪ್ರಕ್ರಿಯೆ

ಬೆಂಗಳೂರು: ಕರ್ನಾಟಕ ರಾಜ್ಯ ಜೂನಿಯರ್‌ ವಿಭಾಗದ ಬಾಲಕ ಹಾಗೂ ಬಾಲಕಿಯರ ವಾಲಿಬಾಲ್‌ ತಂಡಕ್ಕೆ ಆಯ್ಕೆ ಪ್ರಕ್ರಿಯೆ ಡಿಸೆಂಬರ್ 4 ಹಾಗೂ 5ರಂದು ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವ ಕ್ರೀಡಾಪಟುಗಳು ತರಬೇತಿ ಶಿಬಿರ ಹಾಗೂ ಪಶ್ಚಿಮ ಬಂಗಾಳದಲ್ಲಿ ಡಿಸೆಂಬರ್ 25ರಿಂದ ಆರಂಭವಾಗಲಿರುವ ರಾಷ್ಟ್ರೀಯ ಜೂನಿಯರ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಲಿದ್ದಾರೆ ಎಂದು ರಾಜ್ಯ ವಾಲಿಬಾಲ್‌ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಫುಟ್ಬಾಲ್‌: ವೆನೆಝುವೆಲಾ ವಿರುದ್ಧ ಭಾರತಕ್ಕೆ ಸೋಲು

ಮನೌಸ್‌(ಬ್ರೆಜಿಲ್‌): ಮುಂದಿನ ವರ್ಷ ನಡೆಯಲಿರುವ ಎಎಫ್‌ಸಿ ಏಷ್ಯನ್‌ ಕಪ್‌ ಸಿದ್ಧತೆಗಾಗಿ ಬ್ರೆಜಿಲ್‌ ಪ್ರವಾಸ ಕೈಗೊಂಡಿದ್ದ ಭಾರತ ಮಹಿಳಾ ಫುಟ್ಬಾಲ್‌ ತಂಡ, ಗೆಲುವನ್ನು ಕಾಣದೆ ತವರಿಗೆ ವಾಪಸಾಗಲಿದೆ. ವೆನೆಝುವೆಲಾ ವಿರುದ್ಧದ ಪಂದ್ಯದಲ್ಲಿ ಭಾರತ 1-2 ಗೋಲುಗಳಿಂದ ಸೋಲುಂಡಿತು.

ಪಂದ್ಯದ 17ನೇ ನಿಮಿಷದಲ್ಲಿ ಗ್ರೇಸ್‌ ಡ್ಯಾಂಗ್ಮಿ ಆಕರ್ಷಕ ಗೋಲು ಹೊಡೆದು ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಆದರೆ ದ್ವಿತೀಯಾರ್ಧದಲ್ಲಿ ವೆನೆಝುವೆಲಾ 2 ಗೋಲು ಬಾರಿಸಿ ಗೆಲುವು ಸಾಧಿಸಿತು. ಭಾರತ ಮೊದಲ ಪಂದ್ಯದಲ್ಲಿ ಬ್ರೆಜಿಲ್‌ ವಿರುದ್ಧ 1-6, 2ನೇ ಪಂದ್ಯದಲ್ಲಿ ಚಿಲಿ ವಿರುದ್ಧ 1-3 ಗೋಲುಗಳಿಂದ ಸೋತಿತ್ತು. ಏಷ್ಯನ್‌ ಕಪ್‌ ಜ.20ರಿಂದ ಫೆ.6ರ ವರೆಗೆ ನಡೆಯಲಿದೆ.