ಚೆನ್ನೈ(ಏ.13): ಭಾರತದ ಮಾಜಿ ಬ್ಯಾಡ್ಮಿಂಟನ್‌ ತಾರೆ ಜ್ವಾಲಾ ಗುಟ್ಟಾ ಹಾಗೂ ಖ್ಯಾತ ನಟ ವಿಷ್ಣು ವಿಶಾಲ್‌ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದು, ಏಪ್ರಿಲ್‌ 22ರಂದು ವಿವಾಹವಾಗಲಿದ್ದಾರೆ.

ನಾವು ಮದುವೆಯಾಗಲು ನಿರ್ಧರಿಸಿದ್ದೇವೆ. ಕಳೆದ ಕೆಲವು ವರ್ಷಗಳಿಂದ ನೀವೆಲ್ಲರೂ ನಮ್ಮ ಪ್ರೀತಿಯನ್ನು ಹರಸಿ-ಹಾರೈಸಿದ್ದಕ್ಕೆ ಧನ್ಯವಾದಗಳು. ಇದೇ ರೀತಿ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯಿಂದ ಒಟ್ಟಾಗಿ ನಮ್ಮ ಪಯಣ ಆರಂಭಿಸಲು ನಿಮ್ಮೆಲ್ಲರ ಆಶಿರ್ವಾದಗಳನ್ನು ಬೇಡುತ್ತಿದ್ದೇವೆ.  ನಮ್ಮ ಕುಟುಂಬಸ್ಥರ ಆಶಿರ್ವಾದದೊಂದಿಗೆ ವಿವಾಹವಾಗುತ್ತಿದ್ದೇವೆ ಎಂದು ಇಡೀ ಜಗತ್ತಿಗೆ ತಿಳಿಸಲು ಸಂತೋಷವಾಗುತ್ತಿದೆ. ಆತ್ಮೀಯರ ಸಮ್ಮುಖದಲ್ಲಿ ಖಾಸಗಿಯಾಗಿ ನಡೆಯುವ ಕಾರ್ಯಕ್ರಮದಲ್ಲಿ ನಾವು ಮದುವೆಯಾಗಲಿದ್ದೇವೆ ಎಂದು ಜ್ವಾಲಾ ಗುಟ್ಟಾ ಟ್ವೀಟ್‌ ಮೂಲಕ ತಮ್ಮ ವಿವಾಹದ ದಿನಾಂಕವನ್ನು ಖಚಿತಪಡಿಸಿದ್ದಾರೆ.

ತಮಿಳು ನಟನ ಜೊತೆ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ನಿಶ್ಚಿತಾರ್ಥ

2020ರ ಸೆಪ್ಟೆಂಬರ್‌ನಲ್ಲಿ ಜ್ವಾಲಾ 37ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಷ್ಣು ವಿಶಾಲ್‌ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಬಳಿಕ ವಿಶಾಲ್‌ ಪ್ರೇಮ ನಿವೇದನೆಗೆ ಮನಸೋತ ಜ್ವಾಲಾ ಗುಟ್ಟಾ ಅಂದೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದಾದ ಬಳಿಕ ಈ ತಾರಾ ಜೋಡಿ ತಮ್ಮ ನಿಶ್ಚಿತಾರ್ಥ ವಿಚಾರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜಗತ್ತಿನ ಮುಂದೆ ಅನಾವರಣ ಮಾಡಿದ್ದರು.