Asianet Suvarna News Asianet Suvarna News

Rafael Nadal: ದಾಖಲೆಯ 21 ಗ್ರ್ಯಾನ್‌ ಸ್ಲಾಂಗೆ ಅಧಿಪತಿ ರಾಫೆಲ್ ನಡಾಲ್‌

* ದಾಖಲೆಯ 21ನೇ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿದ ರಾಫೆಲ್ ನಡಾಲ್

* ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ವಿರುದ್ದ ಭರ್ಜರಿ ಜಯ

* ಅತಿಹೆಚ್ಚು ಗ್ರ್ಯಾನ್ ಸ್ಲಾಂ ಜಯಿಸಿದ ದಾಖಲೆ ನಡಾಲ್ ಪಾಲು

Australian Open 2022 Rafael Nadal Beats Daniil Medvedev To Win Record 21st Major kvn
Author
Bengaluru, First Published Jan 30, 2022, 7:57 PM IST

ಬೆಂಗಳೂರು(ಜ.30): ಸ್ಪೇನ್ ಟೆನಿಸ್ ದಂತಕಥೆ ರಾಫೆಲ್ ನಡಾಲ್‌ (Rafael Nadal) ಆಸ್ಟ್ರೇಲಿಯನ್ ಓಪನ್ (Australian Open) ಟೆನಿಸ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್ (Daniil Medvedev) ವಿರುದ್ದ  2-6, 6-7(5-7), 6-4, 6-4, 7-5 ಸೆಟ್‌ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಎರಡನೇ ಬಾರಿಗೆ ಅಸ್ಟ್ರೇಲಿಯನ್ ಓಪನ್ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಇದರ ಜತೆಗೆ ಐತಿಹಾಸಿಕ 21ನೇ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸುವಲ್ಲಿ ಕೂಡಾ ನಡಾಲ್‌ ಯಶಸ್ವಿಯಾಗಿದ್ದಾರೆ. ಆರಂಭಿಕ ಹಿನ್ನೆಡೆಯನ್ನು ಮೆಟ್ಟಿನಿಂತ ನಡಾಲ್‌ ಕೊನೆಗೂ ದಾಖಲೆಯ ಗ್ರ್ಯಾನ್‌ ಸ್ಲಾಂ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬರೋಬ್ಬರಿ 5 ಗಂಟೆ 24 ನಿಮಿಷಗಳ ಕಾಲ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ರಣಕಲಿಗಳಂತೆ ಕಾದಾಡಿದ ಉಭಯ ಆಟಗಾರರು ಟೆನಿಸ್ ಪ್ರಿಯರಿಗೆ ಅಕ್ಷರಶಃ ಮನರಂಜನೆಯನ್ನು ನೀಡಿದರು. 35 ವರ್ಷದ ನಡಾಲ್ ಚಿರಯುವಕನ ರೀತಿಯಲ್ಲಿ ಅಮೋಘ ಆಟ ಪ್ರದರ್ಶಿಸುವ ಮೂಲಕ ದಾಖಲೆಯ 21ನೇ ಗ್ರ್ಯಾನ್‌ ಸ್ಲಾಂ ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಟೆನಿಸ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಆರಂಭದಿಂದಲೇ ಡ್ಯಾನಿಲ್‌ ಮೆಡ್ವೆಡೆವ್‌ ಹಾಗೂ ರಾಫೆಲ್‌ ನಡಾಲ್‌ ನಡುವೆ ವ್ಯಾಪಕ ಪೈಪೋಟಿ ಕಂಡು ಬಂದಿತು. ಮೊದಲೆರಡು ಸೆಟ್‌ಗಳನ್ನು ಗೆಲ್ಲುವ ಮೂಲಕ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌, 20 ಗ್ರ್ಯಾನ್‌ ಸ್ಲಾಂ ಒಡೆಯರಾಗಿದ್ದ ರಾಫೆಲ್ ನಡಾಲ್‌ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಮೊದಲ ಸೆಟ್‌ ಅನ್ನು ಡ್ಯಾನಿಲ್‌ ಮೆಡ್ವೆಡೆವ್‌ 6-2 ಅಂತರದಲ್ಲಿ ಕೈವಶ ಮಾಡಿಕೊಂಡರು. ಇನ್ನು ಎರಡನೆ ಸೆಟ್‌ನಲ್ಲಿ ಉಭಯ ಆಟಗಾರರ ನಡುವೆ ಸಮಬಲದ ಹೋರಾಟ ಕಂಡುಬಂದಿತು. ಎರಡನೇ ಸೆಟ್‌ನಲ್ಲಿ 6-6 ಅಂಕಗಳ ಸಮಬಲವಾದಾಗ ಟೈ ಬ್ರೇಕರ್‌ನಲ್ಲಿ ಚುರುಕಿನ ಆಟ ಪ್ರದರ್ಶಿಸಿದ ವಿಶ್ವದ 2ನೇ ಶ್ರೇಯಾಂಕಿತ ಡ್ಯಾನಿಲ್‌ ಮೆಡ್ವೆಡೆವ್‌ 7-6 ಅಂತರದಲ್ಲಿ ಎರಡನೇ ಸೆಟ್‌ ಕೂಡಾ ಕೈವಶ ಮಾಡಿಕೊಂಡರು.

