ಬೆಂಗಳೂರು ಓಪನ್ ಟೆನಿಸ್: ಪ್ರಿ ಕ್ವಾರ್ಟರ್‌ಗೆ ಪೂಣಚ್ಚ
ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರೆನಿಸಿರುವ ಲುಕಾಸ್ ರೊಸೊಲ್ ವಿರುದ್ಧ ಕರ್ನಾಟಕದ ಯುವ ಟೆನಿಸಿಗ ನಿಕ್ಕಿ ಕಲಿಯಂಡ ಪೂಣಚ್ಚ ಭರ್ಜರಿ ಜಯ ದಾಖಲಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..
ಬೆಂಗಳೂರು(ಫೆ.12): ಕರ್ನಾಟಕದ ಯುವ ಟೆನಿಸಿಗ ನಿಕ್ಕಿ ಕಲಿಯಂಡ ಪೂಣಚ್ಚ, ಇಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೂರ್ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ 3ನೇ ಆವೃತ್ತಿಯ ಪುರುಷರ ಸಿಂಗಲ್ಸ್‌ನಲ್ಲಿ ಪ್ರಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ಬೆಂಗಳೂರು ಓಪನ್ ಟೆನಿಸ್: ಸಾಕೇತ್, ಶಶಿಕುಮಾರ್ ಶುಭಾರಂಭ
2012ರ ವಿಂಬಲ್ಡನ್‌ನಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ ವಿರುದ್ಧ ಗೆದ್ದಿದ್ದ ಚೆಕ್ ಗಣರಾಜ್ಯದ ಲುಕಾಸ್ ರೊಸೊಲ್ ವಿರುದ್ಧ ಪೂಣಚ್ಚ ಜಯಭೇರಿ ಬಾರಿಸಿದರು. ಟೂರ್ನಿಗೆ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿರುವ ಪೂಣಚ್ಚ, 6-4, 2-6, 6-3 ಸೆಟ್‌ಗಳಲ್ಲಿ ಗೆಲುವು ಪಡೆದರು. ಪ್ರಿ ಕ್ವಾರ್ಟರ್‌ನಲ್ಲಿ ಪೂಣಚ್ಚ, ಜಪಾನ್‌ನ ಯುಚಿ ಸುಗಿತಾ ಎದುರು ಸೆಣಸಲಿದ್ದಾರೆ.
ಸುಮಿತ್‌ಗೆ ಸುಲಭ ಜಯ: ಮೊದಲ ಸುತ್ತಲ್ಲಿ ಬೈ ಪಡೆದಿದ್ದ 2017ರ ಚಾಂಪಿಯನ್ ಸುಮಿತ್ ನಗಾಲ್, 2ನೇ ಸುತ್ತಿನ ಪಂದ್ಯದಲ್ಲಿ ಟ್ಯುನಿಶಿಯಾದ ಮಲೆಕ್ ಜಾಜಿರಿ ವಿರುದ್ಧ 6-0, 6-4 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಸಾಕೇತ್ ಮೈನೇನಿ, ರಷ್ಯಾದ ಎವ್ಜೆನಿ ಡಾನ್ಸ್‌ಕೈ ವಿರುದ್ಧ 6-3, 6-3 ಸೆಟ್‌ಗಳಲ್ಲಿ ಜಯಿಸಿದರು. ಉಳಿದಂತೆ ಅಭಿನವ್ ಶಣ್ಮುಗಂ 2ನೇ ಸುತ್ತಿಗೇರಿದರೆ, ಮನೀಶ್ ಸುರೇಶ್ ಕುಮಾರ್, ಅನಿರುದ್‌್ಧ ಚಂದ್ರಶೇಖರ್ ಪರಾಭವಗೊಂಡರು.
ಪುರುಷರ ಡಬಲ್ಸ್‌ನಲ್ಲಿ ಪೂರವ್ ರಾಜಾ-ರಾಮ್‌ಕುಮಾರ್ ಜೋಡಿ, ಭಾರತದವರೇ ಆದ ಪ್ರಜ್ವಲ್ ದೇವ್-ಆದಿಲ್ ಕಲ್ಯಾಣ್‌ಪುರ್ ವಿರುದ್ಧ 6-2, 6-2 ಸೆಟ್‌ಗಳಲ್ಲಿ ಗೆದ್ದು 2ನೇ ಸುತ್ತಿಗೇರಿತು.
ಪೇಸ್ ವಿಶೇಷ ಜೆರ್ಸಿ
ಭಾರತದಲ್ಲಿ ಕೊನೆ ಟೂರ್ನಿಯನ್ನು ಆಡಲಿರುವ ದಿಗ್ಗಜ ಲಿಯಾಂಡರ್ ಪೇಸ್, ಬೆಂಗಳೂರು ಓಪನ್‌ನಲ್ಲಿ ವಿಶೇಷ ಜೆರ್ಸಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಜೆರ್ಸಿಯ ಮುಂದೆ ಪೇಸ್ ಚಿತ್ರವಿದೆ, ಜೆರ್ಸಿ ಹಿಂಭಾಗದಲ್ಲಿ ಅವರು ಗೆದ್ದಿರುವ ಒಲಿಂಪಿಕ್ಸ್ ಪದಕ ಹಾಗೂ ಗ್ರ್ಯಾಂಡ್‌ಸ್ಲಾಂಗಳ ವಿವರಗಳಿವೆ.
1996ರ ಅಟ್ಲಾಂಟಾ ಒಲಿಂಪಿಕ್ಸ್‌ನ ಸಿಂಗಲ್ಸ್‌ನಲ್ಲಿ ಕಂಚು ಗೆದ್ದಿದ್ದ ಪೇಸ್, 18 ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಆಸ್ಪ್ರೇಲಿಯಾದ ಎಬ್ಡೆನ್ ಮ್ಯಾಥ್ಯೂ ಜತೆ ಪೇಸ್ ಕಣಕ್ಕಿಳಿಯಲಿದ್ದು, ಬುಧವಾರ ಮೊದಲ ಸುತ್ತಿನ ಪಂದ್ಯವನ್ನಾಡಲಿದ್ದಾರೆ.