*ಆಸ್ಟ್ರೇಲಿಯನ್‌ ಓಪನ್‌ ಟೆನಿಸ್ ಟೂರ್ನಿಗೂ ಮುನ್ನ ಜೋಕೋವಿಚ್‌ಗೆ ಮತ್ತೊಮ್ಮೆ ಶಾಕ್‌* ಎರಡನೇ ಬಾರಿಗೆ ನೊವಾಕ್ ಜೋಕೋವಿಚ್ ಅವರ ವೀಸಾ ರದ್ದುಪಡಿಸಿದ ಆಸ್ಟ್ರೇಲಿಯಾ ಸರ್ಕಾರ* ಜನವರಿ 17ರಿಂದ ಆರಂಭವಾಗಲಿದೆ ಆಸ್ಟ್ರೇಲಿನ್‌ ಓಪನ್ ಟೆನಿಸ್ ಟೂರ್ನಿ 

ಮೆಲ್ಬರ್ನ್(ಜ.14)‌: ಆಸ್ಟ್ರೇಲಿಯನ್‌ ಓಪನ್‌ (Australian Open Tennis Grandslam) ಟೆನಿಸ್ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿನ ಮಹತ್ವದ ಬೆಳವಣಿಗೆಯೊಂದರಲ್ಲಿ ಹಾಲಿ ಚಾಂಪಿಯನ್ ನೊವಾಕ್ ಜೋಕೋವಿಚ್ (Novak Djokovic) ಅವರ ವೀಸಾವನ್ನು ಆಸ್ಟ್ರೇಲಿಯಾ ಸರ್ಕಾರವು (Australian Govt) ಎರಡನೇ ಬಾರಿಗೆ ರದ್ದು ಪಡಿಸಿದೆ. ವೈದ್ಯಕೀಯ ಅನುಮತಿ ಪಡೆದು ಆಸ್ಟ್ರೇಲಿಯಾ ಪ್ರವೇಶಿಸಿದ್ದ ನೊವಾಕ್‌ ಜೋಕೋವಿಚ್‌ಗೆ ಇದೀಗ ಎರಡನೇ ಬಾರಿಗೆ ಹಿನ್ನೆಡೆಯಾಗಿದೆ. ಇದೀಗ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ನೊವಾಕ್ ಜೋಕೋವಿಚ್ ಪಾಲ್ಗೊಳ್ಳುವಿಕೆಯ ಮೇಲೆ ಅನುಮಾನದ ತೂಗುಗತ್ತಿ ನೇತಾಡಲಾರಂಭಿಸಿದೆ.

ಆಸ್ಟ್ರೇಲಿಯಾದ ಇಮಿಗ್ರೇಷನ್‌(ವಲಸೆ) ಸಚಿವ ಅಲೆಕ್ಸ್‌ ಹ್ವಾಕೆ ಮತ್ತೊಮ್ಮೆ ಟೆನಿಸ್ ತಾರೆ ಜೋಕೋವಿಚ್ ಅವರ ವೀಸಾವನ್ನು ಶುಕ್ರವಾರ(ಜ.14) ರದ್ದು ಪಡಿಸಿದ್ದಾರೆ. ಸಾರ್ವಜನಿಕರ ಆರೋಗ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ತೆಗೆದುಕೊಂಡಿರುವುದಾಗಿ ಅಲೆಕ್ಸ್‌ ಹ್ವಾಕೆ ತಿಳಿಸಿದ್ದಾರೆ. ಈ ಮೊದಲು ಸಿಡ್ನಿ ಮಾರ್ನಿಂಗ್ ಪತ್ರಿಕೆಯು ವರದಿ ಮಾಡಿದಂತೆ, ಒಂದು ವೇಳೆ ಆಸ್ಟ್ರೇಲಿಯಾ ಸರ್ಕಾರವು ಜೋಕೋವಿಚ್ ಅವರ ವೀಸಾವನ್ನು ರದ್ದುಪಡಿಸಿದರೆ, ತಕ್ಷಣವೇ ಜೋಕೋ ಪರ ಕಾನೂನು ತಜ್ಞರು ಕೋರ್ಟ್‌ ಮೆಟ್ಟಿಲೇರುವುದಕ್ಕೆ ಸಿದ್ದತೆ ನಡೆಸಿದ್ದಾರೆ ಎಂದು ವರದಿಯಾಗಿದೆ. 

ಜನವರಿ 17ರಿಂದ ಆರಂಭವಾಗಲಿರುವ ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯ ಡ್ರಾ ಬಿಡುಗಡೆಯಾಗಿದ್ದು, ವಿವಾದ ಕೊನೆಗೊಳ್ಳದ ಹೊರತಾಗಿಯೂ ವಿಶ್ವ ನಂ.1 ನೋವಾಕ್‌ ಜೋಕೋವಿಚ್‌ ಅವರ ಪಂದ್ಯದ ವೇಳಾಪಟ್ಟಿ ಪ್ರಕಟಗೊಂಡಿದೆ. 9 ಬಾರಿಯ ಚಾಂಪಿಯನ್‌ ಜೋಕೋವಿಚ್‌ ಮೊದಲ ಸುತ್ತಿನಲ್ಲಿ ಸರ್ಬಿಯಾದವರೇ ಆದ ಮಿಯೊಮಿರ್‌ ಕೆಮನೊವಿಚ್‌ ವಿರುದ್ಧ ಸೆಣಸಾಡಲಿದ್ದಾರೆ.

