Asianet Suvarna News Asianet Suvarna News

ಉತ್ತರ ಕನ್ನಡ: ಕಾರವಾದಲ್ಲಿ ಜಿಲ್ಲಾ ಕ್ರೀಡಾಂಗಣವೇ ಇಲ್ಲ, ಸಂಕಷ್ಟದಲ್ಲಿ ಕ್ರೀಡಾಪಟುಗಳು..!

ಕಾರವಾರ ಹೇಳಿಕೊಳ್ಳೋದಕ್ಕೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ. ಪ್ರಸಿದ್ಧ ಪ್ರವಾಸಿ ತಾಣಗಳಲ್ಲೂ ಗುರುತಿಸಿಕೊಂಡಿರುವ ತಾಲೂಕು. ಆದರೆ ಇಲ್ಲಿ ಒಂದೇ ಒಂದು ಸುಸಜ್ಜಿತ ಕ್ರೀಡಾಂಗಣ ಮಾತ್ರ ಈ ವರೆಗೆ ನಿರ್ಮಾಣ ಮಾಡಿಲ್ಲ. 

Athletes Faces Problems Not Have District Stadium at Karwar grg
Author
Bengaluru, First Published Aug 25, 2022, 11:30 PM IST

ವರದಿ: ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ(ಆ.25): ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಕ್ರೀಡಾಂಗಣ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶ. ಆದರೆ, ಉತ್ತರ ಕನ್ನಡದ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣವೇ ಈವರೆಗೆ ನಿರ್ಮಾಣವಾಗಿಲ್ಲ. ಕಾರವಾರದಲ್ಲಿರುವ ಮಾಲಾದೇವಿ ಮೈದಾನವನ್ನೇ ಎಲ್ಲಾ ಕ್ರೀಡಾಕೂಟಗಳಿಗೆ, ಕ್ರೀಡಾಳುಗಳ ತರಬೇತಿಗೆ ಬಳಕೆ ಮಾಡಲಾಗುತ್ತಿದೆ. ಇದೀಗ ಮಳೆಯಿಂದಾಗಿ ಮೈದಾನ ಕೆಸರುಗದ್ದೆಯಂತಾಗಿದ್ದು, ಇಲ್ಲೇ ಅನಿವಾರ್ಯವಾಗಿ ಕ್ರೀಡಾಕೂಟಗಳನ್ನು ಆಯೋಜಿಸುವ ಪರಿಸ್ಥಿತಿ ಶಾಲಾ- ಕಾಲೇಜುಗಳದ್ದಾದರೆ, ಇದರಲ್ಲೇ ಆಟವಾಡಿ ಬಿದ್ದು ಗಾಯಗೊಳ್ಳುವ ದಯನೀಯತೆ ವಿದ್ಯಾರ್ಥಿಗಳದ್ದು. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಹೌದು, ಕಾರವಾರ ಹೇಳಿಕೊಳ್ಳೋದಕ್ಕೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ. ಪ್ರಸಿದ್ಧ ಪ್ರವಾಸಿ ತಾಣಗಳಲ್ಲೂ ಗುರುತಿಸಿಕೊಂಡಿರುವ ತಾಲೂಕು. ಆದರೆ ಇಲ್ಲಿ ಒಂದೇ ಒಂದು ಸುಸಜ್ಜಿತ ಕ್ರೀಡಾಂಗಣ ಮಾತ್ರ ಈ ವರೆಗೆ ನಿರ್ಮಾಣ ಮಾಡಿಲ್ಲ. ಜಿಲ್ಲಾ ಮಟ್ಟದ ಕ್ರೀಡೆಗಳನ್ನು ನಡೆಸಲು ಜಿಲ್ಲಾ ಕ್ರೀಡಾಂಗಣ‌ ಕೂಡಾ ಇಲ್ಲವಾಗಿದೆ. ಇಲ್ಲಿರೋ ಮಾಲಾದೇವಿ ಮೈದಾನವನ್ನೇ ಎಲ್ಲದಕ್ಕೂ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಪ್ರತಿ ವರ್ಷದ ಮಳೆಗಾಲದಲ್ಲಿ ಮೈದಾನದಲ್ಲಿ ನೀರು ನಿಂತು ಕೆಸರುಗದ್ದೆಯಂತಾಗಿ ಮಾರ್ಪಡುತ್ತದೆ. ಇದರಿಂದಾಗಿ ಕ್ರೀಡಾಪಟುಗಳಿಗೆ ಸರಿಯಾಗಿ ಕ್ರೀಡಾ ತರಬೇತಿ ಪಡೆಯಲು ಇಲ್ಲಿ ಸಾಧ್ಯವಾಗುತ್ತಿಲ್ಲ. ಯಾವುದೇ ಕ್ರೀಡಾಕೂಟಗಳನ್ನು ಆಯೋಜಿದ ವೇಳೆ ಭಾಗವಹಿಸಲು ಕೂಡಾ‌ ಕ್ರೀಡಾಪಟು ಆತಂಕಪಡುವ ಪರಿಸ್ಥಿತಿ ಇದೆ. ಸದ್ಯ ಇದೇ ಮಾಲಾದೇವಿ ಮೈದಾನದಲ್ಲಿ  ಕಾರವಾರ ತಾಲೂಕು ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟ ನಡೆದಿದ್ದು, ಕೆಸರುಗದ್ದೆಯಲ್ಲಿ ಸ್ಪರ್ಧಿಗಳು ಭಾಗವಹಿಸಿ ಗಾಯಗೊಂಡಿದ್ದಾರೆ. ಶಿಕ್ಷಕರಿಗೂ ಬೇರೆ ದಾರಿಯಿಲ್ಲದೇ ಈ ಮೈದಾನದಲ್ಲಿ ಕ್ರೀಡಾಕೂಟ ಆಯೋಜಿಸುವುದು ಅನಿವಾರ್ಯವಾಗಿದ್ದು, ವಿದ್ಯಾರ್ಥಿಗಳು ಮಾತ್ರ ಕ್ರೀಡಾ ಸಾಧನೆಯ ಕನಸುಗಳಲ್ಲಿ ಈ ಮೈದಾನದಲ್ಲಿ ಬಿದ್ದು ಗಾಯಗೊಳ್ಳುವಂತಾಗಿದೆ ಅಂತ ವಿದ್ಯಾರ್ಥಿ ಗಣೇಶ್ ತಿಳಿಸಿದ್ದಾರೆ. 

