Pro Kabaddi League: ಟೂರ್ನಿಯಲ್ಲಿ 9ನೇ ಗೆಲುವು ದಾಖಲಿಸಿದ ಬೆಂಗಳೂರು ಬುಲ್ಸ್
* ಪ್ರೊ ಕಬಡ್ಡಿ ಲೀಗ್‌ನಲ್ಲಿ 9ನೇ ಗೆಲುವು ದಾಖಲಿಸಿದ ಬೆಂಗಳೂರು ಬುಲ್ಸ್
* ಸತತ ಸೋಲುಗಳ ಬಳಿಕ ಗೆಲುವಿನ ಹಳಿಗೆ ಮರಳಿದ ಪವನ್ ಶೆರಾವತ್ ಪಡೆ
* ಪವನ್ ಕುಮಾರ್ 9 ರೈಡ್ ಅಂಕ ಪಡೆದರೆ, ಅಮನ್ 7 ಟ್ಯಾಕಲ್ ಅಂಕ ಗಳಿಸಿದರು
ಬೆಂಗಳೂರು(ಫೆ.02): ಸತತ ಸೋಲುಗಳಿಂದ ಕಂಗೆಟ್ಟಿದ್ದ ಬೆಂಗಳೂರು ಬುಲ್ಸ್ (Bengaluru Bulls) 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ (Pro Kabaddi League) ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಬುಲ್ಸ್, ಯು.ಪಿ.ಯೋಧಾ (UP Yoddha) ವಿರುದ್ಧ 31-26 ಜಯಗಳಿಸಿತು. 17 ಪಂದ್ಯಗಳಲ್ಲಿ 51 ಅಂಕ ಸಂಪಾದಿಸಿದ ಬುಲ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಉಳಿದಿದೆ. ಹ್ಯಾಟ್ರಿಕ್ ಸೋಲುಂಡ ಯೋಧಾ 6ನೇ ಸ್ಥಾನದಲ್ಲಿದೆ.
ಕಳೆದೆರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಲು ವಿಫಲವಾಗಿದ್ದ ಪವನ್ ಶೆರಾವತ್ (Pawan Sehrawat) ನೇತೃತ್ವದ ಬೆಂಗಳೂರು ಬುಲ್ಸ್ ತಂಡವು, ಮಹತ್ವದ ಘಟ್ಟದಲ್ಲಿ ಗೆಲುವಿನ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಗಿದೆ. ಯು.ಪಿ. ಯೋಧಾ ತಂಡದ ಎದುರಿನ ಗೆಲುವಿನಲ್ಲಿ ಬುಲ್ಸ್ ಡಿಫೆಂಡರ್ಸ್ ಪಾತ್ರ ಮಹತ್ವದ್ದಾಗಿತ್ತು. ಸೌರಭ್ ನಂದಲ್ ಹಾಗೂ ಅಮನ್ ಮಿಂಚಿನ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಆಸರೆಯಾದರು.
ನಾಯಕ ಪವನ್ ಕುಮಾರ್ 9 ರೈಡ್ ಅಂಕ ಪಡೆದರೆ, ಅಮನ್ 7 ಟ್ಯಾಕಲ್ ಅಂಕ ಗಳಿಸಿದರು. ಯುಪಿ ಯೋಧಾ ತಂಡದ ಪರ ನಾಯಕ ನಿತೇಶ್ ಕುಮಾರ್ 6 ಅಂಕ ಗಳಿಸಿದರು ಆದರೆ ಯೋಧಾದ ತಾರಾ ರೈಡರ್ ಪ್ರದೀಪ್ ನರ್ವಾಲ್ (Pardeep Narwal) 12 ರೈಡ್‌ಗಳಲ್ಲಿ ಕೇವಲ 04 ಅಂಕ ಗಳಿಸುವ ಮೂಲಕ ಮತ್ತೊಮ್ಮೆ ವಿಫಲರಾದರು. ಮಂಗಳವಾರದ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಗುಜರಾತ್ 34-25 ಅಂಕಗಳಲ್ಲಿ ಗೆದ್ದಿತು. ಬುಧವಾರ ಯು.ಪಿ ಯೋಧಾ-ಪಾಟ್ನಾ, ಪುಣೆ-ಯು ಮುಂಬಾ ತಂಡಗಳು ಮುಖಾಮುಖಿಯಾಗಲಿವೆ
ಸದ್ಯ ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ 53 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 51 ಅಂಕ ಹೊಂದಿರುವ ಬೆಂಗಳೂರು ಬುಲ್ಸ್ ತಂಡವು ಎರಡನೇ ಸ್ಥಾನದಲ್ಲಿದೆ. ಇನ್ನುಳಿದಂತೆ ಮೂರು ಬಾರಿಯ ಪ್ರೊ ಕಬಡ್ಡಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಮೂರನೇ ಸ್ಥಾನದಲ್ಲಿದ್ದರೆ, ಹರ್ಯಾಣ ಸ್ಟೀಲರ್ಸ್ 4ನೇ ಸ್ಥಾನ ಪಡೆದಿದೆ.
