* ಆಸ್ಟ್ರೇಲಿಯನ್ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂ ಟೂರ್ನಿ ಮೇಲೆ ಕೋವಿಡ್‌ ವಕ್ರದೃಷ್ಟಿ* ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಕೂಡಾ ಟೂರ್ನಿಯಲ್ಲಿ ಕೋವಿಡ್‌ ಪರೀಕ್ಷೆ ಕಡ್ಡಾಯವಲ್ಲ ಎಂದಿದ್ದಾರೆ.* ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಘಾತಕಾರಿ ಫಲಿತಾಂಶ 

ಮೆಲ್ಬರ್ನ್(ಜ.21)‌: ಅಸ್ಪ್ರೇಲಿಯನ್‌ ಓಪನ್‌ ಗ್ರಾನ್‌ ಸ್ಲಾಂ ಟೆನಿಸ್‌ (Australian Open Grand Slam) ಟೂರ್ನಿ ಮೇಲೂ ಕೋವಿಡ್‌ (COVID 19) ಕರಿನೆರಳು ಆವರಿಸಿದ್ದು, ಫ್ರಾನ್ಸ್‌ನ ಸ್ಪರ್ಧಿಯೊಬ್ಬರು ಸೋಂಕಿಗೆ ತುತ್ತಾಗಿದ್ದಾರೆ. ಇದರ ಬೆನ್ನಲ್ಲೇ ಟೆನಿಸಿಗರಿಂದ ಆಯೋಜಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಕೋವಿಡ್‌ ಪರೀಕ್ಷೆ ಕಡ್ಡಾಯಗೊಳಿಸದ್ದಕ್ಕೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಮೊದಲು ಕೋವಿಡ್‌ ಲಕ್ಷಣಗಳು ಕಂಡುಬಂದರೆ ಮಾತ್ರ ಪರೀಕ್ಷೆ ನಡೆಸುವುದಾಗಿ ತಿಳಿಸಿದ್ದ ಟೂರ್ನಿಯ ಆಯೋಜಕರು, ಇದೀಗ ಆಟಗಾರರಿಂದಲೇ ಆಕ್ಷೇಪಗಳು ಕೇಳಿಬಂದಿದ್ದರಿಂದ ಪರೀಕ್ಷೆಯನ್ನು ಕಡ್ಡಾಯಗೊಳಿಸುವ ಒತ್ತಡಕ್ಕೆ ಸಿಲುಕಿದ್ದಾರೆ.

ಗುರುವಾರ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಲ್ಲಿ ಸೋತಿದ್ದ ಫ್ರಾನ್ಸ್‌ನ ಉಗೊ ಹಂಬೆರ್ಟ್‌, ಬುಧವಾರ ತಮಗೆ ಸೋಂಕು ಕಾಣಿಸಿಕೊಂಡಿರುವುದಾಗಿ ಹೇಳಿದ್ದಾರೆ. ಉಗೊ ಟೂರ್ನಿಯಿಂದ ಹೊರನಡೆದಿದ್ದರೂ ಸ್ಪರ್ಧೆ ವೇಳೆ ಹಲವರ ಸಂಪರ್ಕಕ್ಕೆ ಬಂದಿದ್ದು ಇತರೆ ಆಟಗಾರರು, ಆಯೋಜಕರ ಆತಂಕಕ್ಕೆ ಕಾರಣವಾಗಿದೆ. ಇನ್ನು, ಉಗೊಗೆ ಸೋಂಕು ಖಚಿತವಾದ ಬೆನ್ನಲ್ಲೇ ವಿಶ್ವ ನಂ.3, ಜರ್ಮನಿಯ ಆಲೆಕ್ಸಾಂಡರ್‌ ಝ್ವೆರೆವ್‌ ಟೂರ್ನಿ ಆಯೋಜಕರ ವಿರುದ್ಧ ಗಂಭೀರ ಆರೋಪ ಹೊರಿಸಿದ್ದು, ಇನ್ನೂ ಹಲವು ಮಂದಿಗೆ ಸೋಂಕು ತಗುಲಿರಬಹುದು. ಆದರೆ ಇಲ್ಲಿ ಯಾವುದೇ ಪರೀಕ್ಷೆ ನಡೆಸುತ್ತಿಲ್ಲ’ ಎಂದಿದ್ದಾರೆ. ಇಲ್ಲಿ ಯಾವುದೇ ಕೋವಿಡ್‌ ನಿಯಮಗಳಿಲ್ಲ. ಆಹಾರಕ್ಕಾಗಿ ಹೊರ ಹೋಗಲು, ಏನು ಬೇಕಾದರೂ ಮಾಡಲು ನಮಗೆ ಅವಕಾಶಗಳಿವೆ. ನಮ್ಮನ್ನು ಪರೀಕ್ಷೆ ನಡೆಸುತ್ತಿಲ್ಲ. ಪರೀಕ್ಷಿಸಿದರೆ ಇನ್ನೂ ಹಲವರಲ್ಲಿ ಸೋಂಕು ಪತ್ತೆಯಾಗಬಹುದು’ ಎಂದಿದ್ದಾರೆ.

