ಬಾಕ್ಸಿಂಗ್ ವಿಶ್ವಕಪ್: ಅಮಿತ್‌ಗೆ ಒಲಿದ ಚಿನ್ನದ ಪದಕ
ಬಾಕ್ಸಿಂಗ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ತಾರಾ ಬಾಕ್ಸರ್ ಅಮಿತ್ ಪಂಘಾಲ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಡಿ.20): ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ವಿಜೇತ ಅಮಿತ್ ಪಂಘಾಲ್ ಜರ್ಮನಿಯ ಕಲೋನ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ವಿಶ್ವಕಪ್‌ನ ಪುರುಷರ 52 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಜರ್ಮನಿಯ ಅರ್ಗಿಶ್ಟಿ ಟೆರ್ರ್ಟೆಯನ್ ವಾಕ್ ಓವರ್ ನೀಡಿದ ಕಾರಣ, ಅಮಿತ್ ರಿಂಗ್‌ಗೆ ಇಳಿಯದೇ ಚಿನ್ನ ಗೆದ್ದರು.
ಬಾಕ್ಸಿಂಗ್ ವಿಶ್ವಕಪ್: ಫೈನಲ್‌ಗೇರಿದ ಭಾರತದ ಸಿಮ್ರನ್‌ಜಿತ್ ಕೌರ್
ಇದೇ ವೇಳೆ, ಹಿರಿಯ ಬಾಕ್ಸರ್ ಸತೀಶ್ ಕುಮಾರ್ (+91 ಕೆ.ಜಿ) ಗಾಯದ ಸಮಸ್ಯೆಯಿಂದಾಗಿ ಫೈನಲ್ ಪಂದ್ಯದಿಂದ ಹೊರಗುಳಿದ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಸತೀಶ್ ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ನ ದಮಿಲಿ ಡಿನಿ ಮೊನ್ಜ್ಡೆ ವಿರುದ್ಧ ಗೆಲುವು ಸಾಧಿಸಿದ್ದರು. ಇನ್ನು ಮಹಿಳೆಯರ 57 ಕೆ.ಜಿ ವಿಭಾಗದಲ್ಲಿ ಭಾರತದ ಮನೀಶಾ ಹಾಗೂ ಸಾಕ್ಷಿ ಫೈನಲ್ ಪ್ರವೇಶಿಸಿದ್ದು, ಚಿನ್ನದ ಪದಕಕ್ಕಾಗಿ ಸೆಣಸಾಡಲಿದ್ದಾರೆ.
ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಪೂಜಾ ರೈ, ಮೊಹಮದ್ ಹುಸಾಮುದ್ದಿನ್ ಹಾಗೂ ಗೌರವ್ ಸೋಲಂಕಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ವಿಶ್ವಕಪ್‌ನಲ್ಲಿ ಭಾರತ, ಜರ್ಮನಿ ಸೇರಿ ಒಟ್ಟು 10 ರಾಷ್ಟ್ರಗಳ ಬಾಕ್ಸರ್‌ಗಳು ಪಾಲ್ಗೊಂಡಿದ್ದಾರೆ.