ಹಾಕಿ: ಭಾರತಕ್ಕೆ ಎರಡನೇ ಗೆಲುವು
ಮಸ್ಕಟ್: ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ (Indian Women's Hockey Team) ಸತತ 2ನೇ ಗೆಲುವು ಸಾಧಿಸಿದೆ. ಮಂಗಳವಾರ ಚೀನಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 2-1 ಗೋಲುಗಳಿಂದ ಜಯಭೇರಿ ಬಾರಿಸಿತು. ಸೋಮವಾರ ಚೀನಾ ವಿರುದ್ಧವೇ 7-1ರಿಂದ ಗೆದ್ದಿದ್ದ ಭಾರತ ಸತತ 2ನೇ ಗೆಲುವಿ ನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು.
Union Budget 2022: ಕ್ರೀಡಾ ಕ್ಷೇತ್ರಕ್ಕೆ ಅತಿಹೆಚ್ಚು ಬಜೆಟ್ ಒದಗಿಸಿದ ಕೇಂದ್ರ ಸರ್ಕಾರ..!
ಮಂಗಳವಾರದ ಪಂದ್ಯದಲ್ಲಿ ಗುರ್ಜಿತ್ ಕೌರ್ 2 ಗೋಲು ಬಾರಿಸಿ ತಂಡ ವನ್ನು ಗೆಲ್ಲಿಸಿದರು. ಭಾರತ ತನ್ನ 3ನೇ ಪಂದ್ಯವನ್ನು ಫೆಬ್ರವರಿ 19ರಂದು ನೆದರ್ಲೆಂಡ್‌ಸ್ ತಂಡದ ವಿರುದ್ಧ ಆಡಲಿದೆ.
ಕೇಂದ್ರ ಬಜೆಟ್‌ನಲ್ಲಿ ಕ್ರೀಡೆಗೆ 3,062 ಕೋಟಿ ರು. ಮೀಸಲು
ನವದೆಹಲಿ: ಮಂಗಳವಾರ ಮಂಡಿಸಲಾದ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ (Union Budget 2022-23) 2022-23ರಲ್ಲಿ ಕ್ರೀಡೆಗೆ 3062.60 ಕೋಟಿ ಮೀಸಲಿಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 305 ಕೋಟಿ ರು. ಹೆಚ್ಚಿನ ಅನುದಾನ ಘೋಷಿಸಲಾಗಿದೆ.
ಈ ವರ್ಷ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ನಡೆಯಲಿರುವುದರಿಂದ ಸರ್ಕಾರ ಕ್ರೀಡೆಗಾಗಿ ಹೆಚ್ಚಿನ ಅನುದಾನ ಮೀಸಲಿಟ್ಟಿದೆ. ಕಳೆದ ಬಾರಿ ಸರ್ಕಾರ ಬಜೆಟ್‌ನಲ್ಲಿ 2596 ಕೋಟಿ ರು. ಘೋಷಿಸಿತ್ತು. ಬಳಿಕ ಅದನ್ನು 2757 ಕೋಟಿ ರು.ಗೆ ಹೆಚ್ಚಳ ಮಾಡಿತ್ತು. ಕಳೆದ ವರ್ಷ ಖೇಲೋ ಇಂಡಿಯಾ ಯೋಜನೆಗೆ 657 ಕೋಟಿ ಮೀಸಲಿಟ್ಟದ್ದ ಸರ್ಕಾರ, ಈ ಬಾರಿ 974 ಕೋಟಿ ರು. ಘೋಷಿಸಿದೆ.