ಇನ್ನು, ಗುರುವಾರ 2ನೇ ಸುತ್ತಲ್ಲಿ ಸೋತು ಹೊರ ಬಿದ್ದ ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಕೂಡಾ ಟೂರ್ನಿಯಲ್ಲಿ ಕೋವಿಡ್‌ ಪರೀಕ್ಷೆ ಕಡ್ಡಾಯವಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಟೂರ್ನಿ ನಡೆಯುವ ಸ್ಥಳಕ್ಕೆ ಆಗಮಿಸಿದಾಗ ಕೋವಿಡ್‌ ಪರೀಕ್ಷೆಯ ವರದಿಯನ್ನೂ ತೋರಿಸಬೇಕಾಗಿಲ್ಲ ಎಂದಿದ್ದಾರೆ.

Australian Open: ಮೂರನೇ ಸುತ್ತಿಗೆ ರಾಫೆಲ್‌ ನಡಾಲ್ ಲಗ್ಗೆ

ಆಸ್ಟ್ರೇಲಿಯನ್ ಓಪನ್ ಟೆನಿಸ್‌ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಲಸಿಕೆ ಪಡೆಯದೇ ಬಂದಿಳಿದಿದ್ದ ವಿಶ್ವದ ನಂ.1 ಶ್ರೇಯಾಂಕಿತ ಟೆನಿಸ್ ಆಟಗಾರ ನೊವಾಕ್ ಜೋಕೋವಿಚ್ ಅವರಿಗೆ ಆಸ್ಟ್ರೇಲಿಯಾ ಸರ್ಕಾರ ಅವಕಾಶ ನೀಡಿರಲಿಲ್ಲ. ಇದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಇದೀಗ ಆಸ್ಟ್ರೇಲಿಯನ್ ಓಪನ್‌ನಲ್ಲಿನ ಅವ್ಯವಸ್ಥೆಯ ಬಗ್ಗೆ ಆಟಗಾರರೇ ತುಟಿಬಿಚ್ಚಲಾರಂಭಿಸಿದ್ದಾರೆ. 

ಆಸ್ಟ್ರೇಲಿಯನ್‌ ಓಪನ್‌: ರಾಡುಕಾನು, ಮರ್ರೆ ಹೊರಕ್ಕೆ

ಮೆಲ್ಬರ್ನ್‌: ಯುಎಸ್‌ ಓಪನ್‌ (US Open) ಚಾಂಪಿಯನ್‌ ಎಮ್ಮಾ ರಾಡುಕಾನು ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಆಘಾತಕಾರಿ ಸೋಲುಂಡು ನಿರ್ಗಮಿಸಿದ್ದಾರೆ. ಗುರುವಾರ ಮಹಿಳಾ ಸಿಂಗಲ್ಸ್‌ 2ನೇ ಸುತ್ತಲ್ಲಿ ಅವರು ಡಂಕಾ ಕೊವಿನಿಕ್‌ ವಿರುದ್ಧ 4-6, 6-4, 3-6 ಸೆಟ್‌ಗಳಲ್ಲಿ ಸೋಲುಂಡರು. ಸ್ಪೇನ್‌ನ ಗಾರ್ಬಿನ್‌ ಮುಗುರುಜಾ, ಫ್ರಾನ್ಸ್‌ನ ಕೊರ್ನೆಟ್‌ ವಿರುದ್ಧ ಸೋಲುಂಡರೆ, ಪುರುಷರ ಸಿಂಗಲ್ಸ್‌ನಲ್ಲಿ ಮಾಜಿ ನಂ.1 ಆ್ಯಂಡಿ ಮರ್ರೆ, ಜಪಾನಿನ ಡ್ಯಾನಿಯೆಲ್‌ ವಿರುದ್ಧ ಸೋತು ಹೊರನಡೆದರು. 

ವಿಶ್ವ ನ.2 ಡ್ಯಾನಿಲ್‌ ಮೆಡ್ವೆಡೆವ್‌ ಆಸ್ಪ್ರೇಲಿಯಾದ ಕಿರ್ಗಿಯೋಸ್‌ ವಿರುದ್ಧ ಗೆದ್ದು 3ನೇ ಸುತ್ತು ತಲುಪಿದರು. ಇದೇ ವೇಳೆ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ(Sania Mirza), ಅಮೆರಿಕದ ರಾಜೀವ್‌ ರಾಮ್‌ ಜೋಡಿ 2ನೇ ಸುತ್ತಿಗೇರಿದೆ.

ಪ್ರೊ ವಾಲಿಬಾಲ್‌: ಬೆಂಗಳೂರು ಟಾರ್ಪೆಡೋಸ್‌ ತಂಡಕ್ಕೆ ವಿನಾಯಕ್‌ ಆಯ್ಕೆ

ಬೆಂಗಳೂರು: ಮುಂಬರುವ ಪ್ರೊ ವಾಲಿಬಾಲ್‌ ಲೀಗ್‌ನ ಬೆಂಗಳೂರು ಟಾರ್ಪೆಡೋಸ್‌ ತಂಡಕ್ಕೆ ಬೆಳಗಾವಿಯ ವಿನಾಯಕ್‌ ರೋಖಡೆ ಅವರು ಆಯ್ಕೆಯಾಗಿದ್ದಾರೆ. 2013ರಲ್ಲಿ ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡಿದ್ದ ವಿನಾಯಕ್‌, 2015ರಲ್ಲಿ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಹಿರಿಯರ ತಂಡವನ್ನು ಪ್ರತಿನಿಧಿಸಿದ್ದರು. ಪ್ರೊ ವಾಲಿಬಾಲ್‌ ಲೀಗ್‌ ಕೊಚ್ಚಿಯಲ್ಲಿ ಫೆಬ್ರವರಿ 5ರಿಂದ ಆರಂಭವಾಗಲಿದೆ.