ಮೆಲ್ಬರ್ನ್(ಮೇ.07)‌: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ 2021ರ ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌ ಗ್ರ್ಯಾಂಡ್‌ಸ್ಲಾಂ ಟೂರ್ನಿ ರದ್ದುಗೊಳಿಸಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು ಆಸ್ಪ್ರೇಲಿಯಾ ಟೆನಿಸ್‌ ಸಂಸ್ಥೆ ಮುಖ್ಯಸ್ಥ ಕ್ರೇಗ್‌ ಟಿಲೆ ಹೇಳಿದ್ದಾರೆ. 

ಈ ವರ್ಷದ ಸೆಪ್ಟೆಂಬರ್‌ ವರೆಗೂ ವಿದೇಶಿ ಪ್ರವಾಸಿಗಳು ಆಸ್ಪ್ರೇಲಿಯಾಗೆ ಪ್ರವೇಶಿಸುವುದನ್ನು ಅಲ್ಲಿನ ಸರ್ಕಾರ ನಿಷೇಧಿಸಿದೆ. ನಿಷೇಧ ಅವಧಿ ಮತ್ತಷ್ಟು ದಿನ ಮುಂದುವರಿಯುವ ಸಾಧ್ಯತೆ ಇದೆ. ಜೊತೆಗೆ ಹಲವು ದೇಶಗಳ ಆಟಗಾರರು ಪ್ರಯಾಣ ಮಾಡಲು ಹಿಂದೇಟು ಹಾಕಬಹುದು’ ಎಂದು ಕ್ರೇಗ್‌ ಹೇಳಿದ್ದಾರೆ.

ಯುಎಸ್‌ ಓಪನ್‌ ಟೆನಿಸ್‌ ಟೂರ್ನಿ ಬಹುತೇಕ ರದ್ದು..!

ಕೊರೋನಾ ವೈರಸ್ ಜಗತ್ತಿನಾದ್ಯಂತ ಮರಣ ಮೃದಂಗವನ್ನೇ ಬಾರಿಸುತ್ತಿದೆ. 36 ಲಕ್ಷಕ್ಕೂ ಅಧಿಕ ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಎರಡುವರೆ ಲಕ್ಷ ಮಂದಿ ಕೊರೋನಾದಿಂದಾಗಿ ಮೃತಪಟ್ಟಿದ್ದಾರೆ. ಇದೇ ರೀತಿ ಕೊರೋನಾ ಮುಂದುವರೆದರೆ ವರ್ಷದ ಮೊದಲ ಗ್ರ್ಯಾಂಡ್‌ಸ್ಲಾಂ ಎನಿಸಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯು 2021ರಲ್ಲಿ ಬಹುತೇಕ ರದ್ದಾಗುವ ಸಾಧ್ಯತೆಯಿದೆ. ಈಗಾಗಲೇ ಪ್ರಸಕ್ತ ವರ್ಷದ ವಿಂಬಲ್ಡನ್ ಟೆನಿಸ್ ಟೂರ್ನಿ ರದ್ದಾಗಿದೆ. ಇನ್ನು ಯುಎಸ್ ಟೆನಿಸ್ ಟೂರ್ನಿ ಭವಿಷ್ಯ ಜೂನ್‌ನಲ್ಲಿ ನಿರ್ಧಾರವಾಗಲಿದೆ ಎನ್ನಲಾಗಿದೆ. ಮೇ-ಜೂನ್ ವೇಳೆ ನಡೆಯಬೇಕಿದ್ದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯನ್ನು ಸೆಪ್ಟೆಂಬರ್‌ 20ರಿಂದ ಅಕ್ಟೋಬರ್ 04ರವರೆಗೆ ನಡೆಸಲು ಆಯೋಜಿಸಲಾಗಿದೆ. 

ಆಸ್ಟ್ರೇಲಿಯಾದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಏಳು ಸಾವಿರದ ಗಡಿದಾಟಿಲ್ಲ. ಈ ಪೈಕಿ ಒಂದು ಸಾವಿರ ಮಂದಿ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದಾರೆ, ಇದರ ಹೊರತಾಗಿಯೂ ಆಸ್ಟ್ರೇಲಿಯಾದಲ್ಲಿ 96 ಜನ ಕೊರೋನಾದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಇನ್ನು ಇದೇ ವರ್ಷ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೂ ಆಸ್ಟ್ರೇಲಿಯಾ ಆತಿಥ್ಯವನ್ನು ವಹಿಸಿದೆ. ಆದರೆ ಚುಟುಕು ವಿಶ್ವಕಪ್ ಟೂರ್ನಿ ನಡೆಯುವುದು ಸಾಕಷ್ಟು ಅನುಮಾನ ಎನಿಸಿದೆ.