Novak Djokovic: ಜೋಕೋ ವೀಸಾ ರದ್ದು ಮಾಡಿದ ಆಸ್ಟ್ರೇಲಿಯಾ

ಜೋಕೋವಿಚ್‌ರ ವೀಸಾ ರದ್ದು ವಿವಾದ ಇನ್ನೂ ಚಾಲ್ತಿಯಲ್ಲಿದ್ದು, ಆಸ್ಪ್ರೇಲಿಯಾ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸೋಮವಾರ ಕೋರ್ಟ್‌ ಜೋಕೋವಿಚ್‌ ಪರ ತೀರ್ಪು ನೀಡಿದ್ದರೂ ಅವರ ವೀಸಾ ರದ್ದುಗೊಳಿಸಲು ಸರ್ಕಾರ ಇನ್ನೂ ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿತ್ತು. ಅದರಂತೆ ಇದೀಗ ಆಸ್ಟ್ರೇಲಿಯಾ ಸರ್ಕಾರ ಹಾಲಿ ಚಾಂಪಿಯನ್ ಜೋಕೋಗೆ ಶಾಕ್ ನೀಡಿದೆ. ನೊವಾಕ್ ಜೋಕೋವಿಚ್ ಜನವರಿ 06ರಂದು ಮೆಲ್ಬರ್ನ್‌ಗೆ ಬಂದಿಳಿಯುತ್ತಿದ್ದಂತೆಯೇ ಅವರ ವೀಸಾವನ್ನು ಆಸ್ಟ್ರೇಲಿಯಾ ಸರ್ಕಾರವು ರದ್ದುಪಡಿಸಿತ್ತು.

Scroll to load tweet…

ಇಮಿಗ್ರೇಷನ್‌(ವಲಸೆ) ಸಚಿವರಿಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರವಿದ್ದು ನೊವಾಕ್ ಜೋಕೋವಿಚ್‌ ವಿರುದ್ಧ ಕ್ರಮಕೈಗೊಳ್ಳುವ ಅವಕಾಶವಿತ್ತು. ನೋವಾಕ್‌ರ ವೀಸಾ ರದ್ದುಗೊಳಿಸಿ ಗಡಿಪಾರು ಮಾಡಬೇಕೇ ಅಥವಾ ಟೂರ್ನಿಯಲ್ಲಿ ಆಡಲು ಅನುಮತಿ ನೀಡಬೇಕೇ ಎಂದು ಸರ್ಕಾರ ಇನ್ನಷ್ಟೇ ನಿರ್ಧರಿಸಬೇಕಿದೆ. 

Novak Djokovic: ಸೋಂಕಿತನಾದ ಬಳಿಕ ಐಸೋಲೇಟ್‌ ಆಗದೆ ತಪ್ಪು ಮಾಡಿದೆ ಎಂದ ಟೆನಿಸ್ ದಿಗ್ಗಜ

ಟೂರ್ನಿಯಲ್ಲಿ ಪಾಲ್ಗೊಳ್ಳಲು ಲಸಿಕೆ ಪ್ರಮಾಣ ಪತ್ರ ಕಡ್ಡಾಯಗೊಳಿಸಿದ್ದರೂ 20 ಗ್ರ್ಯಾನ್‌ ಸ್ಲಾಂ ವಿಜೇತ ಜೋಕೋವಿಚ್‌ ಲಸಿಕೆ ಪಡೆದುಕೊಳ್ಳಲು ನಿರಾಕರಿಸಿದ್ದರು. ಬಳಿಕ ವೈದ್ಯಕೀಯ ಅನುಮತಿ ಪಡೆದು ಕಳೆದ ವಾರ ಟೂರ್ನಿಯಲ್ಲಿ ಪಾಲ್ಗೊಳ್ಳಲು ಮೆಲ್ಬರ್ನ್‌ಗೆ ಆಗಮಿಸಿದ್ದರು. ಆದರೆ ಮೆಲ್ಬರ್ನ್‌ ವಿಮಾನ ನಿಲ್ದಾಣದಲ್ಲಿ ಜೋಕೋವಿಚ್‌ರನ್ನು ತಡೆದ ಅಧಿಕಾರಿಗಳು, ಅವರು ಸಲ್ಲಿಸಿರುವ ದಾಖಲೆಗಳು ಸರಿಯಿಲ್ಲ ಎನ್ನುವ ಕಾರಣ ನೀಡಿ, ವೀಸಾ ರದ್ದುಗೊಳಿಸಿ ವಿದೇಶಿ ಪ್ರಜೆಗಳ ಆಶ್ರಯ ತಾಣಕ್ಕೆ ಕಳುಹಿಸಿದ್ದರು.

Scroll to load tweet…

21ನೇ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ಜೋಕೋವಿಚ್‌: ವಿಶ್ವದ ನಂ.1 ಟೆನಿಸಿಗ ನೊವಾಕ್ ಜೋಕೋವಿಚ್‌ ಇದುವರೆಗೂ 20 ಟೆನಿಸ್ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಜಯಿಸುವ ಮೂಲಕ ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅದ್ಭುತ ದಾಖಲೆ ಹೊಂದಿರುವ ಜೋಕೋವಿಚ್‌ಗೆ ಈ ಬಾರಿ ಮತ್ತೊಮ್ಮೆ ಪ್ರಶಸ್ತಿಗೆ ಮುತ್ತಿಕ್ಕುವ ಅವಕಾಶವಿತ್ತು. ಆದರೆ ಈ ವಿವಾದಗಳಿಂದ ಹೊರಬಂದು ಟೂರ್ನಿಯಲ್ಲಿ ಜೋಕೋ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.