ಕಮ್‌ಬ್ಯಾಕ್ ಮಾಡಿದ ನಡಾಲ್‌: ಮೊದಲೆರಡು ಸೆಟ್‌ಗಳು ಡ್ಯಾನಿಲ್‌ ಮೆಡ್ವೆಡೆವ್‌ ಪಾಲಾದ ಬಳಿಕ ಎಚ್ಚೆತ್ತುಕೊಂಡ ರಾಫೆಲ್ ನಡಾಲ್‌, ಮೂರನೇ ಹಾಗೂ ನಾಲ್ಕನೇ ಸೆಟ್‌ಗಳನ್ನು 6-4 ಅಂತರದಲ್ಲಿ ಜಯಿಸುವ ಮೂಲಕ ಭರ್ಜರಿಯಾಗಿಯೇ ಕಮ್‌ಬ್ಯಾಕ್‌ ಮಾಡಿದರು. ತಮ್ಮ ದಶಕಗಳ ಟೆನಿಸ್‌ ಅನುಭವವನ್ನು ಆಸ್ಟ್ರೇಲಿಯನ್ ಓಪನ್‌ ಫೈನಲ್‌ನಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಸ್ಪೇನ್‌ನ ಎಡಗೈ ಟೆನಿಸಿಗ ನಡಾಲ್ ಯಶಸ್ವಿಯಾದರು.

Australian Open: ಐತಿಹಾಸಿಕ 21ನೇ ಗ್ರ್ಯಾನ್‌ ಸ್ಲಾಂ ಗೆಲುವಿನ ಉತ್ಸಾಹದಲ್ಲಿ ರಾಫೆಲ್ ನಡಾಲ್‌ 

ಇನ್ನು ಐದನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಕೂಡಾ ಉಭಯ ಟೆನಿಸ್ ಆಟಗಾರರಿಂದ ಜಿದ್ದಾಜಿದ್ದಿನ ಪೈಪೋಟಿ ಮೂಡಿ ಬಂದಿತು. ವಿಶ್ವದ ಎರಡನೇ ಶ್ರೇಯಾಂಕಿತ ಡ್ಯಾನಿಲ್‌ ಮೆಡ್ವೆಡೆವ್‌ ಸಾಕಷ್ಟು ಪೈಪೋಟಿ ನೀಡಿದರು. ಅಂತಿಮವಾಗಿ ನಡಾಲ್ 7-5 ಅಂತರದಲ್ಲಿ ನಿರ್ಣಾಯಕ ಸೆಟ್ ಗೆದ್ದು 21ನೇ ಟೆನಿಸ್ ಗ್ರ್ಯಾನ್‌ಗೆ ನಡಾಲ್ ಒಡೆಯರಾದರು.

ಫೆಡರರ್‌-ಜೋಕೋವಿಚ್ ದಾಖಲೆ ಮುರಿದ ನಡಾಲ್‌: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಗೂ ಮುನ್ನ ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್(Roger Federer), ನೊವಾಕ್ ಜೋಕೋವಿಚ್ (Novak Djokovic) ಹಾಗೂ ರಾಫೆಲ್‌ ನಡಾಲ್ ತಲಾ 20 ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳನ್ನು ಜಯಿಸುವ ಮೂಲಕ ಜಂಟಿ ಅಗ್ರಸ್ಥಾನದಲ್ಲಿದ್ದರು. ಇದೀಗ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ರಾಫೆಲ್ ನಡಾಲ್‌, ಪುರುಷರ ಸಿಂಗಲ್ಸ್‌ನಲ್ಲಿ ಅತಿಹೆಚ್ಚು ಗ್ರ್ಯಾನ್ ಸ್ಲಾಂ(21) ಜಯಿಸಿದ ಆಟಗಾರ ಎನ್ನುವ ದಾಖಲೆ ನಿರ್ಮಿಸಿದ್ದಾರೆ

Follow Us:
Download App:
  • android
  • ios