Asia Cup 2022 ಬಾಬರ್ ಅಜಂ ಬಳಿಕ ಪಾಕ್ ಲೆಜೆಂಡ್ ಮೊಹಮ್ಮದ್ ಯೂಸುಫ್‌ ಮಾತಾಡಿಸಿದ ವಿರಾಟ್ ಕೊಹ್ಲಿ..!

ಇನ್ನು ಕಳೆದ ಹಲವು ವರ್ಷಗಳಿಂದ ಕಾರವಾರದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಬೇಕು ಎಂದು ಪ್ರಯತ್ನ ನಡೆಸಲಾಗಿತ್ತು. ಈ ವರ್ಷದ ಏಪ್ರಿಲ್ ತಿಂಗಳಲ್ಲಿ  ಮಾಲಾದೇವಿ ಮೈದಾನದ ಅಭಿವೃದ್ಧಿಗೆ ಶಂಕುಸ್ಥಾಪನೆ ಮಾಡಲಾಗಿದ್ದು, ನಾಲ್ಕು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಕೂಡಾ ಕ್ರೀಡಾಕೂಟಗಳನ್ನು ಆಯೋಜಿಸಲು, ಕ್ರೀಡಾ ತರಬೇತಿಗೆ ಅಡ್ಡಿಯಾಗಿದ್ದು ಇದರ ನಡುವೆಯೇ ಕ್ರೀಡಾಕೂಟ ನಡೆಸಲಾಗುತ್ತಿದೆ. ಮೈದಾನದ ಅಭಿವೃದ್ಧಿ ಕಾಮಗಾರಿ ಕೂಡಾ ನಿಧಾನಗತಿಯಲ್ಲೇ ಸಾಗುತ್ತಿದ್ದು, ಮೈದಾನದ ಅಭಿವೃದ್ಧಿಗೆ ಇನ್ನಷ್ಟು ವೇಗ ನೀಡಬೇಕಿದೆ ಎಂಬುದು ಇಲ್ಲಿನ ಸ್ಥಳೀಯರ ಯುವಕರ ಅಭಿಪ್ರಾಯ.

ಒಟ್ಟಿನಲ್ಲಿ ಕಾರವಾರದಲ್ಲಿ ಈ ಹಿಂದೆ ಹಲವು ಬಾರಿ ಕ್ರೀಡಾಂಗಣ ನಿರ್ಮಿಸಬೇಕು ಸಾಕಷ್ಟು ಜನರು ಆಗ್ರಹಿಸಿದ್ದರು. ಆದರೆ, ಜಾಗದ ಕೊರತೆ ಇರುವುದರಿಂದ ಈವರೆಗೆ ದೊಡ್ಡ ಕ್ರೀಡಾಂಗಣ ಮಾತ್ರ ಆಗಿಲ್ಲ. ಇದರ ನಡುವೆ ಇದ್ದ ಮೈದಾನದವನ್ನೂ ಅಭಿವೃದ್ಧಿಪಡಿಸಲು ದಶಕಗಳೇ ಬೇಕಾಗಿರುವುದು ಮಾತ್ರ ವಿಪರ್ಯಾಸದ ಸಂಗತಿ. ಸಾವಿರಾರು ಕನಸುಗಳನ್ನು ಕಟ್ಟಿಕೊಂಡು ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಪಟುಗಳಾಗಬೇಕೆಂಬ ಹೆಬ್ಬಯಕೆ ಹೊಂದಿರುವ ಯುವಜನತೆಗೆ ಇಲ್ಲಿನ ವ್ಯವಸ್ಥೆಗಳೇ ಮುಳುವಾಗಿರುವುದರಲ್ಲಿ ಎರಡು ಮಾತಿಲ್ಲ.
 

Follow Us:
Download App:
  • android
  • ios